ಬಂಟ ಸಮುದಾಯದ ಅಭಿವೃದ್ಧಿಗೆ ಬಾರ್ಕೂರಿನಲ್ಲಿ ಸಂಸ್ಥಾನ ನಿರ್ಮಾಣ

ಕುಂದಾಪುರ:  ಶತಮಾನಗಳಷ್ಟು ಹಿರಿತನ ಹೊಂದಿರುವ ಹಾಗೂ 12 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಬಂಟ ಸಮಾಜದ ಅಭಿವೃದ್ಧಿಗಾಗಿ ಅಳಿಯ ಕಟ್ಟು ಪರಂಪರೆ ಹುಟ್ಟಿದ ಹಾಗೂ ಬಂಟರ ಮೂಲ ಸ್ಥಾನವಾದ ಬಾರ್ಕೂರಿನಲ್ಲಿ ಸಂಸ್ಥಾನ ನಿರ್ಮಾಣ ಮಾಡುವ ಯೋಜನೆ ಇದೆ. ಬಂಟರು ನಂಬಿರುವ ಮೂಲ ಸ್ಥಾನದ ದೈವಗಳನ್ನು ಒಂದೆಡೆಯೇ ಸ್ಥಾಪಿಸಬೇಕು ಎನ್ನುವ ಚಿಂತನೆಗಳು ಇವೆ ಎಂದು ಬೆಂಗಳೂರಿನ ಆಯುರಾಶ್ರಮದ ಸಂತೋಷ ಗುರೂಜಿ ಹೇಳಿದ್ದಾರೆ.
ಮಂಗಳವಾರ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಕುಂದಾಪುರ ತಾಲೂಕು ಸಮಿತಿಯ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ವೇತನ, ಅಶಕ್ತರಿಗೆ ನೆರವು ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್‌ಮಾರ ರೈ ಅವರು ಸಂಘಕ್ಕೆ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಸಂಘದ ಒಟ್ಟಾರೆ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾರ್ಯಕ್ರಮ ಆಯೋಜನೆ ಮಾಡಿದೆ. ಸುಮಾರು ರು. 180 ಕೋಟಿಗಳ ಬೃಹತ್ ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ, ಹಂತ ಹಂತವಾಗಿ ತಾಲೂಕು ಮಟ್ಟದಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮಾಲಾಡಿ ಅಜಿತ್ ಕುಮಾರ ರೈ, ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆಂಚನೂರು ಸೋಮಶೇಖರ ಶೆಟ್ಟಿ, ಮಾಜಿ ಸಂಚಾಲಕರಾದ ಡಾ.ವೈ.ಎಸ್. ಹೆಗ್ಡೆ ಅವರನ್ನು ಗೌರವಿಸಲಾಯಿತು.
ಬಂಟರ ಯಾನೆ ನಾಡವರ ಮಾತೃಸಂಘ ಕುಂದಾಪುರ ತಾಲೂಕು ಸಮಿತಿ ಸಂಚಾಲಕ ಸಂಪಿಗೇಡಿ ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿದ್ದರು. ಸಹ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಇದ್ದರು.
ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಕುಂದಾಪುರ ತಾಲೂಕು ಪ್ರತಿನಿಧಿಗಳಾದ ಬಿ.ಕರುಣಾಕರ ಶೆಟ್ಟಿ. ಡಾ.ಸುಧಾಕರ ಹೆಗ್ಡೆ, ಕೃಷ್ಣಪ್ರಸಾದ ಅಡ್ಯಂತಾಯ, ದೇವಾನಂದ ಶೆಟ್ಟಿ ಹಳ್ನಾಡು, ದಿನೇಶ್ ಹೆಗ್ಡೆ ಮೊಳಹಳ್ಳಿ, ಸುಪ್ರೀತಾ ದೀಪಕ್ ಶೆಟ್ಟಿ, ಮಾತೃ ಸಂಘದ ವಿಶೇಷ ಅಹ್ವಾನಿತರಾದ ವಿಕಾಸ ಹೆಗ್ಡೆ, ನಾಮಕರಣ ಸದಸ್ಯರಾದ ಸಂಪತ್ ಕುಮಾರ ಶೆಟ್ಟಿ, ರೋಹಿತ್ ಶೆಟ್ಟಿ ತೊಂಬತ್ತು, ಉದಯ್ ಕುಮಾರ ಮಡಾಮಕ್ಕಿ ಇದ್ದರು.
ಸಹ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಸ್ವಾಗತಿಸಿದರು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಕ ಅಸೋಡು ವೇಣುಗೋಪಾಲ ಹೆಗ್ಡೆ ನಿರೂಪಿಸಿದರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವಾನಂದ ಶೆಟ್ಟಿ ಬಸ್ರೂರು ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com