ಬಿಜೆಪಿ ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರಿಗೆ ಈಗ ಇನ್ನಷ್ಟು ಬಲ ಸಿಕ್ಕಿದಂತಾಗಿದೆ. ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್, ನರೇಂದ್ರ ಮೋದಿ ಅವರ ಅರ್ಹತೆಗೆ ತಕ್ಕುದಾದ ಸ್ಥಾನಮಾನ (ಪ್ರಧಾನಿ ಹುದ್ದೆ) ಸಿಗಲೆಂದು ಹಾರೈಸಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ಗುಜರಾತ್ನಲ್ಲಿ ಆಗಿರುವ ಅಭಿವೃದ್ಧಿಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಲ್ಮಾನ್, ಗುಜರಾತ್ನಲ್ಲಿ ಆಗಿರುವ ಅಭಿವೃದ್ಧಿಯಿಂದ ನಾನು ಪ್ರಭಾವಿತನಾಗಿದ್ದೇನೆ. ಎಲ್ಲರೂ ತೃಪ್ತಿ ಮತ್ತು ಸಂತಸದಿಂದಿರುವುದು ನನಗೆ ಯಾವತ್ತೂ ಸಂತಸದ ವಿಷಯವಾಗಿದೆ. ಈ ದೇಶಕ್ಕೆ ಪ್ರಧಾನಿಯಾಗಬಲ್ಲ ಅತ್ಯುತ್ತಮ ವ್ಯಕ್ತಿ (ನರೇಂದ್ರ ಮೋದಿ) ನನ್ನ ಪಕ್ಕದಲ್ಲಿ ನಿಂತಿರುವವರೇ ಆಗಿದ್ದಾರೆ' ಎಂದು ಹೇಳಿದರು.
ಮೋದಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡಲು ಗುಜರಾತ್ನ ಜನರು ಅವರನ್ನು ಪೂರ್ಣವಾಗಿ ಬೆಂಬಲಿಸಬೇಕು. ಮೋದಿಯವರ ಅದೃಷ್ಟದಲ್ಲಿ ಏನಿದೆಯೇ ಅದೇ ಆಗುತ್ತದೆ ಎಂದು ಸಲ್ಮಾನ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ನೀವು ಮೋದಿ ಅವರನ್ನು ಬೆಂಬಲಿಸುವಿರಾ ಎಂಬ ಪ್ರಶ್ನೆಗೆ ಸಲ್ಮಾನ್, ನಾನೊಬ್ಬ ನಟ ಮತ್ತು ರಾಜಕೀಯದ ಬಗ್ಗೆ ನನಗಿರುವ ಜ್ಞಾನ ಅತ್ಯಲ್ಪ. ಆದುದರಿಂದ ಯಾವುದೇ ಬಗೆಯ ವಿವಾದಕ್ಕೆ ಎಳೆಯಲ್ಪಡುವ ಬದಲು ನಾನು ಅತ್ಯಂತ ಸ್ವಲ್ಪ ಮಾತ್ರವೇ ಮಾತನಾಡುವುದು ಲೇಸು ಎಂದು ಉತ್ತರಿಸಿದರು.
0 comments:
Post a Comment