ಅಖೀಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಡಿಕೇರಿ: ಅಖೀಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 7, 8 ಮತ್ತು 9ರಂದು ಮಡಿಕೇರಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜ. 7ರಿಂದ 9ರ ವರೆಗೆ ಜಿಲ್ಲೆಯ ಎಲ್ಲಾ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹಾಗೆಯೇ ವಸತಿ ಸೌಲಭ್ಯಕ್ಕಾಗಿ ಬಳಸಿಕೊಳ್ಳಲಾಗಿರುವ ಮಡಿಕೇರಿ ನಗರದ ಶಾಲಾ - ಕಾಲೇಜುಗಳಿಗೆ ಜನವರಿ 6ರಿಂದಲೇ ರಜೆ ನೀಡಲಾಗಿದೆ. ಈಗ ನೀಡಿರುವ ರಜೆಯ ಅವಧಿಯನ್ನು ಶನಿವಾರ ಅಪರಾಹ್ನ ಸರಿದೂಗಿಸಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಾಂತರಾಜು ತಿಳಿಸಿದ್ದಾರೆ.

ಸಾಹಿತ್ಯ ಸಮ್ಮೇಳನ: ಸಂಚಾರ ವ್ಯವಸ್ಥೆ ಮಾರ್ಪಾಡು

ಮಡಿಕೇರಿ: ಅಖೀಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿ ಮಡಿಕೇರಿ ನಗರದಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನುರಾಗ್‌ ತಿವಾರಿ ಜನವರಿ 9ರ ವರೆಗೆ ಸಂಚಾರ ವ್ಯವಸ್ಥೆ ಮಾರ್ಪಡಿಸಿ ಆದೇಶ ಹೊರಡಿಸಿದ್ದಾರೆ.

ಮಡಿಕೇರಿ ನಗರದ ಜನರಲ್‌ ತಿಮ್ಮಯ್ಯ ವೃತ್ತದ ಕಡೆಯಿಂದ ಬರುವ ಬಸ್ಸುಗಳು ಸೇರಿದಂತೆ ಎಲ್ಲ ವಾಹನಗಳು ಎಂ.ಎಂ. ವೃತ್ತ, ಖಾಸಗಿ ಬಸ್ಸು ನಿಲ್ದಾಣ, ಐ.ಜಿ. ವೃತ್ತ, ಎಸ್‌.ಬಿ.ಐ. ಕಡೆಯಿಂದ ಕಾನ್ವೆಂಟ್‌ ಜಂಕ್ಷನ್‌, ವಿಜಯ ವಿನಾಯಕ ದೇವಸ್ಥಾನದ ಕಡೆಯಿಂದ ಮೈತ್ರಿಹಾಲ್‌ ಜಂಕ್ಷನ್‌ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವುದು. ಕಾರ್ಯಕ್ರಮದಿಂದ ವಾಪಾಸ್ಸು ಸಂಚರಿಸಲು ಬಸ್ಸು ಒಳಗೊಂಡಂತೆ ಎಲ್ಲ ವಾಹನಗಳು ಮೈತ್ರಿ ಹಾಲ್‌ ಜಂಕ್ಷನ್‌, ಆರ್ಮಿ ಕ್ಯಾಂಟೀನ್‌ಗಾಗಿ ಸಾಯಿ ಮೈದಾನ ಕಡೆಯಿಂದ ವೆಬ್ಸ್ ಜಂಕ್ಷನ್‌, ರಾಜಾಸೀಟ್‌, ಎಂ.ಎಂ. ವೃತ್ತಕ್ಕಾಗಿ ಸಂಚರಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಅಖೀಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ವಯಂ ಸೇವಕರಿಗೆ ನೀಡಲಾಗುವ ಟಿಷರ್ಟ್‌ನ್ನು ಜಿಲ್ಲಾಧಿಕಾರಿ ಅನುರಾಗ್‌ ತಿವಾರಿ ಬಿಡುಗಡೆ ಮಾಡಿದರು.

ಸಾವಿರಾರು ಸಾಹಿತ್ಯಾಭಿಮಾನಿಗಳ ಆಗಮನ

ಮಡಿಕೇರಿ: ವೀರರ ನಾಡು ಕೊಡಗು ಜಿಲ್ಲೆಯ ಮಂಜಿನ ನಗರಿ ಮಡಿಕೇರಿಯಲ್ಲಿ ನಡೆಯುತ್ತಿರುವ ಅಖೀಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಾಹಿತ್ಯಾಭಿಮಾನಿಗಳು ಆಗಮಿಸಿದ್ದಾರೆ. ಮಡಿಕೇರಿ ನಗರ ಕನ್ನಡ ನುಡಿ ಸಿರಿಗಾಗಿ ಸಿಂಗಾರಗೊಂಡಿದ್ದು, ನಗರದ ತುಂಬಾ ಕನ್ನಡಿಗರೇ ತುಂಬಿ ಹೋಗಿದ್ದಾರೆ.

ರಾಜ್ಯದ 30 ಜಿಲ್ಲೆಗಳ ಸುಮಾರು 8 ಸಾವಿರ ಪ್ರತಿನಿಧಿಗಳಿಗೆ ನಗರದ ವಿವಿಧೆಡೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಸಂತ ಜೋಸೆಫ‌ರ ಕಾನ್ವೆಂಟ್‌ನಲ್ಲಿ 1,800, ನೂತನ ಜಿಲ್ಲಾಡಳಿತದ ಸಮುಚ್ಚಯ ಕಟ್ಟಡದಲ್ಲಿ 2,000, ಜೂನಿಯರ್‌ ಕಾಲೇಜಿನಲ್ಲಿ 1,500, ಸಂತ ಮೈಕಲರ ಶಾಲೆಯಲ್ಲಿ 1,000, ಗೌಡ ಸಮಾಜ ಹಾಗೂ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾಲೇಜಿನಲ್ಲಿ ತಲಾ 500 ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ 26 ಜಿಲ್ಲೆಗಳಿಂದ ಒಟ್ಟು 80 ತಂಡಗಳ ಸುಮಾರು 500 ಕಲಾವಿದರು ಆಗಮಿಸುತ್ತಿದ್ದು, ಭಾರತೀಸುತ ವೇದಿಕೆ ಹಾಗೂ ಕೊಡಗಿನ ಗೌರಮ್ಮ ವೇದಿಕೆಗಳಲ್ಲಿ ಮೂರು ದಿನಗಳ ಕಾಲ ಕಲಾ ಪ್ರದರ್ಶನ ನಡೆಯಲಿದೆ.

ಸುಮಾರು 20,000 ಮಂದಿ ಕುಳಿತುಕೊಳ್ಳಬಹುದಾದ ಸಾಮರ್ಥ್ಯದ ಸಭಾ ಮಂಟಪ ಸಾಹಿತ್ಯ ಆಸಕ್ತರ ಆಗಮನಕ್ಕಾಗಿ ಎದುರು ನೋಡುತ್ತಿದೆ.

ನಗರದ ತುಂಬಾ ತಲೆ ಎತ್ತಿರುವ ಖ್ಯಾತ ನಾಮರ ಹೆಸರಿನ ದ್ವಾರ ಸಾಹಿತ್ಯಾಭಿಮಾನಿಗಳನ್ನು ಸ್ವಾಗತಿಸುತ್ತಿವೆ. ಸೇನಾನಿ ಜನರಲ್‌ ತಿಮ್ಮಯ್ಯ, ಸಾಹಿತಿಗಳಾದ ಡಿ.ವಿ. ಗುಂಡಪ್ಪ, ಕಿಟೆಲ್‌, ಮೊಗ್ಲಿಂಗ್‌, ಹಾ.ಮ. ನಾಯಕ, ಸಿದ್ಧಯ್ಯ ಪುರಾಣಿಕ್‌, ಬಿ.ಎಸ್‌. ಕುಶಾಲಪ್ಪ, ಗುಂಡುಕುಟ್ಟಿ ಮಂಜುನಾಥಯ್ಯ, ಮಂಡೀರ ಜಯಾ ಅಪ್ಪಣ್ಣ, ಗುಡ್ಡೆಮನೆ ಅಪ್ಪಯ್ಯ ಗೌಡ, ಮಾಜಿ ಮುಖ್ಯಮಂತ್ರಿ ಆರ್‌. ಗುಂಡೂರಾವ್‌, ವೀರ ರಾಜೇಂದ್ರ ಒಡೆಯರ್‌, ಪಂಜಂಡ ಬೆಳ್ಳಿಯಪ್ಪಹಾಗೂ ಜಿಲ್ಲೆಯ ಸ್ವಾತಂತ್ರ್ಯ ಸೇನಾನಿಗಳ ಹೆಸರಿನಲ್ಲಿ ಆಕರ್ಷಕ ದ್ವಾರಗಳು ತಲೆ ಎತ್ತಿವೆ.

ನಗರದ ತುಂಬಾ ಹಳದಿ ಮತ್ತು ಕೆಂಪು ಬಣ್ಣ ರಾರಾಜಿಸುತ್ತಿದ್ದು, ಅಂಗಡಿ ಮಳಿಗೆ ಹಾಗೂ ವಾಹನಗಳಲ್ಲಿ ಕನ್ನಡ ಧ್ವಜಗಳು ಹಾರಾಡುತ್ತಿವೆ. ನಗರದ ಕಾರ್ಯಪ್ಪಕಾಲೇಜಿನ ಪ್ರವೇಶದಲ್ಲಿ ನಿರ್ಮಾಣಗೊಂಡಿರುವ ಮಹಾದ್ವಾರಕ್ಕೆ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪಹಾಗೂ ಸಭಾ ಮಂಟಪಕ್ಕೆ ಕೊಡಗಿನ ತ್ರಿಭಾಷಾ ಸಾಹಿತಿ ಮುತ್ತಣ್ಣ ಅವರ ಹೆಸರು ಇಡಲಾಗಿದೆ.

ಪೊಲೀಸ್‌ ಕವಾಯತು ಮೈದಾನದಲ್ಲಿ ಸಾವಿರಾರು ಸಾಹಿತ್ಯಾಭಿಮಾನಿಗಳಿಗಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಈಗಾಗಲೇ ಬಗೆಬಗೆಯ ಖಾದ್ಯಗಳ ತಯಾರಿ ಆರಂಭಗೊಂಡಿದೆ.

ಮಂಗಳವಾರದ ಭೋಜನ ಹೀಗಿದೆ

ಬೆಳಗ್ಗೆ ಬಿಸಿಬೇಳೆ ಬಾತ್‌, ಕೇಸರಿ ಬಾತ್‌ ಹಾಗೂ ಖಾರ ಬೂಂದಿ, ಮಧ್ಯಾಹ್ನ ಪಲಾವ್‌ ಕಿಚಡಿ, ಅನ್ನ ಸಾಂಬಾರ್‌, ರಸಂ ಪಲ್ಯ ಹಾಗೂ ಅಕ್ಕಿ ಪಾಯಸ, ರಾತ್ರಿ ಚಪಾತಿ, ಅನ್ನ ಸಾಂಬಾರ್‌ ಮತ್ತು ಕಾಯಿ ಪಲ್ಯ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com