ಕಾಣಿಯೂರು ಶ್ರೀ ವೈಭವದ ಪುರಪ್ರವೇಶ

ಉಡುಪಿ: ಶ್ರೀಕೃಷ್ಣನ ಪೂಜಾ ಕೈಂಕರ್ಯ ಕೈಗೊಳ್ಳಲು ಶ್ರೀಮಧ್ವಸರ್ವಜ್ಞಪೀಠ ಏರಲಿರುವ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಧಾರ್ಮಿಕ ಪರ್ಯಟನೆ ನಡೆಸಿ ಗುರುವಾರ ಉಡುಪಿ ಪುರ ಪ್ರವೇಶ ಮಾಡಿದ್ದು, ಜೋಡುಕಟ್ಟೆ ಬಳಿ ಸ್ವಾಮೀಜಿಗೆ ವೈಭವದ ಸ್ವಾಗತ ಕೋರಿ, ರಥಬೀದಿವರೆಗೆ ಸಂಭ್ರಮದ ಮೆರವಣಿಗೆಯಲ್ಲಿ ಕರೆತರಲಾಯಿತು. 

ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷ ಯುವರಾಜ್, ಮೆರವಣಿಗೆ ಸಮಿತಿ ಸಂಚಾಲಕ ಯಶ್ಪಾಲ್ ಸುವರ್ಣ, ಪರ್ಯಾಯೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ರಾವ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಮತ್ತಿತರರು ಸ್ವಾಮೀಜಿ ಅವರನ್ನು ಹೂವಿನ ಹಾರ ಹಾಕಿ ಸ್ವಾಗತಿಸಿದರು. 

ಮಾಜಿ ಶಾಸಕ ರಘುಪತಿ ಭಟ್, ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪ್ರದೀಪ್ ಕಲ್ಕೂರ, ರತ್ನಕುಮಾರ್, ಹರಿಪ್ರಸಾದ್ ರೈ, ಅಮೃತ್ ಶೆಣೈ, ಭಾಸ್ಕರ ರಾವ್, ಮಠದ ದಿವಾಣ ರಘುಪತಿ ಆಚಾರ್ಯ, ಮ್ಯಾನೇಜರ್ ನಾಗರಾಜ ಆಚಾರ್ಯ, ವೆಂಕಟ್ರಮಣ ಮುಚ್ಚಿಂತಾಯ, ಶ್ರೀಧರ ಭಟ್, ಲಕ್ಷ್ಮೀನಾರಾಯಣ ಭಟ್, ಹರೀಶ್‌ರಾಂ ಬನ್ನಂಜೆ, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ಶ್ರೀಕಾಂತ ರಾವ್, ನಗರಸಭೆ ಸದಸ್ಯರು ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಕೇರಳ ಚೆಂಡೆ ಬಳಗ ವೈವಿಧ್ಯಮಯ ಕುಣಿತದೊಂದಿಗೆ ಚೆಂಡೆವಾದನ ಮಾಡಿ ಗಮನ ಸೆಳೆಯಿತು. ಮಹಿಳಾ ಬಳಗದ ಚೆಂಡೆ ಸೇರಿದಂತೆ ಹಲವು ಚೆಂಡೆ ತಂಡಗಳು, ಬ್ಯಾಂಡ್, ನಾಸಿಕ್ ಬ್ಯಾಂಡ್, ನಾದಸ್ವರ, ಸ್ಯಾಕ್ಸೋಫೋನ್, ಡೊಳ್ಳು ಕುಣಿತ, ಪೂಜಾ ಕುಣಿತ, ಕೀಲು ಕುದುರೆ, ಗೊಂಬೆ ನೃತ್ಯ, ಮರಕಾಲು, ಕವಾಯತು, ತಟ್ಟಿರಾಯ, ಕೊಂಬುವಾದನಗಳು ರಸ್ತೆಯುದ್ದಕ್ಕೂ ಸಾಗಿ ಬಂದವು. ಆನೆ, ಬಿರುದುಬಾವಳಿಗಳು ಸಾಥ್ ನೀಡಿದವು. ಹರೇರಾಮ ಹರೇಕೃಷ್ಣ ತಂಡದ ಭಜನೆ, ನಾನಾ ಮಹಿಳಾ ಬಳಗದ ಭಜನೆ, ವೈದಿಕ ತಂಡದಿಂದ ಮಂತ್ರಘೋಷಗಳು ಮೊಳಗಿದವು. 

ಕಾಣಿಯೂರು ಮಠದ ಪಟ್ಟದ ದೇವರಾದ ಯೋಗಾರೂಢ ನರಸಿಂಹ ದೇವರನ್ನು ಪಲ್ಲಕ್ಕಿಯಲ್ಲಿ ತರಲಾಯಿತು. ನರಸಿಂಹ ದೇವರ ಸ್ತಬ್ಧಚಿತ್ರ ಹೊತ್ತ ತೆರೆದ ವಾಹನದಲ್ಲಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com