ಮಂಗಳೂರು ವಿ.ವಿ.ಯಲ್ಲಿ ಹೊಸ ಕೋರ್ಸ್‌ ಆರಂಭ

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೈಗಾರಿಕಾ ರಸಾಯನಶಾಸ್ತ್ರ ಮತ್ತು ಸಮಾಜಕಾರ್ಯ ಸ್ನಾತಕೋತ್ತರ ಹೊಸ ವಿಭಾಗ ಸ್ಥಾಪನೆಯ ಕರಡುಗಳಿಗೆ ಮತ್ತು ವಿ.ವಿ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಪಠ್ಯಕ್ರಮಗಳ ಪರಿಷ್ಕರಣೆಯ ಕರಡುಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಮಂಗಳೂರು ವಿ.ವಿ. ಹೊಸ ಸೆನೆಟ್‌ ಸಭಾಂಗಣದಲ್ಲಿ ಕುಲಪತಿ ಪ್ರೊ| ಟಿ.ಸಿ. ಶಿವಶಂಕರ ಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ನೂತನ ವಿಭಾಗಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಸರಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಆರ್ಥಿಕ ನಿರ್ಬಂಧದಿಂದ ಪ್ರಸ್ತಾವನೆಯನ್ನು ಸರಕಾರ ತಿರಸ್ಕರಿಸಿತ್ತು. ಈ ಬಾರಿ ವಿ.ವಿ. ಎಲ್ಲ ವ್ಯವಸ್ಥೆಗಳನ್ನು ಪೂರ್ಣ ಪ್ರಮಾಣದಲ್ಲಿ ಸಿದ್ಧಪಡಿಸಿ ಪ್ರತ್ಯೇಕ ವಿಭಾಗ ಸ್ಥಾಪನೆಗೆ ತೀರ್ಮಾನಿಸಲಾಗಿದೆ ಎಂದು ಪ್ರೊ| ಮೂರ್ತಿ ತಿಳಿಸಿದರು.

ರೂಸ ಅನುದಾನಕ್ಕೆ ಪ್ರಸ್ತಾವನೆ

ಮಂಗಳೂರು ವಿ.ವಿ.ಯು ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸ)ದ ಪ್ರಥಮ ಕಂತಿನ ಹಣ 60 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದೆ. ಇದರಲ್ಲಿ ಮಂಗಳಗಂಗೋತ್ರಿ ಕ್ಯಾಂಪಸ್‌ ಅಭಿವೃದ್ಧಿಗೆ 30 ಕೋ.ರೂ., ಉಡುಪಿ ಜಿಲ್ಲೆಯ ಬೆಳಪು ಮತ್ತು ಕೊಡಗು ಜಿಲ್ಲೆಯ ಚಿಕ್ಕಅಳುವಾರಿನ ಸ್ನಾತಕೋತ್ತರ ಕೇಂದ್ರಗಳ ಅಭಿವೃದ್ಧಿಗೆ 15 ಕೋಟಿ ರೂ. ವಿನಿಯೋಗಿಸುವ ಪ್ರಸ್ತಾವ ಇದ್ದು, ಶೈಕ್ಷಣಿಕ ಗುಣಮಟ್ಟ ಸುಧಾರಣೆಗೂ ಹಣ ವಿನಿಯೋಗಿಸಲಾಗುವುದು ಎಂದು ಪ್ರೊ| ಮೂರ್ತಿ ತಿಳಿಸಿದರು.

ವಿಶ್ವವಿದ್ಯಾನಿಲಯವು 62 ಬೋಧಕ ಸಿಬಂದಿಯನ್ನು ನೇಮಿಸಿದ್ದು, 62 ಬೋಧಕ ಹಾಗೂ 38 ಬೋಧಕೇತರ ಸಿಬಂದಿಗೆ ಭಡ್ತಿ ನೀಡಿದೆ. ಪರೀಕ್ಷೆ ನಡೆದ 20 ದಿನಗಳ ಒಳಗೆ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸುತ್ತಿದೆ ಎಂದರು.

ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ವಿಶ್ವವಿದ್ಯಾನಿಲಯಗಳು ನ್ಯಾಕ್‌ಗೆ ಒಳಪಡುವುದನ್ನು ಕಡ್ಡಾಯಗೊಳಿಸಿದೆ. ಮಂಗಳೂರು ವಿ.ವಿ. ಸಂಶೋಧನೆ, ಶೈಕ್ಷಣಿಕ ಅಭಿವೃದ್ಧಿ ಪರೀಕ್ಷಾ ಸುಧಾರಣಾ ವ್ಯವಸ್ಥೆ, ಸ್ನಾತಕೋತ್ತರ ಕೇಂದ್ರಗಳ ಸ್ಥಾಪನೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಮುಂದಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ 200 ಪುಟಗಳ ಸ್ವಯಂ ಅಧ್ಯಯನ ವರದಿ ಹಾಗೂ 400 ಪುಟಗಳ ಮೌಲ್ಯಮಾಪನ ವರದಿಯನ್ನು ನ್ಯಾಕ್‌ಗೆ ಸಲ್ಲಿಸಿದ್ದು, ನ್ಯಾಕ್‌ ದೃಢೀಕರಣ ಸಮಿತಿ ಫೆಬ್ರವರಿಯಲ್ಲಿ ಪರಿಶೀಲನೆ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ ಎಂದರು.

ಬಿ.ಇಡಿಗೆ ವಿದ್ಯಾರ್ಥಿಗಳ ಸೇರ್ಪಡೆಯ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಬಂದಿರುವ ಸೂಚನೆಯನ್ನು ಪಾಲಿಸಿ ಎಂದ ಕುಲಸಚಿವರು, ಸರಕಾರ ನಿಗದಿ ಮಾಡಿದ ಅರ್ಹತೆ ಇಲ್ಲದ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ನೇಮಿಸಬಾರದು ಎಂದು ಹೇಳಿದರು.

ಮಂಗಳೂರು ವಿ.ವಿ.ಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹಿಂದಿ ಎಂ.ಎ. ಪದವಿ ಪ್ರಾರಂಭ, ಅಂಚೆ ತೆರಪಿನ ಶಿಕ್ಷಣ ಕಾರ್ಯಕ್ರಮದ ಎಂ.ಎ. (ಇಂಗ್ಲಿಷ್‌ ), ಎಂ.ಎ. (ಅರ್ಥ ಶಾಸ್ತ್ರ), ಎಂ.ಎ. (ಇತಿಹಾಸ), ಎಂ.ಕಾಂ., ಬಿ.ಎ., ಬಿ.ಕಾಂ ಮತ್ತು ಬಿ.ಬಿ.ಎಂ. ಪದವಿಗಳ ಇಂಗ್ಲಿಷ್‌ ಭಾಷೆ ಮತ್ತು ಬಿ.ಎ. ಪದವಿಯ ಐಚ್ಛಿಕ ಇಂಗ್ಲಿಷ್‌ ವಿಷಯ, ಬಿ.ಎ. (ಪತ್ರಿಕೋದ್ಯಮ), ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭರತನಾಟ್ಯ ಮತ್ತು ಕರ್ನಾಟಕ ಸಂಗೀತ ಪರಿಷ್ಕೃತ ಪಠ್ಯಕ್ರಮಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಮಾಜಕಾರ್ಯ, ಬಿಎಸ್ಸಿ (ಯೋಗ ವಿಜ್ಞಾನ ಐಚ್ಛಿಕ ವಿಷಯ) ಪಿ.ಎಚ್‌.ಡಿ ಭೌತಶಾಸ್ತ್ರ ಪದವಿಯ ಕೋರ್ಸು ವರ್ಕ್‌, ಎಂ.ಎಸ್ಸಿ ಸಂಖ್ಯಾಶಾಸ್ತ್ರ ಪದವಿ, ಎಂ.ಎಸ್ಸಿ. ರಸಾಯನಶಾಸ್ತ್ರ, ಅನ್ವಯಿಕ ರಸಾಯನಶಾಸ್ತ್ರ, ಸಾವಯವ ರಸಾಯನ ಶಾಸ್ತ್ರ ಮತ್ತು ವಿಶ್ಲೇಷಣಾ ರಸಾಯನ ಶಾಸ್ತ್ರ, ಬಿಎಸ್ಸಿ ಪದವಿಯ ಐಚ್ಛಿಕ ಸಸ್ಯಶಾಸ್ತÅ ಪರಿಷ್ಕೃತ ಪಠ್ಯಕ್ರಮಗಳಿಗೆ, ಬಿ.ಎಸ್ಸಿ. (ಎಫ್‌ಎನ್‌ಡಿ) ಹಾಗೂ ಬಿ.ಎಸ್ಸಿ. (ಇಂಟೀರಿಯರ್‌ ಡಿಸೈನ್‌ ಆಂÂಡ್‌ ಡೆಕೋರೇಶನ್‌) ಪದವಿಯ ಪರಿಷ್ಕೃತತ ಪಠ್ಯಕ್ರಮಗಳಿಗೆ ಅನುಮೋದನೆ ನೀಡಲಾಯಿತು.

ಸಿಸಿಟಿವಿ ಅಳವಡಿಕೆ

ಮಂಗಳೂರು ವಿಶ್ವವಿದ್ಯಾನಿಲಯದ ಭದ್ರತಾ ದೃಷ್ಟಿಯಲ್ಲಿ ವಿ.ವಿ. ಕ್ಯಾಂಪಸ್‌ನ ಆಯಕಟ್ಟಿನ ಪ್ರದೇಶದಲ್ಲಿ 48 ಸಿ.ಸಿ. ಟಿ.ವಿ. ಅಳವಡಿಸಲು ಇ-ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಕ್ಯಾಂಪಸ್‌ನಲ್ಲಿ ಅಗ್ನಿಶಾಮಕಕ್ಕೆ ಸಂಬಂಧಿಸಿದ ಪರಿಕರಗಳ ಅಳವಡಿಕೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ| ಶಿವಶಂಕರ ಮೂರ್ತಿ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com