ಹಿರಿಯರಿಗೆ ದಾರಿತೋರಿದ ಮಕ್ಕಳು

ಮಕ್ಕಳ ಗ್ರಾಮಸಭೆಯಲ್ಲಿ ವೀಕ್ಷಕರಾಗಿ ಪಾಲ್ಗೊಂಡ ಅಜೀಂ ಪ್ರೇಮ್‍ಜಿ
 ಪ್ರತಿಷ್ಠಾನದ ಕಿಶೋರ್ ಅತ್ತಾವರ ಮಾತನಾಡಿದರು.
ಮರವಂತೆ: ಗ್ರಾಮಸಭೆ ಕಾಟಾಚಾರದಂತೆ ನಡೆಯುತ್ತದೆ; ಗ್ರಾಮಸಭೆಗೆ ಮತದಾರರು ಬರುವುದಿಲ್ಲ; ಅಲ್ಲಿ ಗ್ರಾಮದ ಅಭಿವೃದ್ಧಿ, ಸಮಸ್ಯೆ, ಪರಿಹಾರಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯುವುದಿಲ್ಲ; ಆರೋಪ ಪ್ರತ್ಯಾರೋಪಗಳಿಂದ ಸಭೆ ಗೊಂದಲದ ಗೂಡಾಗುತ್ತದೆ; ಕ್ಷುಲ್ಲಕ ವಿಷಯವೂ ವಿಕೋಪಕ್ಕೆ ತಿರುಗಿ ಗಲಭೆ ನಡೆದು ಸಭೆ ರದ್ದಾಗುತ್ತದೆ ಎಂಬೆಲ್ಲ ಅಪವಾದಗಳಿರುವುದು ಗ್ರಾಮ ಪಂಚಾಯತ್‍ಗಳು ವರ್ಷದಲ್ಲಿ ಎರಡು ಬಾರಿ ನಡೆಸುವ ಗ್ರಾಮಸಭೆಗಳ ಬಗೆಗೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಕ್ಕಳು ಮಾದರಿ ಗ್ರಾಮಸಭೆ ನಡೆಸಿ ಹಿರಿಯರಿಗೆ ದಾರಿ ತೋರುತ್ತಿರುವ ವರದಿ ವಿವಿಧೆಡೆಯಿಂದ ಬರುತ್ತಿವೆ. ಅಂತಹ ಒಂದು ಮಕ್ಕಳ ಗ್ರಾಮಸಭೆ ಸೋಮವಾರ ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ನಡೆಯಿತು. 
       ಮರವಂತೆಯ ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ 250 ಮಕ್ಕಳು 'ಮಕ್ಕಳು ಇಂದೇ ಪ್ರಜೆಗಳು', 'ನಮಗೂ ಒಂದು ಅವಕಾಶ ಕೊಡಿ', 'ಮಕ್ಕಳ ಹಕ್ಕುಗಳನ್ನು ಮನ್ನಿಸಿ' ಇತ್ಯಾದಿ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಭಾಸ್ಥಳಕ್ಕೆ ಬಂದರು. ಗ್ರಾಮ ಪಂಚಾಯಿತಿ ಒದಗಿಸಿದ 
ಉಪಾಹಾರ ಸ್ವೀಕರಿಸಿ ಸಭೆಸೇರಿದರು.
     ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ ಸಭೆಯ ಅಧ್ಯಕ್ಷತೆ ವಹಿಸಿದರೆ, ಮಕ್ಕಳ ಪ್ರತಿನಿಧಿಗಳು ಅವರೊಂದಿಗೆ ಆಸೀನರಾದರು. ಅಭಿವೃದ್ಧಿ ಅಧಿಕಾರಿ ಎನ್. ರಂಗನಾಥ ಸ್ವಾಗತ ಕೋರಿದರು.ಮಜಿ ಅಧ್ಯಕ್ಷ ಎಸ್. ಜನಾರ್ದನ ಪ್ರಸ್ತಾವಿಕ ನುಡಿಗಳನ್ನಾಡಿ ಮಕ್ಕಳ ಗ್ರಾಮಸಭೆಯ ಔಚಿತ್ಯವನ್ನು ವಿವರಿಸಿದರು. ಬಿಲ್ ಕಲೆಕ್ಟರ್ ಶೇಖರ ಎಂ. ಹಿಂದಿನ ಮಕ್ಕಳ ಗ್ರಾಮಸಭೆಯ ನಡಾವಳಿಗಳನ್ನು ಓದಿದರು. ವಿದ್ಯಾರ್ಥಿ ಅಜಿತ್ ಕಳೆದ ಮಕ್ಕಳ ಗ್ರಾಮಸಭೆಯ ಬೇಡಿಕೆಗಳಲ್ಲಿ ಈಡೇರಿದವುಗಳ ವಿವರ ನೀಡಿ ಪಂಚಾಯತ್‍ಗೆ ಕೃತಜ್ಞತೆ ಸಲ್ಲಿಸಿದರು. ಆಕಾಂಕ್ಷಾ, ನಾಗಜ್ಯೋತಿ, ರಿಂಕು, ರಕ್ಷಿತಾ, ಅನೀಶ್, ಸಂಧ್ಯಾ, ಅರ್ಶಿತಾ, ಸ್ಕಂದ ಮಧ್ಯಸ್ಥ ತಮ್ಮ ಶಾಲೆಗಳ ಮಾಹಿತಿ ಮತ್ತು ಕೊರತೆಗಳನ್ನು ವಿವರಿಸಿದರು. ಆ ಬಳಿಕ ಪ್ರದೇಶವಾರು ಅಧ್ಯಯನದ ಮೂಲಕ ಕಂಡುಕೊಂಡ ಊರಿನ ಅಗತ್ಯಗಳ ಪಟ್ಟಿಯಿರುವ ಪೆಟ್ಟಿಗೆಯನ್ನು ಅಧ್ಯಕ್ಷೆ ಹಾಗೂ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಿದರು. 
    ಪ್ರೌಢಶಾಲೆಯ ಶಿಕ್ಷಕ ಸುರೇಶ ಗೌಡ ಪಾಟೀಲ ಶಿಕ್ಷಕರ ಪರವಾಗಿ ಮಾತನಾಡಿ ಮಕ್ಕಳ ಗ್ರಾಮಸಭೆ ಮಕ್ಕಳಿಗೆ ಭಾಗವಹಿಸುವ, ವಿಚಾರ ಮಂಡಿಸುವ, ಚರ್ಚೆ ನಡೆಸುವ ಕೌಶಲ ನೀಡುತ್ತದೆ. ಅದರಿಂದ ಪ್ರಜಾತಂತ್ರದ ಪಾಠ ದೊರೆಯುತ್ತದೆ ಎಂದು ಹೇಳಿದರು. ಅಧ್ಯಕ್ಷರು ತಮ್ಮ ಭಾಷಣದಲ್ಲಿ ಮಕ್ಕಳ ಬೇಡಿಕೆಗಳನ್ನು ಪಂಚಾಯತ್‍ನ ಸಂಪನ್ಮೂಲ ಲಭ್ಯತೆ ಆಧರಿಸಿ ಆದ್ಯತಾನುಸಾರ ಈಡೇರಿಸುವ ಭರವಸೆಯಿತ್ತರು. 
    ವಿಶೇಷ ಸಂದರ್ಶಕರಾಗಿ ಬಂದಿದ್ದ ಬೆಂಗಳೂರಿನ ಅಜೀಂ ಪ್ರೇಮ್‍ಜಿ ಪ್ರತಿಷ್ಠಾನದ ಪ್ರಾಥಮಿಕ ಶಿಕ್ಷಣ ವಿಭಾಗದ ಸಂಯೋಜಕ ಕಿಶೋರ್ ಅತ್ತಾವರ ಸಭೆಯಲ್ಲಿನ ಮಕ್ಕಳ ನಿರ್ವಹಣೆ ಉತ್ತಮವಾಗಿತ್ತು. ಇಲ್ಲಿನ ಮಾದರಿಯನ್ನು ತಾವು ಕೆಲಸಮಾಡುತ್ತಿರುವ ರಾಜ್ಯದ ಈಶಾನ್ಯ ಜಿಲ್ಲೆಗಳಲ್ಲಿ ಅನುಸರಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು. ಪಂಚಾಯತ್ ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ ವಂದನೆ ಸಲ್ಲಿಸಿದರು. ಸಿಡಬ್ಲ್ಯೂಸಿಯ ಶಾರದಾ, ಅಜೀಂ ಪ್ರೇಮ್‍ಜಿ ಪ್ರತಿಷ್ಠಾನದ ರಮಾನಂದ, ಗುರುನಾಥ್, ಎಫ್‍ಎಸ್‍ಎಲ್ ಸಂಸ್ಥೆಯ ಆಸ್ಟಿನ್ ಉಪಸ್ಥಿತರಿದ್ದರು.
     ಸಭೆಯ ಬಳಿಕ ಮಕ್ಕಳು ಗ್ರಾಮ ಪಂಚಾಯತ್ ಎದುರಿನ ಮರಕ್ಕೆ ಕೆಂಪು ಮತ್ತು ಬಿಳಿಪಟ್ಟಿಗಳನ್ನು ಕಟ್ಟುವ ಮೂಲಕ ತಮ್ಮ ಬೇಡಿಕೆ ಮತ್ತು ಈಡೇರಿರುವ ಬೇಡಿಕೆಗಳನ್ನು ಸಂಕೇತಿಸಿದರು.
ಮೆರವಣಿಗೆಯಲ್ಲಿ ಮಕ್ಕಳ ಗ್ರಾಮಸಭೆಗೆ ಬಂದ ಮಕ್ಕಳು

ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ ಮತ್ತು ಅಭಿವೃದ್ಧಿ ಅಧಿಕಾರಿ ಎನ್. ರಂಗನಾಥ ಮಕ್ಕಳ ಅಹವಾಲುಗಳ ಪೆಟ್ಟಿಗೆ ಸ್ವೀಕರಿಸಿದರುಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com