5 ಟಿ ಮತ್ತು ಕಾಮನಬಿಲ್ಲುಗಳ ಮೋದಿ ಕನಸಿನ ಭಾರತ

ಹೊಸದಿಲ್ಲಿ: ರಾಜಕಾರಣಿಗಳ ಪರಸ್ಪರ ಕಚ್ಚಾಟ, ಟೀಕೆ, ವಾಗ್ಧಾಳಿಗಳನ್ನೇ ಕೇಳಿ ಕೇಳಿ ಬೇಸರಗೊಂಡಿದ್ದ ದೇಶದ ಜನತೆಗೆ ರವಿವಾರ ಹೊಸ ವಿಷಯಗಳನ್ನು ಕೇಳುವ ಯೋಗ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ತನ್ನ ಕನಸಿನ ಭಾರತ ಹೇಗಿರಬೇಕು, ಈ ಕನಸು ನನಸಾಗಲು ಏನೇನು ಮಾಡಬೇಕು ಎಂಬ ಬಗ್ಗೆ ವಿಸ್ತಾರವಾಗಿ ಭಾಷಣ ಮಾಡಿದ್ದಾರೆ. ದೇಶ ಅಭಿವೃದ್ಧಿ ಹೊಂದಲು ಕಾಮನಬಿಲ್ಲಿನಲ್ಲಿರುವ 7 ಬಣ್ಣಗಳ ರೀತಿ 7 ನಿಯಮಗಳು ಮತ್ತು ಬ್ರ್ಯಾಂಡ್‌ ಭಾರತ ನಿರ್ಮಾಣಕ್ಕೆ ಐದು "ಟಿ' ಸೂತ್ರಗಳನ್ನು ಮೋದಿ ಘೋಷಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯನ್ನುದ್ದೇಶಿಸಿ ದಿಲ್ಲಿಯಲ್ಲಿ ರವಿವಾರ ಬರೋಬ್ಬರಿ 75 ನಿಮಿಷಗಳ ಕಾಲ ಭಾಷಣ ಮಾಡಿದ ಮೋದಿ ಅವರು ಭಾರತದ ಚಿತ್ರಣವನ್ನು ಹೇಗೆ ಬದಲಿಸಬಹುದು ಎಂಬ ಬಗ್ಗೆ ತನ್ನ ದೂರದರ್ಶಿತ್ವವನ್ನು ಹೊರಹಾಕಿದರು. ಮಧ್ಯೆ ಮಧ್ಯೆ ಕಾಂಗ್ರೆಸ್‌, ರಾಹುಲ್‌ ಗಾಂಧಿ, ಮನಮೋಹನ್‌ ಸಿಂಗ್‌ ಅವರನ್ನು ಟೀಕಿಸುತ್ತಾ ಅಭಿವೃದ್ಧಿ ಮಂತ್ರವನ್ನೂ ಜಪಿಸಿದರು.

 ಪ್ರತಿ ರಾಜ್ಯದಲ್ಲಿ ಐಐಎಂ, ಐಐಟಿ, ಏಮ್ಸ್‌ ಆಸ್ಪತ್ರೆ, ದೇಶದಲ್ಲಿ 100 ಸ್ಮಾರ್ಟ್‌ ಸಿಟಿ ಸ್ಥಾಪನೆ, ದೇಶದ ನಾಲ್ಕು ಮೂಲೆಗಳನ್ನು ಬೆಸೆಯಲು ಸುವರ್ಣ ಚತುಷ್ಪಥ ಬುಲೆಟ್‌ ರೈಲು ಮಾರ್ಗ, ಜನರಿಗೆ ಉದ್ಯೋಗಾವಕಾಶ, ಕೌಶಲ ಅಭಿವೃದ್ಧಿ, ರೈತರ ಏಳಿಗೆ ಮತ್ತಿತರ ಯೋಜನೆಗಳನ್ನು ಪ್ರಕಟಿಸಿದರು.

"ಟಿ' ಸೂತ್ರ, 7 ಕಾಮನಬಿಲ್ಲು

"ಟೀ' ವ್ಯಾಪಾರಿ ಎಂದು ಕಾಂಗ್ರೆಸಿಗ ಮಣಿಶಂಕರ ಅಯ್ಯರ್‌ ಹೀಯಾಳಿಸಿದ ಬೆನ್ನಲ್ಲೇ ಐದು "ಟಿ'ಗಳನ್ನಿಟ್ಟುಕೊಂಡು "ಬ್ರ್ಯಾಂಡ್‌ ಇಂಡಿಯಾ' ನಿರ್ಮಿಸುವ ಬಯಕೆಯನ್ನು ಮೋದಿ ವ್ಯಕ್ತಪಡಿಸಿದರು. ಅವರ ಪ್ರಕಾರ ಐದು "ಟಿ'ಗಳೆಂದರೆ- ಟ್ಯಾಲೆಂಟ್‌ (ಪ್ರತಿಭೆ), ಟ್ರೆಡಿಷನ್‌ (ಸಂಪ್ರದಾಯ), ಟೂರಿಸಂ (ಪ್ರವಾಸೋದ್ಯಮ), ಟ್ರೇಡ್‌ (ವ್ಯಾಪಾರ), ಟೆಕ್ನಾಲಜಿ (ತಂತ್ರಜ್ಞಾನ).

ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತದ ಮಾದರಿಯನ್ನು ತೋರಿಸಿಕೊಡುವುದಾಗಿ ಹೇಳಿದ ಮೋದಿ, ಇದಕ್ಕಾಗಿ ಏಳು ಬಣ್ಣದ ಕಾಮನಬಿಲ್ಲನ್ನು ಉದಾಹರಣೆಯಾಗಿ ನೀಡಿದರು. ಅವರ ಪ್ರಕಾರ ಕಾಮನಬಿಲ್ಲಿನ ಏಳು ಬಣ್ಣಗಳೆಂದರೆ- ದೇಶದ ಸಂಸ್ಕೃತಿ, ಕೃಷಿ, ಸ್ತ್ರೀಶಕ್ತಿ, ನೈಸರ್ಗಿಕ ಸಂಪನ್ಮೂಲ (ನೆಲ, ಜಲ, ಅರಣ್ಯ ಹಾಗೂ ಪರಿಸರ),

ಯುವಶಕ್ತಿ, ಪ್ರಜಾಪ್ರಭುತ್ವ ಹಾಗೂ ಜ್ಞಾನ.

ವಾಗ್ಧಾನ: ಇದಲ್ಲದೆ, ಯುಪಿಎಗೆ ಕಂಟಕ ವಾಗಿರುವ ಬೆಲೆ ಏರಿಕೆ ನಿಯಂತ್ರಣಕ್ಕೆ ಬೆಲೆ ಸ್ಥಿರೀಕರಣ ಆಯೋಗ ರಚಿಸಿ, ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದಾಗ ಸರ್ಕಾರವೇ ಮಧ್ಯಪ್ರವೇಶಿಸಿ ಶ್ರೀಸಾಮಾನ್ಯನನ್ನು ಪಾರು ಮಾಡುವ ವ್ಯವಸ್ಥೆ ಜಾರಿಗೊಳಿಸುವ ವಾಗ್ಧಾನವನ್ನೂ ಮಾಡಿದರು. ಇದಲ್ಲದೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕನಸಿನ ನದಿ ಜೋಡಣೆ, ವರಿಷ್ಠ ನಾಯಕ ಎಲ್‌.ಕೆ. ಅಡ್ವಾಣಿ ಮಹದಾಸೆಯ ಕಪ್ಪು ಹಣ ವಾಪಸ್‌ ತರಲು ಕ್ರಮ ಕೈಗೊಳ್ಳುವುದೂ ಸೇರಿದಂತೆ ಹತ್ತಾರು ಭರವಸೆಗಳನ್ನು ನೀಡಿದರು.

ಪ್ರಧಾನಿ ಅಭ್ಯರ್ಥಿ ಘೋಷಿಸದ "ಕೈ'ಗೆ ತಿವಿತ: ಸೋಲು ಖಚಿತ ಎಂಬುದು ಗೊತ್ತಾದ ಮೇಲೂ ಯಾವ ತಾಯಿ ತಾನೆ ತನ್ನ ಮಗನನ್ನು ರಾಜಕೀಯ ವಾಗಿ ಬಲಿ ಕೊಡಲು ಬಯಸುತ್ತಾಳೆ? ತಾಯಿಯ (ಸೋನಿಯಾ) ಹೃದಯ ಮಗನನ್ನು ರಕ್ಷಿಸುವ ಕೆಲಸ ಮಾಡಿದೆ. ಹೀಗಾಗಿಯೇ ಕಾಂಗ್ರೆಸ್‌ ಪಕ್ಷ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿಕೊಂಡಿಲ್ಲ ಎಂದು ಲೇವಡಿ ಮಾಡಿದರು.

ಹಿಂದುಳಿದ ವರ್ಗದಿಂದ ಬಂದ ಚಹಾ ವ್ಯಾಪಾರಿ ಜತೆ ಸ್ಪರ್ಧಿಸುವುದು ತಮ್ಮ ಗೌರವಕ್ಕಿಂತ ಕೆಳಗಿನದ್ದು ಎಂಬ ಜೀತಪದ್ಧತಿಯ ಮನೋಭಾವ ಶ್ರೀಮಂತ ಕುಟುಂಬದಲ್ಲಿ ಜನಿಸಿದವರಿಗೆ ಇದೆ ಎಂದು ರಾಹುಲ್‌ ಹೆಸರೆತ್ತದೆ ಮಾತಿನಲ್ಲೇ ತಿವಿದರು. ಪ್ರಧಾನಿ ಅಭ್ಯರ್ಥಿ ಕಾಣುವ ನಿರೀಕ್ಷೆಯೊಂದಿಗೆ ಕಾಂಗ್ರೆಸಿಗರು ದಿಲ್ಲಿಗೆ ಬಂದರೆ, ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಕೊಟ್ಟು ಕಳುಹಿಸಲಾಗಿದೆ ಎಂದು ವ್ಯಂಗ್ಯವಾಡಿದರು.

ಚುನಾವಣೆಗೂ ಮೊದಲೇ ಪ್ರಧಾನಿ ಅಭ್ಯರ್ಥಿ ಘೋಷಿಸುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿ ಇಲ್ಲ ಎಂಬ ಹೇಳಿಕೆಯನ್ನೂ ತರಾಟೆಗೆ ತಗೆದುಕೊಂಡ ಅವರು, 1984ರಲ್ಲಿ ಇಂದಿರಾ ಗಾಂಧಿ ಅವರು ಹತ್ಯೆಯಾದ ಕೂಡಲೇ ರಾಜೀವ್‌ ಗಾಂಧಿ ಅವರನ್ನು ಪ್ರಧಾನಿ ಎಂದು ಘೋಷಿಸಲಾಗಿತ್ತು. ಕೇವಲ ನಾಲ್ಕು ಮಂದಿ ಈ ತೀರ್ಮಾನ ತೆಗೆದುಕೊಂಡಿದ್ದರು ಎಂಬುದನ್ನು ನೆನಪಿಸಿಕೊಡುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಟಾಂಗ್‌ ನೀಡಿದರು.

2004ರಲ್ಲಿ ಕಾಂಗ್ರೆಸ್‌ ಸಂಸದರೆಲ್ಲಾ ಸೇರಿ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಆದರೆ ಸೋನಿಯಾ ಅವರು ಮನಮೋಹನ ಸಿಂಗ್‌ ಅವರನ್ನು ಪ್ರಧಾನಿ ಹುದ್ದೆಗೆ ಏಕಪಕ್ಷೀಯವಾಗಿ ನಾಮನಿರ್ದೇಶನ ಮಾಡಿದ್ದರು ಎಂದು ತರಾಟೆಗೆ ತೆಗೆದುಕೊಂಡರು.

ಯುಪಿಎ ವಿರುದ್ಧ ವಾಗ್ಧಾಳಿ

ಕಳೆದೊಂದು ದಶಕದಲ್ಲಿ ಕಂಡಂತಹ ಕರಾಳ ದಿನಗಳನ್ನು ಈ ದೇಶ ಎಂದೂ ನೋಡಿರಲಿಲ್ಲ. ಯುಪಿಎ ಅವಧಿಯಲ್ಲಿ ಭ್ರಷ್ಟಾಚಾರ, ಹಣದುಬ್ಬರ ತುತ್ತತುದಿಗೆ ತಲುಪಿದ್ದರೆ, ಎಲ್ಲೆಡೆ ಬಡತನವಿದೆ ಎಂದು ಹೇಳಿದರು.

ಕಾಂಗ್ರೆಸ್‌ ಪಿಎಂ ಅಭ್ಯರ್ಥಿ ಘೋಷಿಸಲಿಲ್ಲ ಏಕೆಂದರೆ....

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಗುತ್ತದೆ. ಪಕ್ಷ ಸೋಲುತ್ತದೆ ಎಂದ ಮೇಲೆ ಯಾವ ತಾಯಿಯೂ ಮಗನನ್ನು ಬಲಿ ಕೊಡುವುದಿಲ್ಲ. ಹೀಗಾಗಿಯೇ ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿಯೆಂದು ರಾಹುಲ್‌ರನ್ನು ಸೋನಿಯಾ ಘೋಷಿಸಲಿಲ್ಲ.

ಮೋದಿ ಹೇಳಿದ  5 "ಟಿ'ಗಳು

"ಟೀ' ವ್ಯಾಪಾರಿ ಎಂದು ಕಾಂಗ್ರೆಸಿಗ ಮಣಿಶಂಕರ ಅಯ್ಯರ್‌ ಹೀಯಾಳಿಸಿದ ಬೆನ್ನಲ್ಲೇ ಐದು "ಟಿ'ಗಳ ಬಗ್ಗೆ ನರೇಂದ್ರ ಮೋದಿ ಪ್ರಸ್ತಾವಿಸಿದ್ದಾರೆ. ಜಾಗತಿಕವಾಗಿ ಸ್ಪರ್ಧಿಸಲು "ಬ್ರ್ಯಾಂಡ್‌ ಇಂಡಿಯಾ' ನಿರ್ಮಿಸುವ ಬಯಕೆ ವ್ಯಕ್ತಪಡಿಸಿರುವ ಮೋದಿ, ಐದು "ಟಿ'ಗಳ ಬಗ್ಗೆ ಗಮನಕೇಂದ್ರೀಕರಿಸಬೇಕು ಎಂದು ಹೇಳಿದರು.

1 ಟ್ಯಾಲೆಂಟ್‌ (ಪ್ರತಿಭೆ), 2 ಟ್ರೆಡಿಷನ್‌ (ಸಂಪ್ರದಾಯ), 3 ಟೂರಿಸಂ (ಪ್ರವಾಸೋದ್ಯಮ), 4 ಟ್ರೇಡ್‌ (ವ್ಯಾಪಾರ), 5 ಟೆಕ್ನಾಲಜಿ (ತಂತ್ರಜ್ಞಾನ).


ಮೋದಿ "ಕಾಮನಬಿಲ್ಲು'

ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತದ ಮಾದರಿಯನ್ನು ತೋರಿಸಿಕೊಡುವುದಾಗಿ ಹೇಳಿದ ಮೋದಿ, ಇದಕ್ಕಾಗಿ ಏಳು ಬಣ್ಣದ ಕಾಮನಬಿಲ್ಲನ್ನು ಉದಾಹರಣೆಯಾಗಿ ನೀಡಿದರು. ಒಂದೊಂದು ಬಣ್ಣಕ್ಕೂ ಒಂದೊಂದು ವಿಷಯವನ್ನು ಅವರು ಹೋಲಿಸಿದರು. ಕಾಮನ ಬಿಲ್ಲಿನ 7 ಸೂತ್ರಗಳು

1ದೇಶದ ಸಂಸ್ಕೃತಿ, 2 ಕೃಷಿ, 3ಸ್ತ್ರೀಶಕ್ತಿ, 4 ನೈಸರ್ಗಿಕ ಸಂಪನ್ಮೂಲ

(ನೆಲ, ಜಲ, ಅರಣ್ಯ ಹಾಗೂ ಪರಿಸರ), 5 ಯುವಶಕ್ತಿ, 6 ಪ್ರಜಾಪ್ರಭುತ್ವ  7 ಜ್ಞಾನ.

ಸುವರ್ಣ ಚತುಷ್ಪಥ ಬುಲೆಟ್‌ ರೈಲು

ವಾಜಪೇಯಿ ಸರಕಾರ ದೇಶದ ನಾಲ್ಕೂ ದಿಕ್ಕುಗಳನ್ನು ಸಂಪರ್ಕಿಸಲು ಸುವರ್ಣ ಚತುಷ್ಪಥ ರಸ್ತೆ ಯೋಜನೆಯನ್ನು ಅನುಷ್ಠಾನಿಸಿತ್ತು. ಈಗ ಅದೇ ಮಾದರಿಯನ್ನು ರೈಲ್ವೇ ಕ್ಷೇತ್ರದಲ್ಲೂ ಜಾರಿಗೆ ತರುವ ಉದ್ದೇಶವನ್ನು ಮೋದಿ ವ್ಯಕ್ತಪಡಿಸಿದ್ದಾರೆ. ವಾಜಪೇಯಿ ಅವರು ಸುವರ್ಣ ಚತುಷ್ಪಥ ರಸ್ತೆ ನಿರ್ಮಿಸಿದರು. ಸ್ವಾತಂತ್ರ್ಯ ವಜ್ರ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ಚತುಷ್ಪಥ ಬುಲೆಟ್‌ ರೈಲು ಮಾರ್ಗ ನಿರ್ಮಿಸುವ ಕಾಲ ಬಂದಿದೆ ಎಂದು ಮೋದಿ ತಿಳಿಸಿದರು.

ಕಾಂಗ್ರೆಸ್‌ ಏಟಿಗೆ  ಇದಿರೇಟು

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಇತರ ಕಾಂಗ್ರೆಸ್‌ ನಾಯಕರು ವಿವಿಧ ಸಂದರ್ಭಗಳಲ್ಲಿ ಮಾಡಿದ ಟೀಕೆಗಳಿಗೆ ಮೋದಿ ತಿರುಗೇಟು ನೀಡಿದ್ದು ಹೀಗೆ.

ರಾಹುಲ್‌: ಕಾಂಗ್ರೆಸ್‌ ಎಂಬುದೊಂದು ಚಿಂತನೆ. ಅದನ್ನು ಅಳಿಸಲು ಆಗದು.
ಮೋದಿ: ಅವರಿಗೆ ಪಕ್ಷದ ಬಗ್ಗೆಯೇ ಚಿಂತೆ. ನಮ್ಮ ಚಿಂತನೆ ದೇಶಕ್ಕೆ ಸಂಬಂಧಿಸಿದ್ದು.

ರಾಹುಲ್‌: ಹೃದಯದಲ್ಲಿ ಕಾಂಗ್ರೆಸ್‌ ಹೊಂದಿರುವವರಿಗೆ ಟಿಕೆಟ್‌ ನೀಡುತ್ತೇವೆ.
ಮೋದಿ: ಹೃದಯದಲ್ಲಿ ದೇಶ ಹೊಂದಿರುವವರಿಗೆ ಬಿಜೆಪಿ ಟಿಕೆಟ್‌ ನೀಡುತ್ತೇವೆ.

ರಾಹುಲ್‌: ಭಾರತ ಎಂಬುದು ಜೇನುಗೂಡು. ಬಡತನ ಎಂಬುದು ಮನಸ್ಥಿತಿ.

ಮೋದಿ: ನಮಗೆ ಭಾರತ ಎಂದರೆ ತಾಯಿ. ಬಡವರನ್ನು ದೇವರ ರೀತಿ ಕಾಣಬೇಕು ಎಂಬುದು ನಮ್ಮ ಭಾವನೆ.

ಪ್ರಧಾನಿ ಸಿಂಗ್‌: ದುಡ್ಡು ಮರದಲ್ಲಿ ಬೆಳೆಯುವುದಿಲ್ಲ

ಮೋದಿ: ಹೌದು ಮರದಲ್ಲಿ ಬೆಳೆಯಲ್ಲ. ದುಡ್ಡು ಮಣ್ಣಿನಲ್ಲಿ ಬೆಳೆಯುತ್ತದೆ. ಅದು ರೈತರ ಹೊಲ ಗದ್ದೆಗಳಲ್ಲಿ ಬೆಳೆಯುತ್ತದೆ. ಅಲ್ಲಿ ಹುಲುಸಾದ ಬೆಳೆ ಬರುವಂತೆ ಮಾಡುವುದು ನಮ್ಮ ಕೈಲಿದೆ.

ಕಾಂಗ್ರೆಸ್‌: ಬಡವರ ಬಗ್ಗೆ ಮಾತನಾಡದಿದ್ದರೆ ಮಜಾ ಬರೋದಿಲ್ಲ.

ಮೋದಿ: ನನಗೆ ಬಡವರ ಕಷ್ಟ ನೆನೆದರೆ ನಿದ್ದೆ ಬರುವುದಿಲ್ಲ. ಅವರು ನಾಮದಾರ್‌ (ಪ್ರಸಿದ್ಧರು), ನಾನು ಕಾಮದಾರ್‌ (ಕೆಲಸ ಮಾಡುವವನು).

ಕೃಪೆ: ಉದಯವಾಣಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com