ಕೇಂದ್ರ ಸರಕಾರದ ಹೊಸ ನಾಗರಿಕ ಸೌಲಭ್ಯ ಮಾಹಿತಿಗೆ ಆನ್‌ಲೈನ್‌ ವ್ಯವಸ್ಥೆ

ಕುಂದಾಪುರ: ಭಾರತ ಸರಕಾರದ ಯಾವುದೇ ಸಚಿವಾಲಯ, ಇಲಾಖೆ, ಆಡಳಿತ ಯಂತ್ರಗಳಿಂದ ಮಾಹಿತಿ ಪಡೆಯುವುದು ಈಗ ತುಂಬಾ ಸರಳ ಮತ್ತು ಸುಲಭ. ಅಂತರ್ಜಾಲದ ವ್ಯವಸ್ಥೆಯುಳ್ಳ ಯಾವುದೇ ವ್ಯಕ್ತಿಯೂ http://rtionline.gov.in/index.php ತನ್ನ ವಿವರಗಳನ್ನು ದಾಖಲಿಸಿ, ನೋಂದಾಯಿಸಿಕೊಳ್ಳಬಹುದು. ನೋಂದಾಯಿತ ಬಳಕೆದಾರ ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ತಾನು ಬಯಸುವ ಮಾಹಿತಿಯನ್ನು ನೇರವಾಗಿ ಪಡೆಯಬಹುದಾಗಿದೆ.

ನೋಂದಾಯಿತ ಬಳಕೆದಾರ ಮಾಹಿತಿ ಹಕ್ಕು ಅರ್ಜಿ ಸಲ್ಲಿಸುವ ಪುಟವನ್ನು ತೆರೆದುಕೊಂಡು ಎಲ್ಲ ಕ್ರಮ ನಿಬಂಧನೆಗಳನ್ನೂ ಓದಿ ಮುಂದಿನ ಪುಟದಲ್ಲಿ ಭಾರತ ಸರಕಾರದ ಸಚಿವಾಲಯ, ಪ್ರಧಾನಿ, ರಾಷ್ಟ್ರಪತಿ ಕಚೇರಿ, ಇಲಾಖೆ ಹೀಗೆ ಮಾಹಿತಿ ಅಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಅನಂತರದ ಅಂಕಣಗಳಲ್ಲಿ ತನ್ನ ಹೆಸರು ವಿಳಾಸ, ಇ-ಮೇಲ್‌, ದೂರವಾಣಿ, ಮೊಬೈಲ್‌, ವಸತಿ ಪ್ರದೇಶ, ಗ್ರಾಮೀಣ, ನಗರ, ವಿದ್ಯಾರ್ಹತೆ, ಬಡತನ ರೇಖೆಗಿಂತ ಕೆಳಗೆ/ಮೇಲೆ ವಿವರ ನಮೂದಿಸಬೇಕು. ಬಡತನರೇಖೆಗಿಂತ ಕೆಳಗೆ ಇರುವವರು ಸೂಕ್ತ ದೃಢಪತ್ರದ ಪ್ರತಿ ಸಲ್ಲಿಸಬೇಕು, ಹಾಗೂ ಅವರು ಮಾಹಿತಿ ಹಕ್ಕು ಅರ್ಜಿ ಶುಲ್ಕ ಮತ್ತು ಮಾಹಿತಿ ಒದಗಿಸುವ ಇತರ ಯಾವುದೇ ಶುಲ್ಕವನ್ನೂ ಭರಿಸಬೇಕಾಗಿಲ್ಲ. ಅವರು ಉಚಿತವಾಗಿ ಮಾಹಿತಿ ಪಡೆಯಲು ಅರ್ಹರಿರುತ್ತಾರೆ.

ಅನಂತರದ ಅಂಕಣದಲ್ಲಿ ಅಪೇಕ್ಷಿಸುವ ಮಾಹಿತಿಯನ್ನು ನಮೂದಿಸಿ, ಈ ಕುರಿತು ಯಾವುದೇ ಹೆಚ್ಚುವರಿ ವಿವರ, ದಾಖಲೆಗಳಿದ್ದಲ್ಲಿ ಅದನ್ನು ಪಿಡಿಎಫ್‌ ಮಾಡಿಕೊಳ್ಳಬೇಕು. ಅನಂತರ ಶುಲ್ಕ ಪಾವತಿಯ ಪುಟ ತೆರೆದುಕೊಳ್ಳುತ್ತದೆ. ಈ ಪುಟದಲ್ಲಿ ಆನ್‌ಲೈನ್‌ ಬ್ಯಾಂಕಿಂಗ್‌, ಎಟಿಎಂ ಕಾರ್ಡ್‌ ಮೂಲಕ ಶುಲ್ಕ ಪಾವತಿ ಮಾಡುವಲ್ಲಿಗೆ ಅರ್ಜಿ ಸಲ್ಲಿಕೆ ಮುಕ್ತಾಯಗೊಳ್ಳುತ್ತದೆ. ಸ್ವೀಕೃತಿ ತತ್‌ಕ್ಷಣ ತೆರೆದುಕೊಳ್ಳುತ್ತದೆ. ನೀವು ನೀಡಿದ ಮೊಬೈಲ್‌ಗ‌ೂ ಸ್ವೀಕೃತಿ ಎಸ್‌ಎಂಎಸ್‌ ಬರುತ್ತದೆ. ನಿಮ್ಮ ಅರ್ಜಿಯ ಮುಂದಿನ ಪ್ರತಿಯೊಂದು ಹಂತಗಳ ಕುರಿತು ಮಾಹಿತಿ ಎಸ್‌ಎಂಎಸ್‌ ಮೂಲಕ ಬರುತ್ತದೆ. 

ಇನ್ನೊಂದು ಪ್ರಾಧಿಕಾರದಿಂದ ಮಾಹಿತಿ ಪಡೆಯಲು ಅರ್ಜಿ ಸಲ್ಲಿಸುವುದಕ್ಕಿದ್ದರೆ, ನಿಮ್ಮ ವಿವರಗಳು ನಿಮ್ಮ ಪುಟದಲ್ಲಿ ತೆರೆಯುತ್ತಿರುವಂತೆಯೇ ನಮೂದಾಗಿದ್ದು, ಮಾಹಿತಿ ಅಪೇಕ್ಷಿಸುವ ಪ್ರಾಧಿಕಾರಿ ಹಾಗೂ ಅಪೇಕ್ಷಿಸುವ ಮಾಹಿತಿ ಏನು ಎಂಬುದನ್ನು ಮಾತ್ರ ನಮೂದಿಸಿ, ಮತ್ತೆ ಮುಂದಿನ ಅರ್ಜಿ ಸಲ್ಲಿಸಬಹುದು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com