19ರಿಂದ 'ಸಂಪೂರ್ಣ ರಾಮಾಯಣ' ಯಕ್ಷಗಾನ ಧಾರಾವಾಹಿ

ಉಡುಪಿ: ಯಕ್ಷಗಾನ ಕಲೆ- ಕಲಾವಿದರ ಶ್ರೇಯಸ್ಸಿಗಾಗಿ 10 ವರ್ಷಗಳ ಹಿಂದೆ ಹುಟ್ಟಿಕೊಂಡ 'ಯಕ್ಷ ಸಂಗೀತ -ನಾಧ ವೈಭವಂ' ಸಂಸ್ಥೆ ನಿರ್ಮಿಸಿರುವ 'ಸಂಪೂರ್ಣ ರಾಮಾಯಣ' ಯಕ್ಷಗಾನ ಧಾರಾವಾಹಿ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ 19ರಿಂದ ಪ್ರತಿ ಭಾನುವಾರ ಮಧ್ಯಾಹ್ನ 1.30ರಿಂದ 2.30 ನಡುವೆ ಪ್ರಸಾರವಾಗಲಿದೆ.
ಸಂಸ್ಥೆಯ ಅಧ್ಯಕ್ಷ, ಧಾರವಾಹಿಯ ನಿರ್ದೇಶಕ, ಖ್ಯಾತ ಭಾಗವತ ನಾರಾಯಣ ಶಬರಾಯ ಜಿ.ಎಂ. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ಈ ಧಾರವಾಹಿ ಪ್ರಸಾರಕ್ಕೆ ದೂರದರ್ಶನದಿಂದ ಅನುಮೋದನೆ ದೊರೆತಿದ್ದು, ಒಟ್ಟು 200 ಕಂತುಗಳಲ್ಲಿ ಈ ಧಾರವಾಹಿ ಸುಮಾರು 4 ವರ್ಷ ಕಾಲ ಪ್ರಸಾರವಾಗಲಿದೆ. ಈಗಾಗಲೇ ಸುಮಾರು 100 ಕಂತುಗಳಷ್ಟು ಚಿತ್ರೀಕರಣವೂ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ 'ದಶವಾತಾರ' ಎಂಬ ಯಕ್ಷಗಾನ ಧಾರವಾಹಿಯನ್ನು ನಿರ್ಮಿಸಿದ್ದು, ಅದು ಚಂದನದಲ್ಲಿ ಪ್ರಸಾರವಾಗಿದ್ದು ಜನಮೆಚ್ಚುಗೆ ಗಳಿಸಿತ್ತು, ಈ ಹಿನ್ನೆಲೆಯಲ್ಲಿ ಈ ಧಾರವಾಹಿಯನ್ನು ಅತ್ಯಂತ ವೃತ್ತಿಪರ ರೀತಿಯಲ್ಲಿ ಚಿತ್ರೀಕರಿಸಲಾಗಿದ್ದು, ಸುಮಾರು 150 ಮಂದಿ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಒಟ್ಟು ರು. 50 ಲಕ್ಷ ವೆಚ್ಚದ ಯೋಜನೆ ಇದಾಗಿದ್ದು, ದಶರಥ ಮಹಾರಾಜನಿಗೆ ಸಂತಾನಭಾಗ್ಯದಿಂದ ಆರಂಭವಾಗಿ, ಸೀತಾ ಪರಿತ್ಯಾಗದವರೆಗಿನ ರಾಮಾಯಣದ ಬಹುತೇಕ ಯಕ್ಷಗಾನ ಪ್ರಸಂಗಗಳನ್ನು ಈ ಧಾರಾವಾಹಿಯಲ್ಲಿ ಬಳಸಿಕೊಳ್ಳಲಾಗಿದೆ. ಸ್ವಲ್ಪ ಭಾಗ ತೆಂಕು ಮತ್ತು ಸ್ವಲ್ಪ ಭಾಗ ಬಡಗು ತಿಟ್ಟುಗಳೆರಡರಲ್ಲಿಯೂ ಚಿತ್ರೀಕರಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜಶ್ರೀ ಎನ್. ಶಬರಾಯ ಮತ್ತು ಕಾನೂನು ಸಲಹೆಗಾರ ಆತ್ರಾಡಿ ಪೃಥ್ವಿರಾಜ ಹೆಗ್ಡೆ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com