ವಿಮಾನದಲ್ಲಿ ತರೂರ್‌ ದಂಪತಿ ಜಗಳವೇ ಸುನಂದಾ ಪುಷ್ಕರ್‌ ಸಾವಿಗೆ ಕಾರಣವೇ?

ನವದೆಹಲಿ: ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಸುನಂದಾ ಪುಷ್ಕರ್‌ ಅವರ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಸಾವಿಗೂ ಮುನ್ನ ಅಂದರೆ ಜ.15ರಂದು ತಿರುವನಂತಪುರಂನಿಂದ ದೆಹಲಿಗೆ ಆಗಮಿಸುವಾಗ ವಿಮಾನದಲ್ಲೇ ಪತಿ, ಕೇಂದ್ರ ಸಚಿವ ಶಶಿ ತರೂರ್‌ ಜತೆ ಸುನಂದಾ ಬಹಿರಂಗವಾಗಿ ಜಗಳವಾಡಿದ್ದರು. ಅವರ ಕೂಗಾಟಕ್ಕೆ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲಾ ಅವರತ್ತ ಗಮನ ಹರಿಸಿದ್ದರು ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ.

ಕಲಹಕ್ಕೆ ಸಚಿವ ತಿವಾರಿ ಸಾಕ್ಷಿ:

ಇನ್ನು ಈ ಕಲಹಕ್ಕೆ ಕೇಂದ್ರ ಮಾಹಿತಿ ಸಚಿವ ಮನೀಶ್‌ ತಿವಾರಿ ಕೂಡ ಸಾಕ್ಷಿಯಾಗಿದ್ದರೆ. ತರೂರ್‌ ದಂಪತಿ ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ತಿವಾರಿ ಕೂಡ ದಿಲ್ಲಿಗೆ ಆಗಮಿಸುತ್ತಿದ್ದರು. ಆದರೆ ಇಬ್ಬರ ಜಗಳ ಮಧ್ಯೆ ತಿವಾರಿ ಮಧ್ಯಪ್ರವೇಶಿಸಲಿಲ್ಲ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.

ದಂಪತಿಗಳ ಜಗಳ ವಿಮಾನ ನಿಲ್ದಾಣಕ್ಕೆ ಬಂದ ನಂತರವೂ ಮುಂದುವರೆದಿತ್ತು. ಕಲಹದಿಂದ ಸುನಂದಾ ಪುಷ್ಕರ್‌ ದುಃಖೀತರಾಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಆಕೆ ಅಳುತ್ತಾ ವಾಷ್‌ರೂಂಗೆ ತೆರಳಿದ ದೃಶ್ಯಗಳು ವಿಮಾನ ನಿಲ್ದಾಣ ಸಿಸಿಟೀವಿಯಲ್ಲಿ ಸೆರೆಯಾಗಿವೆ. ಸುನಂದಾ ಸಾವಿಗೆ ಈ ಕಲಹ ಕೂಡ ಒಂದು ಕಾರಣವಿರಬಹುದು ಎಂದು ತನಿಖಾಧಿಗಳು ಶಂಕಿಸಿದ್ದಾರೆ.

ದಿಲ್ಲಿಗೆ ಆಗಮಿಸಿದ ಬಳಿಕ ನಿವಾಸಕ್ಕೆ ತೆರಳಲು ಸುನಂದಾ ಪುಷ್ಕರ್‌ ನಿರಾಕರಿಸಿ ಹೋಟೆಲ್‌ಗೆ ತೆರಳಿದ್ದರು. ಜ.16ರ ರಾತ್ರಿ ಸುನಂದಾ ಹೋಟೆಲ್‌ನಲ್ಲಿ ಪ್ರತ್ಯೇಕ ಕೊಠಡಿ ಪಡೆದಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಮತ್ತೆ ಜಗಳವಾಗಿದ್ದು ಆ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಸಾಧ್ಯತೆ ಇದೆ. ಏಕೆಂದರೆ ಸುನಂದಾ ಅವರ ದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ವೈದ್ಯರು ಹೇಳಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ.

ವಿಕೋಪಕ್ಕೆ ತಿರುಗುತ್ತಿದ್ದ ಜಗಳ:

ಇನ್ನು ಇಬ್ಬರ ನಡುವೆ ಹಲವು ತಿಂಗಳುಗಳಿಂದ ಜಗಳ ನಡೆಯುತ್ತಲೇ ಇತ್ತು. ಕೆಲವು ಸಂದರ್ಭದಲ್ಲಿ ಜಗಳ ಹಿಂಸೆಗೆ ತಿರುಗುತ್ತಿತ್ತು ಎಂದು ಮನೆಗೆಲಸದಾಳು ನರೇನ್‌ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಕಳೆದ 6 ತಿಂಗಳಿನಿಂದ ಇಬ್ಬರ ನಡುವೆ ಕಲಹವಾಗುತ್ತಲ್ಲೇ ಇತ್ತು. ಸಾವಿಗೂ 72 ಗಂಟೆ ಮುಂಚಿತವಾಗಿ ವಿಮಾನದಲ್ಲಿ ನಡೆದ ಜಗಳ ಸುನಂದಾ ಸಾವಿನ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಸಾವಿಗು 3-4 ದಿನಗಳಿಂದ ಸುನಂದಾ ತೀರ ಆಕ್ರೋಶ ಮತ್ತು ಖನ್ನತೆಗೆ ಒಳಗಾಗಿದ್ದರು ಎಂಬುದು ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com