ಹಾಲಿವುಡ್‌ ನಟರ ಹಿಂದೂ ಸಂಸ್ಕೃತಿಯ ಮದುವೆ

ಕೊಲ್ಲೂರು: ಹಾಲಿವುಡ್‌ನ‌ ಖ್ಯಾತ ನಟ-ನಟಿಯರು ಕೊಲ್ಲೂರಿಗೆ ಇಂದು ಆಗಮಿಸಿದ್ದು, ಹಾಲಿವುಡ್‌ ತಾರೆಯರಾದ ಖ್ಯಾತ ನಟಿ ಜೈಮೀಷ್‌ ಅವರು ಯೋಗ ಗುರು ಹಾಗೂ ಕಿರುತೆರೆ ತಾರೆ ಕ್ಯಾಮರನ್‌ ಅವರ ಮದುವೆ ಹಿಂದೂ ಸಂಪ್ರದಾಯದ ಹೋಮ ವಿಧಿವಿಧಾನಗಳೊಡನೆ ಫೆ. 20 ರಂದು ಕೊಲ್ಲೂರಿನಲ್ಲಿ ನಡೆಯಲಿದೆ.

ಧರ್ಮ ಸಂರಕ್ಷಣೆ ಮೂಲಕ ವೇದ, ಸಸ್ಯ ಗೋ ಸಂರಕ್ಷಣೆಯಂತಹ ಯೋಜನೆ ಹೊಂದಿರುವ ಲಾಸ್‌ ಎಂಜಲೀಸ್‌ ಮೂಲದ ಈ ನಟಿ ಹಿಂದೆ 2 ಬಾರಿ ಕೊಲ್ಲೂರಿಗೆ ಆಗಮಿಸಿದಾಗ ಇಲ್ಲಿನ ಧರ್ಮನೀತಿ, ಸಂಸ್ಕೃತಿ, ಸಂಸ್ಕಾರಕ್ಕೆ ಮಾರು ಹೋಗಿದ್ದರು. ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ತೆರಳಿ ಅಲ್ಲಿನ ಸಂಪ್ರದಾಯ ಆಚಾರ, ವಿಚಾರಗಳನ್ನು ಅರಿತು ಆ ಮೂಲಕ ಜನಜೀವನ ಕ್ರಮವನ್ನು ಅಭ್ಯಸಿಸಿ ಜೈಮಾ ವೇದಿಕ್‌ ಫೌಂಡೇಶನ್‌ ಸ್ಥಾಪಿಸಿ ಜನಸೇವೆಯ ಮೂಲಕ ಧರ್ಮ ಸಂರಕ್ಷಣೆ ಕೈಂಕರ್ಯ ಹೊಂದಿದ್ದಾರೆ. ಇಂಗ್ಲೆಂಡ್‌ ಮೂಲದ ಖ್ಯಾತ ಮಾಡೆಲ್‌ ಯೋಗ ಗುರು ಹಾಗೂ ನಟ ಕ್ಯಾಮರನ್‌ ಅವರನ್ನು ವರಿಸಲಿದ್ದಾರೆ.

ಸುರೇಶ್‌ ಭಟ್‌ ಅವರ ಮಾರ್ಗದರ್ಶನದಲ್ಲಿ ವೇದ ಗ್ರಾಮಂ ಡಿವೈನ್‌ ಪಾರ್ಕ್‌ ಸ್ಥಾಪಿಸಿ 360 ದಿವಸ ವೇದ ಪಠಣ, ರುದ್ರಪಠಣ ನವಗ್ರಹ ವೃಕ್ಷ ಮುಂತಾದ ಹಿಂದೂ ಧರ್ಮ ಭೋಧಕ ಧಾರ್ಮಿಕ ಶ್ರದ್ದಾ ಭಕ್ತಿ ಕೇಂದ್ರವನ್ನು ಸ್ಥಾಪಿಸುವ ಇರಾದೆ ಅವರು ಹೊಂದಿದ್ದಾರೆ. ಮದುವೆಯ ಉಸ್ತುವಾರಿ ಸುರೇಶ್‌ ಭಟ್‌ ವಹಿಸಿದ್ದು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ.

ಕೊಲ್ಲೂರಿನಲ್ಲಿ ಹಾಲಿವುಡ್‌ ನಟ-ನಟಿ-ನಿರ್ದೇಶಕರ ದಂಡು:

ಮೈಕಲ್‌ ಜಾಕ್ಸನ್‌ರೊಡನೆ ವಿಶ್ವದಾದ್ಯಂತ ಹಾಡಿ ಖ್ಯಾತರಾಗಿರುವ ಗಾಯಕಿ ಟೆಲರ್‌ ಡೇನ್‌, ಹಾಲಿವುಡ್‌ ನಟಿ ಲೀಸಾಲಂಡನ್‌, ಖ್ಯಾತ ಸಿನೇಮಾ ನಿರ್ಮಾಪಕ ಅಮೇಂಡಾ ಡೌ, ನಿರ್ದೇಶಕ ಬೇರಿ ಸೇಟಲ್‌, ಜೋವಿ ಥೆ„ರೋನ್‌, ಕ್ಯಾತ್ರಿನಾ, ಸಿಂತಿಯಾ ಸೇರಿದಂತೆ ಅನೇಕ ನಟ-ನಟಿಯರು ಹಿಂದೂ ಧರ್ಮ ಪ್ರಾಕಾರದ ವಿವಾಹ ವೀಕ್ಷಿಸಲು ಫೆ. 19 ರಂದು ಕೊಲ್ಲೂರಿಗೆ ಆಗಮಿಸಿದ್ದಾರೆ.

ಹಿಂದೂ ಸಂಸ್ಕೃತಿಯಂತೆ ನಟಿ ಜೈಮಿಷ್‌ ಅವರು 'ಜಯ್‌ಮಾ' ಹಾಗೂ ನಟ ಕ್ಯಾಮರನ್‌ ಅವರನ್ನು 'ರಾಮ್‌' ಎಂಬ ಹೆಸರಿನ ಸಂಭೋದನೆಯೊಡನೆ ಹಸೆಮಣೆ ಏರುವ ವಿನೂತನ ಮಾದರಿಯ ಮದುವೆಗೆ ಕೊಲ್ಲೂರಿನಲ್ಲಿ ಫೆ. 20 ರಂದು ನಾಂದಿ ಹಾಡಲಾಗುವುದು. ಕೊಯಮತ್ತೂರು ಆರ್ಯವೈದ್ಯಶಾಲಾ ಆಯುರ್ವೇದ ಶಿಕ್ಷಣ ಸಂಸ್ಥೆಯಲ್ಲಿ ಆಯುರ್ವೇದದ ಅಧ್ಯಯನ ಮಾಡಿರುವ ನಟಿ ಜೈಮಿಷ್‌ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಮೂಕಾಂಬಿಕೆಯ ಸಾನಿಧ್ಯದಲ್ಲಿ ಧ್ಯಾನಾಸಕ್ತರಾಗಿ ಹಲವಾರು ತಾಸು ಶ್ರೀ ದೇವಿಯ ಸ್ತೋತ್ರ ಪಠಣ ಕ್ರಮವು ಇತರರಿಗೆ ಮಾದರಿಯಾಗಿದೆ. ಇಲ್ಲಿನ ಧಾರ್ಮಿಕ ಸಂಪ್ರದಾಯದ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿರುವ ಜೈಮಿಷ್‌ ಹಾಗೂ ಕ್ಯಾಮರನ್‌ ಕೊಲೂರಿನಲ್ಲೊಂದು ಹೊಸ ಪರಂಪರೆಗೆ ನಾಂದಿ ಹಾಡಲಿದ್ದಾರೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com