ಹಾಲು ಖರೀದಿ ದರದಲ್ಲಿ 2 ರೂ. ಏರಿಕೆ

ಮಂಗಳೂರು: ರೈತರಿಗೆ ಪ್ರತೀ ಲೀಟರ್‌ ಹಾಲಿಗೆ ನೀಡುವ ಮೂಲ ಖರೀದಿ ದರವನ್ನು 25 ರೂ.ಗೆ ಏರಿಸಲಾಗಿದ್ದು, ಪ್ರತೀ ಲೀ.ಗೆ ನೀಡುವ ಪ್ರೋತ್ಸಾಹ ಧನವನ್ನು 2 ರೂ. ಏರಿಸಲಾಗಿದೆ. ಹೀಗಾಗಿ ದ. ಕ. ಹಾಗೂ ಉಡುಪಿ ಜಿಲ್ಲೆಯ ರೈತರು ಸಂಘಕ್ಕೆ ನೀಡುವ ಪ್ರತೀ ಲೀಟರ್‌ ಹಾಲಿಗೆ ಕನಿಷ್ಠ 27 ರೂ. ದರ ನಿಗದಿಪಡಿಸಲಾಗಿದೆ. ಏರಿಕೆ ಮಾಡಲಾದ ಖರೀದಿ ದರ ಫೆ. 21ರಿಂದಲೇ ಅನ್ವಯವಾಗಲಿದೆ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಕುಲಶೇಖರದ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 19ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ರೈತರಿಗೆ ನೀಡುವ ಮೂಲ ಖರೀದಿ ದರವನ್ನು 25 ರೂ. ಹೆಚ್ಚಿಸಲಾಗಿದ್ದು, ಪ್ರತೀ ಲೀ.ಗೆ ನೀಡುವ ಪ್ರೋತ್ಸಾಹ ಧನವನ್ನು 2 ರೂ. ಹೆಚ್ಚಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಒಕ್ಕೂಟ 27 ರೂ. + ಸರಕಾರದ 4 ರೂ.

ಒಕ್ಕೂಟ ಪ್ರತೀ ಲಿ.ಗೆ ಇನ್ನು ಮುಂದೆ 27 ರೂ. ನೀಡಿದರೆ, ಸರಕಾರ ಪ್ರೋತ್ಸಾಹ ಧನವಾಗಿ 4 ರೂ. ನೀಡುತ್ತದೆ. ಹೀಗಾಗಿ ರಾಜ್ಯದಲ್ಲೇ ರೈತರಿಗೆ ಪ್ರತೀ ಲೀಟರ್‌ ಹಾಲಿಗೆ ಗರಿಷ್ಠ ದರ 31 ರೂ.ಗೆ ನೀಡುವ ಹಾಲು ಒಕ್ಕೂಟವಾಗಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮೂಡಿಬಂದಿದೆ ಎಂದು ಅವರು ವಿವರಿಸಿದರು.

5.93 ಕೋಟಿ ರೂ. ಪ್ರೋತ್ಸಾಹ ಧನ ವಿತರಣೆ

ರಾಜ್ಯ ಸರಕಾರ ನೀಡುತ್ತಿರುವ 4 ರೂ. ಪ್ರೋತ್ಸಾಹ ಧನದೊಂದಿಗೆ ಸರಾಸರಿ ಹಾಲು ಮಾರಾಟ ದರ ಹಾಗೂ ಖರೀದಿ ದರದಲ್ಲಿನ ಅಂತರ ಕಡಿಮೆಯಾಗಿದೆ. ಈ ಮೂಲಕ ದ.ಕ. ಹಾಲು ಒಕ್ಕೂಟ ಈವರೆಗೆ ಪ್ರತೀ ಬಾರಿ ಹಾಲು ಮಾರಾಟ ದರ ಹೆಚ್ಚಳಗೊಳಿಸಿ ಗರಿಷ್ಠ ಮೊತ್ತವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತಿದೆ. ಒಕ್ಕೂಟದಿಂದ 2013 - 14ನೇ ಸಾಲಿನಲ್ಲಿ ವ್ಯವಹಾರ ಲಾಭದಿಂದ 5.93 ಕೋಟಿ ರೂ.ಗಳಷ್ಟು ಮೊತ್ತವನ್ನು ಉತ್ಪಾದಕರಿಗೆ ಪ್ರೋತ್ಸಾಹ ಧನವಾಗಿ ಈವರೆಗೆ ವಿತರಿಸಲಾಗಿದೆ. ಈ ಮೂಲಕ ಪ್ರತೀ ಲೀಟರ್‌ ಹಾಲಿಗೆ ರೈತರಿಗೆ ನೀಡುತ್ತಿರುವ ಹಾಲಿನ ಖರೀದಿ ದರ ಗರಿಷ್ಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ವಿವರಿಸಿದರು.

ಬೆಂಗಳೂರಿನಲ್ಲಿ ಸಮಾವೇಶ

ನಂದಿನಿ ಹಾಲು ಉತ್ಪಾದಕರ ಬೃಹತ್‌ ಸಮಾವೇಶ ಫೆ. 22ರಂದು ಬೆಂಗಳೂರಿನ ನೈಸ್‌ಗ್ರೌಂಡ್‌ನ‌ಲ್ಲಿ ನಡೆಯಲಿದೆ. ರಾಜ್ಯಾದ್ಯಂತ ಮೂರು ಲಕ್ಷ ರೈತರು ಭಾಗವಹಿಸುವ ನಿರೀಕ್ಷೆ ಇದೆ. ಜಾನುವಾರುಗಳಿಗೆ ಬರುವ ಕಾಲು ಬಾಯಿ ಜ್ವರದ ಬಗ್ಗೆ ಅರಿವು ಮೂಡಿಸುವುದು ಸಮಾವೇಶದ ಉದ್ದೇಶ. ಫೆ. 15ರಿಂದ ಒಂದು ತಿಂಗಳ ವರೆಗೆ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದರು.

600 ಕೋಟಿ ರೂ. ವಹಿವಾಟಿನ ನಿರೀಕ್ಷೆ

2014 - 15ನೇ ಸಾಲಿನಲ್ಲಿ ಒಕ್ಕೂಟ 600 ಕೋಟಿ ರೂ.ಗಳ ವಹಿವಾಟು ನಿರೀಕ್ಷಿಸಿದ್ದು, ಹಾಲು ಸಂಗ್ರಹಣೆಯಲ್ಲಿ ಸ್ವಾವಲಂಬನೆ ಸಾಧಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರ ಬೇಡಿಕೆ ಪೂರೈಸಲು, ಉತ್ಪಾದನೆ ಹೆಚ್ಚಿಸುವ ಸಲುವಾಗಿ ಹಾಲು ಉತ್ಪಾದಕರಿಗೆ ಒಟ್ಟು ವಿವಿಧ ಯೋಜನೆಗಳಿಗೆ 433 ಲಕ್ಷ ರೂ. ಸಹಾಯಧನ ವಿತರಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ನಂದಿನಿ ಕ್ಯಾಶ್ಯೂ ಬರ್ಫಿಯನ್ನು ಫೆ. 6ರಿಂದ ಮೇ 5ರ ವರೆಗೆ ವಿಶೇಷ ಮಾರಾಟ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಸಾðಚ್‌ ಆ್ಯಂಡ್‌ ವಿನ್‌ ಮೂಲಕ ವಿಜೇತರಿಗೆ ಚಿನ್ನ/ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಕೆ. ಸೀತಾರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ವಿಜಯಲಕ್ಷ್ಮೀ ಬಿ. ಪೂಜಾರಿ, ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com