ಸಾಹಿತ್ಯ ಸಮ್ಮೇಳನದ ಮೆರವಣಿಗೆ

ಮಡಿಕೇರಿ: ಮಂಗಳವಾರದಿಂದ ಗುರುವಾರದವರೆಗೆ ಮೂರು ದಿನ ನಡೆಯುತ್ತಿರುವ ಅಖೀಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ವರ್ಣ ರಂಜಿತ ಮೆರವಣಿಗೆಗೆ ಭರ್ಜರಿ ಚಾಲನೆ ದೊರಕಿದೆ.

 ವೈಭವೋಪೆತ ಮೆರವಣಿಗೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಸಿ . ಮಹದೇವಪಪ್ಪ ಅವರು ಚಾಲನೆ ನೀಡಿದರು. ಗಾಂಧಿನಗರದಿಂದ ಪ್ರಧಾನ ವೇದಿಕೆಯ ವರೆಗೆ ನೆಡೆಯುವ ಮೆರವಣಿಗೆಯಲ್ಲಿ ರಾಜ್ಯದ 26 ಜಿಲ್ಲೆಗಳಿಂದ ಆಗಮಿಸಿದ ಒಟ್ಟು 80 ತಂಡಗಳ ಸುಮಾರು 5000 ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡು ನೋಡುಗರ ಕಣ್ಣುಗಳಿಗೆ ಸಂಭ್ರಮ ಉಂಟುಮಾಡುತ್ತಿದ್ದಾರೆ.

80 ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಸಾಹಿತ್ಯ ರಥದಲ್ಲಿ ಸಮ್ಮೇಳನಾಧ್ಯಕ್ಷ ನಾ. ಡಿಸೋಜಾ ಅವರನ್ನು ಮೆರವಣಿಗೆಯಲ್ಲಿ ಮೇದಿಕೆಗೆ ಬರಮಾಡಿಕೊಳ್ಳಲಾಗುತ್ತಿದೆ.

ವೀರರ ನಾಡು ಕೊಡಗು ಜಿಲ್ಲೆಯ ಮಂಜಿನ ನಗರಿ ಮಡಿಕೇರಿ ಕನ್ನಡ ಜಾತ್ರೆಗೆ ಸರ್ವ ರೀತಿಯಲ್ಲೂ ಸಿಂಗಾರಗೊಂಡಿದೆ.

ನಗರದ ತುಂಬಾ ಸೇನಾನಿ ಜನರಲ್‌ ತಿಮ್ಮಯ್ಯ, ಸಾಹಿತಿಗಳಾದ ಡಿ.ವಿ.ಗುಂಡಪ್ಪ, ಕಿಟೆಲ್‌, ಮೊಗ್ಲಿಂಗ್‌, ಹಾ.ಮಾ.ನಾಯಕ, ಸಿದ್ಧಯ್ಯ ಪುರಾಣಿಕ, ಬಿ.ಎಸ್‌.ಕುಶಾಲಪ್ಪ, ಗುಂಡುಕುಟ್ಟಿ ಮಂಜುನಾಥಯ್ಯ, ಮಂಡೀರ ಜಯಾ ಅಪ್ಪಣ್ಣ, ಗುಡ್ಡೆಮನೆ ಅಪ್ಪಯ್ಯಗೌಡ, ಮಾಜಿ ಮುಖ್ಯಮಂತ್ರಿ ಆರ್‌. ಗುಂಡೂರಾವ್‌, ವೀರ ರಾಜೇಂದ್ರ ಒಡೆಯರ್‌, ಪಂಜಂಡ ಬೆಳ್ಳಿಯಪ್ಪಹಾಗೂ ಜಿಲ್ಲೆಯ ಸ್ವಾತಂತ್ರ್ಯ ಸೇನಾನಿಗಳ ಹೆಸರಿನಲ್ಲಿ ಎದ್ದು ನಿಂತಿರುವ ಆಕರ್ಷಕ ದ್ವಾರಗಳು ಸಾಹಿತ್ಯಾಭಿಮಾನಿಗಳಿಗೆ ಸ್ವಾಗತ ಕೋರುತ್ತಿವೆ. ಮಡಿಕೇರಿ ನಗರದ ತುಂಬೆಲ್ಲಾ ಹಳದಿ, ಕೆಂಪು ಬಣ್ಣ ರಾರಾಜಿಸುತ್ತಿದ್ದು, ಕನ್ನಡ ಧ್ವಜಗಳು ಹಾರಾಡುತ್ತಿವೆ.

ನಗರದ ಕಾರ್ಯಪ್ಪಕಾಲೇಜಿನ ಪ್ರವೇಶದಲ್ಲಿ ನಿರ್ಮಾಣಗೊಂಡಿರುವ ಮಹಾದ್ವಾರಕ್ಕೆ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪಹಾಗೂ ಸಭಾ ಮಂಟಪಕ್ಕೆ ಕೊಡಗಿನ ತ್ರಿಭಾಷಾ ಸಾಹಿತಿ ಮುತ್ತಣ್ಣ ಅವರ ಹೆಸರು ಇಡಲಾಗಿದೆ. ರಾಜ್ಯದ 26 ಜಿಲ್ಲೆಗಳಿಂದ ಒಟ್ಟು 80 ತಂಡಗಳ ಸುಮಾರು 500 ಕಲಾವಿದರು ಆಗಮಿಸುತ್ತಿದ್ದು, ಭಾರತೀಸುತ ವೇದಿಕೆ ಹಾಗೂ ಕೊಡಗಿನ ಗೌರಮ್ಮ ವೇದಿಕೆಗಳಲ್ಲಿ ಮೂರು ದಿನಗಳ ಕಾಲ ಕಲಾ ಪ್ರದರ್ಶನ ನಡೆಯಲಿದೆ.

ಸುಮಾರು 20,000 ಮಂದಿ ಕುಳಿತುಕೊಳ್ಳಬಹುದಾದ ಸಾಮರ್ಥ್ಯದ ಸಭಾ ಮಂಟಪ ಸಾಹಿತ್ಯ ಆಸಕ್ತರ ಆಗಮನಕ್ಕಾಗಿ ಎದುರು ನೋಡುತ್ತಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com