ಪತ್ರಿಕೆಗಳು ಗ್ರಾಮೀಣ ಪತ್ರಿಕೋದ್ಯಮಕ್ಕೆ ಒತ್ತು ನೀಡಬೇಕು: ಗಂಗಾಧರ ಮುದಲಿಯಾರ್‌

ಕುಂದಾಪುರ: ಪತ್ರಿಕೋದ್ಯಮದ ಹುಸಿ ಸಂಸ್ಕೃತಿಯಲ್ಲಿ ಬದುಕುತ್ತಿರುವ ನಾವು ನಗರ ಹಾಗೂ ಸೈಬರ್‌ ಪತ್ರಿಕೋದ್ಯಮದ ನಡುವೆ ಗ್ರಾಮೀಣ ಪತ್ರಿಕೋದ್ಯಮವನ್ನು ಮರೆತು ಬಿಟ್ಟಿದ್ದೇವೆ. ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ ಪ್ರವಾಹ ರೂಪದಲ್ಲಿ ನುಗ್ಗುತ್ತಾ ಇರುವ ದಿನಗಳಲ್ಲಿ ಈ ಕ್ಷೇತ್ರ ಅಡ್ಡದಾರಿಯತ್ತ ಸಾಗಲು ಕಾರಣ ಏನು ಎನ್ನುವುದನ್ನು ವಿಶ್ಲೇಷಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಗಳು ಗ್ರಾಮೀಣ ಪತ್ರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಪತ್ರಿಕೆಗಳ ಕರ್ತವ್ಯ ಹೊಣೆಗಾರಿಕೆ ಹೆಚ್ಚಿಸುವ ಕಾರ್ಯ ಮಾಡಬೇಕಾಗಿದೆ ಎಂದು ಕರ್ನಾಟಕ ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮುದಲಿಯಾರ್‌ ಹೇಳಿದರು.

ಅವರು ಕುಂದಾಪುರದ ರೋಟರಿ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ಕುಂದಪ್ರಭ ಆಶ್ರಯದಲ್ಲಿ ನಡೆದ ಕೋ.ಮ. ಕಾರಂತ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪತ್ರಿಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸ್ಫರ್ದೆಗೆ ಇಳಿದಿವೆ. ಟಿ.ವಿ. ಮಾಧ್ಯಮ ಇದಕ್ಕೆ ಹೊರತಾಗಿಲ್ಲ. ಟಿ.ವಿ. ಮಾಧ್ಯಮ ಅಜ್ಞಾನ ಹಾಗೂ ಮನುಷ್ಯ-ಮನುಷ್ಯನ ನಡುವೆ ವಿರಸದ ಬೀಜ ಬಿತ್ತುತ್ತಾ ಟಿ.ಆರ್‌.ಪಿ. ಹೆಚ್ಚಿಸಿಕೊಳ್ಳುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ಸಾಹಿತ್ಯಕ ನೆಲಗಟ್ಟಿದೆ. ಕರ್ನಾಟಕ ಪತ್ರಿಕೋದ್ಯಮಕ್ಕೆ ಉತ್ತಮ ಸಂಸ್ಕೃತಿ ಬೇರು ಇದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪತ್ರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಪತ್ರಿಕೆಗಳು ಸಮಾಜಮುಖೀ ಕೆಲಸಗಳತ್ತ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ಬೆಳಕು ಮೂಡಿಸಿದ ಅಪ್ರತಿಮ ಸಾಧಕನೋರ್ವನನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಬೆಂಗಳೂರಿನ ಸೆಲ್ಕೋ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಡಾ| ಹರೀಶ್‌ ಹಂದೆ ಅವರಿಗೆ ಕೋ.ಮ. ಕಾರಂತ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಉಪ್ಪುಂದ ಸೀತಾರಾಮ ಶೆಟ್ಟಿ ಶುಭಾಸಂಶನೆಗೈದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ದತ್ತಾನಂದ ಗಂಗೊಳ್ಳಿ ಉಪಸ್ಥಿತರಿದ್ದರು.

ಕುಂದಪ್ರಭದ ಯು.ಎಸ್‌. ಶೆಣೈ ಸ್ವಾಗತಿಸಿದರು. ಪ್ರಾಧ್ಯಾಪಕ ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು. ಕೋ.ಶಿ. ಕಾರಂತ ಸಮ್ಮಾನ ಪ್ರಶಸ್ತಿ ಪತ್ರ ವಾಚಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com