ನರೇಂದ್ರ ಮೋದಿ ಮಾಡಿದ ಅಭಿವೃದ್ಧಿ ಕಾರ್ಯಗಳೇನು? ಇವೆಲ್ಲಾ ನಿಜವೇ!


ನರೇಂದ್ರ ಮೋದಿಯನ್ನ ಹಿಂದುತ್ವದ ರಕ್ಷಕ ಎಂಬುದಕ್ಕಿಂತ ಹೆಚ್ಚಾಗಿ ಅಭಿವೃದ್ಧಿಯ ಹರಿಕಾರ ಎಂದು ಸಂಘ ಪರಿವಾರ ಬಹಳ ಒತ್ತುಕೊಟ್ಟು ಪ್ರಚಾರ ಮಾಡುತ್ತಿದೆ. 2002ರ ಗುಜರಾತ್ ದಂಗೆಯ ಕಳಂಕವನ್ನೂ ಮೀರಿ ಮೋದಿ ಜನಪ್ರಿಯತೆ ಗಳಿಸಿರುವುದಂತೂ ಹೌದು. ಮೋದಿ ಪ್ರಧಾನಿಯಾದರೆ ಈ ದೇಶದ ದುರಂತ ಎಂದು ಪ್ರಧಾನಿ ಮನಮೋಹನ್ ಸಿಂಗ್ ನೀಡಿರುವ ಹೇಳಿಕೆಗೂ ಗುಜರಾತ್ ರಾಜ್ಯದ ಜನರು ಸತತ ಮೂರು ಬಾರಿ ಮೋದಿಯನ್ನ ಸಿಎಂ ಆಗಿ ಆಯ್ಕೆಮಾಡಿರುವುದಕ್ಕೂ ಹೊಂದಾಣಿಕೆಯಾಗುತ್ತಿಲ್ಲವೆಂಬುದೂ ನಿಜವೇ...

ನರೇಂದ್ರ ಮೋದಿ ನೀಡಿರುವ ಅಭಿವೃದ್ಧಿಯ ಹೇಳಿಕೆಗಳೆಲ್ಲವೂ ಬಂಡಲ್ ಎಂದು ಕಾಂಗ್ರೆಸ್ ಪಟಾಲಮ್ಮು ಮೊದಲಿಂದಲೂ ಘಂಟಾಘೋಷವಾಗಿ ಛೇಡಿಸಿಕೊಂಡು ಬರುತ್ತಲೇ ಇದೆ. ಆದರೂ, ಮೋದಿ ಮಾತ್ರ ನಿಶ್ಚಲವಾಗಿ ತಮ್ಮ ಅಭಿವೃದ್ಧಿಮಂತ್ರವನ್ನ ಪಠಿಸುತ್ತಲೇ ಬಂದಿದ್ದಾರೆ. ನರೇಂದ್ರ ಮೋದಿ ಗುಜರಾತ್ ರಾಜ್ಯದಲ್ಲಿ ಏನಷ್ಟು ಮೋಡಿ ಮಾಡಿದ್ದಾರೆ ಎಂಬ ಬಗ್ಗೆ ಓದುಗರೊಬ್ಬರು ಇಲ್ಲೊಂದಿಷ್ಟು ಮಾಹಿತಿ ನೀಡಿದ್ದಾರೆ... ನೀವೇ ಓದಿ...

* ಇ-ಸೇವೆ
ಮಾಹಿತಿ ತಂತ್ರಜ್ಞಾನದ ಸಹಾಯದಿಂದ 13 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಇ-ಸೇವೆ ಒದಗಿಸಲಾಗಿದೆ. ನಮ್ಮ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇ-ಸೇವೆಗಳಿವೆಯಾದರೂ ಇಷ್ಟು ವ್ಯಾಪಕ ಪ್ರಮಾಣದಲ್ಲಿಲ್ಲವೆಂಬುದು ಗಮನಾರ್ಹ...

* ಸೋಲಾರ್ ಕ್ರಾಂತಿ
ಸರ್ದಾರ್ ಸರೋವರ್ ಯೋಜನೆಯ ಮೂಲಕ ಗುಜರಾತಿನ ಕಾಲುವೆಗಳಾದ್ಯಂತ ಸೋಲಾರ್ ಪ್ಯಾನಲ್'ಗಳನ್ನ ಅಳವಡಿಸಿ ಸೌರ ವಿದ್ಯುತ್ ಉತ್ಪಾದನೆ ಆರಂಭಿಸಿದ ಮೊದಲ ರಾಜ್ಯ ಗುಜರಾತ್... ದೇಶದ ಉಳಿದ ರಾಜ್ಯಗಳು ಈಗಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೌರಶಕ್ತಿಯ ಉತ್ಪಾದನೆಯಲ್ಲಿ ತೊಡಗಿಲ್ಲ.

* ಬಂಡವಾಳ ಹೂಡಿಕೆಯಲ್ಲಿ ನಂಬರ್ ಒನ್
ಮೋದಿ ಅಧಿಕಾರಕ್ಕೆ ಬರುವ ಮುಂಚೆ ಗುಜರಾತ್ ರಾಜ್ಯದಲ್ಲಿ ಬಂಡವಾಳ ಹೂಡುವ ಮನಸು ಹೊಂದಿದ್ದವರು ತುಂಬಾ ವಿರಳವಾಗಿದ್ದರು. ಸ್ವತಃ ಗುಜರಾತ್ ಉದ್ಯಮಿಗಳೇ ಬಂಡವಾಳ ಹೂಡಿಕೆಗಾಗಿ ಬೇರೆ ರಾಜ್ಯಗಳನ್ನ ಅವಲಂಬಿಸುತ್ತಿದ್ದರು. ಆದರೆ, ನರೇಂದ್ರ ಮೋದಿ ತಮ್ಮ ಸುಧಾರಣಾ ಕ್ರಮಗಳಿಂದ ರಾಜ್ಯದ ವಾತಾವರಣವನ್ನೇ ಬದಲು ಮಾಡಿ ಔದ್ಯಮ ಪ್ರಪಂಚ ತನ್ನತ್ತ ತಿರುಗಿನೋಡುವಂತೆ ಮಾಡಿದ್ದಾರೆ. ಭಾರತದಲ್ಲಿ ಒಟ್ಟು ಹೂಡಿಕೆಯಾಗಿರುವ ಬಂಡವಾಳದಲ್ಲಿ ಗುಜರಾತ್ ಪಾಲು ಶೇ. 15.14ರಷ್ಟಿದೆ. ಇದು, ಭಾರತೀಯ ರಾಜ್ಯಗಳ ಪೈಕಿ ಗರಿಷ್ಠ ಪ್ರಮಾಣ....

* ನಿರಂತರ ವಿದ್ಯುತ್
ಯಾವುದೇ ರಾಜ್ಯಕ್ಕಾಗಲೀ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಭಾರೀ ದೊಡ್ಡ ಸಾಹಸ. ಮೋದಿಯವರು ಜ್ಯೋತಿಗ್ರಾಮ್ ಯೋಜನೆ ಮೂಲಕ ಗುಜರಾತ್'ನಲ್ಲಿರುವ ಬಹುತೇಕ ಎಲ್ಲಾ 18 ಸಾವಿರ ಗ್ರಾಮಗಳಿಗೆ 24 ಗಂಟೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

* ರಸ್ತೆ ಸಂಪರ್ಕ
ಗುಜರಾತ್ ರಾಜ್ಯದಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆ ನಿಜಕ್ಕೂ ಉತ್ತಮವಾಗಿದೆ. ಒಂದು ಮಾಹಿತಿ ಪ್ರಕಾರ ರಾಜ್ಯದ ಶೇ. 98.7ರಷ್ಟು ಗ್ರಾಮಗಳಿಗೆ ಒಳ್ಳೆಯ ಗುಣಮಟ್ಟದ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ರಸ್ತೆ ವಿಷಯದಲ್ಲಿ ಗುಜರಾತ್ ದೇಶಕ್ಕೇ ಮಾದರಿಯಾಗಿದೆ.

* ಕಿಸಾನ್ ಕ್ರೆಡಿಟ್ ಕಾರ್ಡ್
ಗ್ರೀನ್ ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬುದು ಗುಜರಾತ್'ನ ವಿನೂತನ ಯೋಜನೆ. ಬುಡಕಟ್ಟು ರೈತರು ತಮ್ಮ ಜಮೀನಿನಲ್ಲಿರುವ ಟೀಕ್ ಮರಗಳನ್ನ ಅಡವಿಟ್ಟು ಸಾಲ ಪಡೆದುಕೊಳ್ಳುವ ಅವಕಾಶವನ್ನ ಕಲ್ಪಿಸಲಾಗಿದೆ. ಮರವೊಂದನ್ನ ಅಡವಿಟ್ಟು ಸಾಲ ಪಡೆಯುವ ಪದ್ಧತಿ ವಿಶ್ವದಲ್ಲೇ ಪ್ರಥಮ.!!

* ಅಭಿವೃದ್ಧಿ ದರ
ನರೇಂದ್ರ ಮೋದಿ ಸಿಎಂ ಆಗುವ ಮುನ್ನ ಗುಜರಾತ್ ರಾಜ್ಯದ ಸರಾಸರಿ ಅಭಿವೃದ್ಧಿ ದರ ಶೇ.2.8ರಷ್ಟಿತ್ತು. ಸಿಎಂ ಆದ ಬಳಿಕ ರಾಜ್ಯದ ಅಭಿವೃದ್ಧಿಯ ವೇಗವು ಶೇ. 10.3 ತಲುಪಿದೆ.

* ಬರಪೀಡಿತ ಜಿಲ್ಲೆಗೆ ಮೋದಿ ಮ್ಯಾಜಿಕ್...
ಗುಜರಾತ್ ರಾಜ್ಯದಲ್ಲಿ ಕಚ್ ಜಿಲ್ಲೆಯು ಅತ್ಯಂತ ಬರಪೀಡಿತ ಪ್ರದೇಶವಾಗಿದೆ. ಆದರೆ, ಈ ಜಿಲ್ಲೆ ಈಗ ಶೇ. 32ರ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ....

ಎಲ್ಲಕ್ಕಿಂತ ಹೆಚ್ಚಾಗಿ, 2002ರ ದಂಗೆ ದುರಂತದ ಬಳಿಕ ಗುಜರಾತ್ ರಾಜ್ಯದಲ್ಲಿ ಮತ್ಯಾವ ಮಾನವ ಕಲಹಗಳು ನಡೆದಿಲ್ಲ. ಅಲ್ಪಸಂಖ್ಯಾತರು ನಿರ್ಭೀತಿಯಿಂದ ಅಲ್ಲಿ ಬದುಕುತ್ತಿದ್ದಾರೆ ಎಂಬ ಮಾತಿದೆ.

(ಒಟ್ಟಾರೆ ಈ ಮೇಲಿನ ಮಾಹಿತಿಗಳು ನಮಗೆ ಇಂಟರ್ನೆಟ್'ನಲ್ಲಿ ಸಿಕ್ಕಿವೆ. ಕಾಂಗ್ರೆಸ್ ಪಕ್ಷ ಈ ಅಂಕಿ-ಅಂಶಗಳನ್ನ ಸುಳ್ಳುಗಳ ಕಂತೆ ಎಂದು ಹೇಳುತ್ತಾ ಬಂದಿದೆ. ಇವುಗಳ ಸತ್ಯಾಸತ್ಯತೆ ಎಷ್ಟೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.)
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com