ದೇರಳಕಟ್ಟೆ ಪ್ರಕರಣಕ್ಕೆ ಕೋಮು ಬಣ್ಣ ಬೇಡ

ಮಂಗಳೂರು: ದೇರಳಕಟ್ಟೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಅಪಹರಣ ಮತ್ತು ಗ್ಯಾಂಗ್‌ ರೇಪ್‌ ಪ್ರಕರಣವನ್ನು ಪ್ರಥಮವಾಗಿ ಕೈಗೆತ್ತಿಕೊಂಡದ್ದು ತಾವು ಎಂದು ಆಶಾ ನಾಯಕ್‌ (ವಕೀಲೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ) ಮತ್ತು ನರೇಂದ್ರ ನಾಯಕ್‌ (ಭಾರತೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ) ಅವರು ತಿಳಿಸಿದ್ದು, ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲವು ಸಂಘಟನೆಗಳು ಈ ಪ್ರಕರಣಕ್ಕೆ ಧರ್ಮದ ಲೇಪ ಹಚ್ಚಿ ರಾಜಕೀಯವಾಗಿ ಚುನಾವಣಾ ವಿಷಯವನ್ನಾಗಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಇದನ್ನು ಒಂದು ಕ್ರಿಮಿನಲ್‌ ಪ್ರಕರಣವಾಗಿ ಪರಿಗಣಿಸಬೇಕೇ ಹೊರತು ಕೋಮುವಾದೀಕರಣಗೊಳಿಸಿ ಎರಡು ಧಾರ್ಮಿಕ ಸಮುದಾಯಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿಸುವುದು ಸರಿಯಲ್ಲ ಮತ್ತು ಈ ಬೆಳವಣಿಗೆ ದುರದೃಷ್ಟಕರ ಎಂದವರು  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ನ‌ಮಗೆ ಬಂದ ಫೋನ್‌ ಕರೆ ಆಧಾರದಲ್ಲಿ ನಾವು ಈ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದ್ದೇವೆ. ಅವರಿಬ್ಬರ ಜಾತಿ, ಧರ್ಮವನ್ನು ವಿಚಾರಿಸಿ ನೆರವು ಒದಗಿಸಿದ್ದಲ್ಲ. ಸಹ ಮಾನವರೆಂಬ ನೆಲೆಯಲ್ಲಿ ವೈಯಕ್ತಿಕವಾಗಿ ನೆರವು ಒದಗಿಸಿದ್ದೇವೆ; ಯಾವುದೇ ಸಂಘಟನೆಯ ನೆಲೆಯಲ್ಲಿ ಅಲ್ಲ' ಎಂದು ವಿವರಿಸಿದರು.

ಪ್ರಕರಣವನ್ನು ಕೈಗೆತ್ತಿಕೊಂಡು ಅದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ದೂರು ನೀಡಲು ಮತ್ತು ಬಳಿಕ ಮುಂದಿನ ಕ್ರಮ ಜರಗಿಸಲು ಪೊಲೀಸರಿಗೆ ಸಹಕಾರ ನೀಡಿದ್ದೇವೆ. ಸಂತ್ರಸ್ತ ವಿದ್ಯಾರ್ಥಿನಿಗೆ ಈಗಲೂ ನೆರವಾಗುತ್ತಿದ್ದೇವೆ. ಪ್ರಕರಣ ಬೆಳಕಿಗೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇವೆ ಎಂದರು.

ವೈದ್ಯಕೀಯ ಪರೀಕ್ಷೆಗೆ ಆಕೆ ನಿರಾಕರಿಸಿದ್ದರಿಂದ ಆಕೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಿಲ್ಲ. ಆದರೆ ಆಕೆಯ ಜತೆಗಿದ್ದ ವಿದ್ಯಾರ್ಥಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಲಾಗಿದೆ. ಆತನ ಸ್ಥಿತಿ ಗತಿಯ ಬಗ್ಗೆ ಆಕೆಗೆ ಕಳಕಳಿ ಇದೆ. ಆಕೆಯ ಬಗ್ಗೆ ಆತನೂ ಕಾಳಜಿ ಹೊಂದಿದ್ದಾನೆ ಎಂದರು.

ವಿದ್ಯಾರ್ಥಿಯ ಮೇಲೆ ಸಂಶಯ ವ್ಯಕ್ತ ಪಡಿಸಿ ಅನಾವಶ್ಯಕವಾಗಿ ಆರೋಪ ಹೊರಿಸಿ ಹೇಳಿಕೆ ನೀಡುವುದು ಸರಿಯಲ್ಲ . ಪೊಲೀಸರು ಯಾವುದೇ ಲೋಪ ಎಸಗಿಲ್ಲ; ಪ್ರಾರಂಭದಲ್ಲಿ ಮಾನ ಭಂಗ ಪ್ರಕರಣ ದಾಖಲಿಸಿದ್ದು, ಬಳಿಕ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ನಮ್ಮ ಸಲಹೆಯಂತೆ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ರಾಜಕೀಯ ಒತ್ತಡದಿಂದ ಇದನ್ನು ದಾಖಲಿಸಿದ್ದಲ್ಲ ಎಂದರು.

'ಬುದ್ಧಿ ಜೀವಿಗಳೆನಿಸಿದವರು ಈಗೆಲ್ಲಿದ್ದಾರೆ; ಯಾಕೆ ಮಾತನಾಡುತ್ತಿಲ್ಲ ಎಂಬುದಾಗಿ ಪ್ರಶ್ನಿಸುವವರು ಈ ಪ್ರಕರಣವನ್ನು ಪ್ರಥಮವಾಗಿ ಕೈಗೆತ್ತಿಕೊಂಡವರೇ ನಾವು ಎನ್ನುವುದನ್ನು ಮರೆಯದಿರಲಿ ಎಂದು ವಿವರಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com