ಸಂತ ಲಾರೆನ್ಸ್‌ - ಚಲನಚಿತ್ರ ಬಿಡುಗಡೆ

ಮಂಗಳೂರು: ಅತ್ತೂರು ಸಂತ ಲಾರೆನ್ಸ್‌ ಅವರ ಮಹಿಮೆಯನ್ನು ಸಾರುವ 'ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್‌' ಕನ್ನಡ ಚಲನಚಿತ್ರ ಮಂಗಳೂರಿನ ಸಿಟಿಸೆಂಟರ್‌ನ ಸಿನೆಪೊಲೀಸ್‌ ಚಿತ್ರಮಂದಿರದಲ್ಲಿ ಶನಿವಾರ ಬಿಡುಗಡೆಗೊಂಡಿತು.

ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಚಿತ್ರವನ್ನು ಬಿಡುಗಡೆ ಮಾಡಿದರು. ಚಿತ್ರವು ಜ. 17ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.

'ಅತ್ತೂರಿನ ಪವಾಡ ಪುರುಷ ಸಂತ ಲಾರೆನ್ಸರ ಜೀವನಾಧಾರಿತವಾಗಿ ಮೂಡಿಬರುವ ಚಿತ್ರವು ಧಾರ್ಮಿಕ ಆಯಾಮಗಳನ್ನು ಪಡೆದಿದೆ. ಸಂತ ಲಾರೆನ್ಸರ ಮಹಿಮೆಯನ್ನು ಜಗತ್ತಿಗೆ ಭಿತ್ತರಿಸುವ ಉದ್ದೇಶದಿಂದ ವಾಲ್ಟರ್‌ ಸ್ಟೀಫನ್‌ ಮೆಂಡಿಸ್‌ ಅವರು ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು, ಭಕ್ತಿಯ ಸಂಕೇತದಲ್ಲಿ ಚಿತ್ರ ಮಾಡುವ ಮೂಲಕ ಧಾರ್ಮಿಕ ನೆಲೆಗಟ್ಟಿಗೆ ಹೊಸ ಆಯಾಮ ನೀಡುವ ಪ್ರಯತ್ನ ಮಾಡಲಾಗಿದೆ. ಕರಾವಳಿಯಲ್ಲಿ ಸಿನೆಮಾಗಳಿಗೆ ಉತ್ತಮ ಅವಕಾಶಗಳು ಲಭ್ಯವಿದ್ದು, 'ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್‌' ಚಿತ್ರವು ಈ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮಂಗಳೂರು ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್‌É ಡಿ'ಸೋಜಾ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಬಿಷಪ್‌ ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಆಶೀರ್ವಚನವಿತ್ತರು. ಚಿತ್ರದ ನಿರ್ಮಾಣದಲ್ಲಿ ಸಹಕರಿಸಿದ ಹಲವು ಗಣ್ಯರನ್ನು ಸಮ್ಮಾನಿಸಲಾಯಿತು.

ಬ್ಲೋಸಂ ಫೆರ್ನಾಂಡಿಸ್‌, ಸಚಿವ ಕೆ. ಅಭಯಚಂದ್ರ ಜೈನ್‌, ಶಾಸಕ ಜೆ.ಆರ್‌. ಲೋಬೋ, 'ಉದಯವಾಣಿ'ಯ ಸಹ ಉಪಾಧ್ಯಕ್ಷ ಆನಂದ್‌ ಕೆ., ಅತ್ತೂರು ಚರ್ಚ್‌ನ ಧರ್ಮಗುರು ರೆ| ಫಾ| ಜಾರ್ಜ್‌ ಡಿ'ಸೋಜಾ, ಮಂಗಳೂರಿನ ವಿಕಾರ್‌ ಜನರಲ್‌ ಮೊ| ಮೊರಾಸ್‌ ಪ್ರಭು, ಕುವೈಟ್‌ನ ಎನ್‌ಆರ್‌ಐ ಐವನ್‌ ಮೆಂಡಿಸ್‌, ಕೆಪಿಸಿಸಿ ಕಾರ್ಯದರ್ಶಿ ಐವನ್‌ ಡಿ'ಸೋಜಾ ಮುಂತಾದವರು ಉಪಸ್ಥಿತರಿದ್ದರು.

ಚಿತ್ರದ ನಿರ್ಮಾಪಕ ವಾಲ್ಟರ್‌ ಸ್ಟೀಫನ್‌ ಮೆಂಡಿಸ್‌ ಸ್ವಾಗತಿಸಿದರು. ಪ್ಲೋರಾ ಮೆಂಡಿಸ್‌ ಕಾರ್ಯಕ್ರಮ ನಿರೂಪಿಸಿದರು.

ಅತ್ತೂರಿನ ಮಹಿಮೆ...

ಅತ್ತೂರಿನ ಪವಾಡ ಪುರುಷ ಸಂತ ಲಾರೆನ್ಸರ ಜೀವನಾಧಾರಿತ ಚಲನಚಿತ್ರವಿದು. ಡಿವೈನ್‌ ವರ್ಲ್ಡ್ ಚಾನೆಲ್‌ ಈ ಚಿತ್ರವನ್ನು ತಯಾರಿಸಿದೆ. ಅತ್ತೂರು, ಕಾರ್ಕಳ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ರೋಮ್‌ ಸಾಮ್ರಾಜ್ಯದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇಂಪಾದ ಏಳು ಹಾಡುಗಳು ಚಿತ್ರದಲ್ಲಿವೆ.

ಖ್ಯಾತ ನಟರಾದ ಶೋಭರಾಜ್‌, ಭವ್ಯ, ರೇಖಾದಾಸ್‌, ಟೆನಿಸ್‌ ಕೃಷ್ಣ, ಅರವಿಂದ್‌ ಬೋಳಾರ್‌, ಡೊಲ್ಲಾ ಮಂಗಳೂರು ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರವೀಣ್‌ ತೊಕ್ಕೊಟ್ಟು ನಿರ್ದೇಶನ ಹಾಗೂ ಫ್ರಾಂಕ್‌ ಫೆರ್ನಾಂಡೀಸ್‌, ರಾಜೇಶ್‌ ಮೆಂಡಿಸ್‌, ವಿಲಿಯಂ ರೆಬೆಲ್ಲೊ, ಆಲ್ವಿನ್‌ ಡಿ'ಸೋಜಾ, ಜಗದೀಶ್‌ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ ಎಂದು ಚಿತ್ರದ ನಿರ್ಮಾಪಕ ವಾಲ್ಟರ್‌ ಸ್ಟೀಫನ್‌ ಮೆಂಡಿಸ್‌ ತಿಳಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com