‘ಸಂವಿಧಾನದ ಆಶಯ ಅರಿತರೆ ಜನತಂತ್ರ ಯಶಸ್ವಿ’

ಕೋಟ: ಕೋಟ ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಗುರುವಾರ ನಡೆದ ಸಂಸದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಜಯಪ್ರಕಾಶ್ ಹೆಗ್ಡೆ ಸಮಕಾಲೀನ ರಾಜಕಾರಣದ ಕುರಿತು ವಿದ್ಯಾರ್ಥಿ­ಗಳೊಂದಿಗೆ ಮುಕ್ತ ಚರ್ಚೆ ನಡೆಸಿದರು.

‘ಭಾರತೀಯರು ಸ್ವಾತಂತ್ರ್ಯವನ್ನು ಉಳಿಕೊಳ್ಳು­ವುದಿಲ್ಲ ಎಂಬ ಬ್ರಿಟಿಷರ ಮಾತು ಸುಳ್ಳಾಗಿದೆ. ಸಂವಿಧಾನದ ಆಶಯವನ್ನು ಯುವ ಜನತೆ ಅರ್ಥೈಸಿಕೊಂಡಲ್ಲಿ ನಮ್ಮ ಪ್ರಜಾಪ್ರಭುತ್ವ ಖಂಡಿತ ಯಶಸ್ವಿಯಾಗಬಲ್ಲದು’ ಎಂದು ಹೆಗ್ಡೆ ಹೇಳಿದರು.

‘ರಾಜಕಾರಣದಲ್ಲಿ ಎಲ್ಲರೂ ದಾರಿ ತಪ್ಪಿಲ್ಲ. ಸಾಕಷ್ಟು ಮಂದಿ ಪ್ರಾಮಾಣಿಕರಿದ್ದಾರೆ. ಆದಾಗ್ಯೂ ಹದಗೆಡುತ್ತಿರುವ ರಾಜಕಾರಣದ ಚಿತ್ರಣವನ್ನು ಯುವ ಜನರು ಸಕಾರಾತ್ಮಕ ಪಾತ್ರ ನಿರ್ವಹಿಸು­ವುದರ ಮೂಲಕ ಬದಲಾಯಿಸಬೇಕು’ ಎಂದು ಸಲಹೆ ನೀಡಿದರು.

ಕಳಂಕಿತರಿಗೆ ಚುನಾವಣೆಯಲ್ಲಿ ಸ್ಫರ್ಧಿಸುವ ಅವಕಾಶ  ಏಕೆ? ಆಂಗ್ಲೋ ಇಂಡಿಯನ್ ಸಮು­ದಾಯ­ಕ್ಕೆ ಸಂಸತ್ತಿನಲ್ಲಿ ಮೀಸಲಾತಿ ಅವಶ್ಯಕವೇ? ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೇ? ಇರುವ ಕಾಲೇಜುಗಳಿಗೆ ಮೂಲಸೌಕರ್ಯ ಇಲ್ಲದಿರುವಾಗ ಹೊಸ ಕಾಲೇಜುಗಳ ಅನುಮತಿಗೆ ಅವಶ್ಯಕವೇ?, ರಾಷ್ಟ್ರ ರಾಜಕಾರಣದಲ್ಲಿ ನಾಯಕತ್ವ ಕೊರತೆ? ಸರ್ಕಾರಿ ಯೋಜನೆಗಳು ಜಾರಿಯಾಗಲು ವಿಳಂಬ­ವೇಕೆ? ಚುನಾವಣೆಯಲ್ಲಿ ಸ್ಫರ್ಧಿಸಲು ವಿದ್ಯಾರ್ಹತೆ ಮುಂತಾದ ಹಲವು ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಯಿತು. 

ಉದ್ಯಮಿ ಆನಂದ್ ಸಿ. ಕುಂದರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಾಜೇಂದ್ರ ಎಸ್. ನಾಯಕ, ಭುಜಂಗ ಗುರಿಕಾರ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಮೇಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಂಶುಪಾಲ ಕೆಂಜೂರು ವಸಂತರಾಜ ಶೆಟ್ಟಿ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ನೀಲಾವರ ಪ್ರಾಸ್ತಾವಿಕವಾಗಿ ಮಾತ­ನಾಡಿದರು. ಉಪನ್ಯಾಸಕ ಉಪ್ಪೂರು ದಯಾನಂದ ಕುಮಾರ್ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com