ಕಳುಹಿತ್ಲು ಸಂಪರ್ಕ ರಸ್ತೆ ಸಮುದ್ರಪಾಲು

ಬೈಂದೂರು: ಕರಾವಳಿಯಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಸಮುದ್ರದ ಅಲೆಗಳು ತೀವ್ರಗೊಂಡು, ಕಡಲ್ಕೊರೆತ ಉಂಟಾಗುತ್ತದೆ. ಆದರೆ ಶಿರೂರಿನ ಕಳುಹಿತ್ಲುವಿನಲ್ಲಿ ದಿನೇ ದಿನೆ ಕಡಲ್ಕೊರೆತದಿಂದಾಗಿ ಮೀನುಗಾರಿಕೆ ಸಂಪರ್ಕ ರಸ್ತೆ ಸಮುದ್ರ ಪಾಲಾದ ಘಟನೆ ಗುರುವಾರ ನಡೆದಿದೆ. 

ನಿರಂತರ ಕಡಲ್ಕೊರೆತದಿಂದಾಗಿ ಇಲ್ಲಿನ ಮೀನುಗಾರಿಕೆ ರಸ್ತೆಯು ಸಮುದ್ರ ಪಾಲಾಗಿದೆ. ಪರಿಣಾಮ ಇಲ್ಲಿನ ಬಂದರಿಗೆ ಯಾವುದೇ ವಾಹನಗಳು ಬರಲಾಗುತ್ತಿಲ್ಲ. ಪ್ರತಿದಿನ ಬಂದರಿನಿಂದ ಮೀನು ಸಾಗಿಸಲಾಗಿದೆ ಮೀನುಗಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ದುಡಿಮೆ ನಡೆಸಲಾಗದೇ ನೂರಾರು ಮೀನುಗಾರರ ಬದುಕು ಅತಂತ್ರವಾಗಿದೆ. 

ಜಿಲ್ಲೆಯ ಪ್ರಮುಖ ಮೀನುಗಾರಿಕೆ ಕೇಂದ್ರವಾದ ಶಿರೂರಿನಲ್ಲಿ ಅಳ್ವೆಗದ್ದೆ ಹಾಗೂ ಕಳುಹಿತ್ಲು ಮುಖ್ಯ ಮೀನುಗಾರಿಕೆ ಬಂದರಾಗಿದೆ. ಕಳೆದ 25 ವರ್ಷಕ್ಕೂ ಅಧಿಕ ಸಮಯದಲ್ಲಿ ಶಿರೂರು ಅಲ್ಪ ಸಂಖ್ಯಾತರ ನಾಡದೋಣಿ ಮೀನುಗಾರರ ಮುತುವರ್ಜಿಯಲ್ಲಿ ಕಳುಹಿತ್ಲು ಮೀನುಗಾರಿಕಾ ಬಂದರು ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 250ಕ್ಕೂ ಅಧಿಕ ದೋಣಿಗಳು, 10ಕ್ಕೂ ಅಧಿಕ ಪಾತಿ ದೋಣಿಗಳಲ್ಲಿ ಸ್ಥಳೀಯರು ಮೀನುಗಾರಿಕೆ ನಡೆಸುತ್ತಾರೆ. ಪ್ರತಿದಿನ 5ರಿಂದ 10 ಲಕ್ಷದವರೆಗೂ ವ್ಯವಹಾರ ನಡೆಯುವ ಪ್ರಮುಖ ಬಂದರಿನಲ್ಲಿ ರಸ್ತೆ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ. 

ಈ ಭಾಗದಲ್ಲಿ ಸಮುದ್ರ ಅಲೆಗಳ ತೀವ್ರತೆಯಿಂದಾಗಿ ದಿನೇ ದಿನೆ ಕಡಲ್ಕೊರೆತ ಉಂಟಾಗುತ್ತಿದ್ದು, ರಾತ್ರಿ ಹೊತ್ತು ಸಮುದ್ರ ನೀರು ರಸ್ತೆಗೆ ಬಂದು ಅಪ್ಪಳಿಸುತ್ತದೆ. ಇದರಿಂದಾಗಿ ಜನರು ಆತಂಕಕ್ಕೀಡಾಗಿದ್ದಾರೆ. ಒಂದು ವೇಳೆ ಸಂಪರ್ಕ ರಸ್ತೆ ಸಂಪೂರ್ಣ ಸಮುದ್ರ ಪಾಲಾದರೆ ಇಲ್ಲಿನ ಹಲವು ಮೀನುಗಾರರ ಮನೆಗಳು ಸಮುದ್ರ ಪಾಲಾಗುವುದು ನಿಶ್ಚಿತ. ಏಕೆಂದರೆ ಸಂಪರ್ಕ ರಸ್ತೆಯ ಬಳಿಕ ತಗ್ಗು ಪ್ರದೇಶದಲ್ಲಿ ಮನೆಗಳು ಇದೆ. ಇದರಿಂದಾಗಿ ಹಲವು ಮನೆಗಳು ಸಮುದ್ರ ಪಾಲಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ. 

ಇಲ್ಲಿನ ಕಡಲ್ಕೊರೆತದ ಬಗ್ಗೆ ಮೀನುಗಾರ ಮುಖಂಡರು ಕಳೆದ ಎರಡು ತಿಂಗಳ ಹಿಂದೆ ಶಾಸಕರನ್ನು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ಗೋಪಾಲ ಪೂಜಾರಿ ಹಾಗೂ ಜಿಲ್ಲಾಧಿಕಾರಿಗಳು ಈ ಭಾಗಕ್ಕೆ ಭೇಟಿ ನೀಡಿ, ಶೀಘ್ರವಾಗಿ 300 ಮೀ. ತಡೆಗೋಡೆ ನಿರ್ಮಿಸಿ ಸಂಪರ್ಕ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಆದರೆ ಇನ್ನೂ ಕಾಮಗಾರಿ ನಡೆಸದೇ ಇರುವುದು ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ. ಇನ್ನಾದರೂ ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಶೀಘ್ರ ಕಾಮಗಾರಿ ಆರಂಭಿಸಿ ಮಳೆಗಾಲದೊಳಗೆ ಈ ಭಾಗದಲ್ಲಿ ಶಾಶ್ವತ ತಡೆಗೋಡೆ ಹಾಗೂ ಬಂದರಿನ ಸಂಪರ್ಕ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡುತ್ತಾರೆ. ಇಲ್ಲದಿದ್ದರೆ ಮಳೆಗಾಲದಲ್ಲಿ ಇಲ್ಲಿನ ಮನೆಗಳು ಸಮುದ್ರ ಪಾಲಾಗುವುದು ಖಚಿತ ಎನ್ನುತ್ತಾರೆ. 

*ನಾವು ಹಲವು ಸಮಯದಿಂದ ಈ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದೇವೆ. ಆದರೆ ಇನ್ನೂ ಕಾಮಗಾರಿ ನಡೆಸದೇ ಇರುವುದು ಚಿಂತೆಗೀಡು ಮಾಡಿದೆ. ರಾತ್ರಿ ಹೊತ್ತು ಇಲ್ಲಿ ಸಮುದ್ರ ನೀರು ರಸ್ತೆಗೆ ಬಂದು ಅಪ್ಪಳಿಸಿ, ನೀರು ಪಕ್ಕದ ಮನೆಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಸ್ಥಳೀಯರು ರಾತ್ರಿ ನಿದ್ದೆ ಮಾಡುವುದು ಸಾಧ್ಯವಾಗುತ್ತಿಲ್ಲ, ಹಾಗೂ ಇದೇ ರಸ್ತೆಯ ಮೂಲಕ ನಾವು ಮೀನುಗಾರಿಕೆ ಬಂದರಿಗೆ ಹೋಗಬೇಕಾಗಿದ್ದು, ಈಗ ಇಲ್ಲಿ ಸಂಚರಿಸುವುದಕ್ಕೂ ಭಯವಾಗುತ್ತಿದೆ. ಸಂಬಂಧಪಟ್ಟವರು ಶೀಘ್ರ ಈ ಭಾಗದಲ್ಲಿ ಶಾಶ್ವತ ತಡೆಗೋಡೆ ಹಾಗೂ ಸಂಪರ್ಕ ರಸ್ತೆ ದುರಸ್ತಿ ಮಾಡಿಕೊಡಿ. - ಮಹಮ್ಮದ್ ಗೌಸ್, ಗ್ರಾಪಂ ಸದಸ್ಯ

ವರದಿ ಕೃಪೆ -ರಾಮ ಬಿಜೂರು, ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com