ಡಬ್ಬಿಂಗ್‌ನಿಂದ ಸೃಜನಶೀಲ ಕಲೆ ನಾಶವಾಗಲಿದೆ ಬರಗೂರು

ಬೆಂಗಳೂರು : ಡಬ್ಬಿಂಗ್‌ನಿಂದ ಸೃಜನಶೀಲ ಕನ್ನಡ ಸಿನಿಮಾಗಳು ನಾಶವಾಗಲಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
  ನಗರದಲ್ಲಿ ಭಾಗವತರು ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ 'ಸಾಂಸ್ಕೃತಿಕ ಲೋಕದಲ್ಲಿ ಬರಗೂರು : ಒಂದು ಅವಲೋಕನ' ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
     ಡಬ್ಬಿಂಗ್‌ ಪ್ರವೃತ್ತಿ ಆರಂಭಗೊಂಡಲ್ಲಿ ಕನ್ನಡ ಸಿನಿಮೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ನೂರಾರು ತಂತ್ರಜ್ಞರು, ಕಲಾವಿದರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
       ಬೇರೆ ರಾಜ್ಯದ ಅಥವಾ ಇತರೆ ವ್ಯಕ್ತಿಗಳಿಂದ ಕನ್ನಡ ಉಳಿಸಿ ಬೆಳೆಸಬೇಕಾದ ಅಗತ್ಯಇಲ್ಲ. ಡಬ್ಬಿಂಗ್‌ ಅನವಶ್ಯಕ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಡಬ್ಬಿಂಗ್‌ನಿಂದ ಭಾಷಾ ವೈವಿಧ್ಯತೆ ಮಾಯವಾಗಲಿದೆ. ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಡಬ್ಬಿಂಗ್‌ ಮೂಲಕ ತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
      ಭಾಷೆಯ ಬಗ್ಗೆ ಕಳಕಳಿ ಇರಬೇಕು. ಸರ್ಕಾರ ಇನ್ನು ಈ ಬಗ್ಗೆ ಕಾನೂನು ಮಾಡಿಲ್ಲ. ಈ ಕುರಿತು ತೀರ್ಮಾನವಾಗುವ ಮೊದಲೇ ಅನಾವಶ್ಯಕವಾಗಿ ವಿವಾದ ಸೃಷ್ಟಿಸುವುದು ಬೇಡ ಎಂದು ಸಲಹೆ ನೀಡಿದರು.
    ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಎಂದಿಗೂ ತಮ್ಮ ಬರವಣಿಗೆಯಲ್ಲಿ ಹೊಡಿಬಡಿ ಎಂದು ಹೇಳದೆ, ಮೊನಚಾಗಿ ತಮ್ಮ ಮಾತು ಹಾಗೂ ಕೃತಿಗಳ ಮೂಲಕ ಅಚ್ಚುಕಟ್ಟಾಗಿ ಹೇಳುವಂತಹ ವಿಶೇಷ ಗುಣ ಹೊಂದಿದ್ದಾರೆ. ಅಲ್ಲದೆ, ಕಹಿಯನ್ನು ಕಲಾತ್ಮಕವಾಗಿ ಬರೆಯುವ ಕಲೆ ಬರಗೂರು ಅವರಲ್ಲಿ ಅಡಗಿದೆ ಎಂದು ಶ್ಲಾ ಸಿದರು.
      ಇತರರು ಮೆಚ್ಚಲಿ ಎಂದು ಬರಗೂರು ಬರೆದವರಲ್ಲ. ಹಿಂದೊಂದು, ಮುಂದೊಂದು ಮಾತನಾಡುವ ಸ್ವಭಾವವೂ ಅವರಲ್ಲಿ ಇಲ್ಲ. ಮನಸ್ಸು ಬಿಚ್ಚಿ ದಿಟ್ಟತನದಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು ಎಂದರು.
      'ಸೂರ್ಯ ಸಂಸ್ಕೃತಿ' ಬರಗೂರು ಸಾಹಿತ್ಯ ವಾಚಿಕೆ ಬಿಡುಗಡೆ ಮಾಡಿ ಮಾತನಾಡಿದ ಜನಪದ ತಜ್ಞ ಡಾ.ಹಿ.ಶಿ. ರಾಮಚಂದ್ರೇಗೌಡ, ಜನಸಾಮಾನ್ಯರ ಬಳಿ ಹೋಗಿ ಅವರ ಬದುಕನ್ನು ನೋಡಿದವರಲ್ಲಿ ಮಾತ್ರ ಬಹುಮುಖ ಕಾಣಬಹುದು. ತೆರೆದ ಮನಸ್ಸು ಇರುವವರಿಗೆ ಸಾಂಸ್ಕೃತಿಕ ಪರಿಕಲ್ಪನೆ ಇದ್ದು, ಅದನ್ನು ಬರಗೂರು ಅವರಲ್ಲಿ ಕಾಣಬಹುದು ಎಂದರು.
  ಕಾರ್ಯಕ್ರಮದಲ್ಲಿ ರಂಗನಿರ್ದೇಶಕ ಸಿ.ಬಸವಲಿಂಗಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com