ಸಿಆರ್‌ಜೆಡ್‌ ನಿರ್ಬಂಧ ಸಡಿಲಿಕೆಗೆ ಸರ್ಕಾರಕ್ಕೆ ಮನವಿ

ಬೈಂದೂರು: ಕಡಲತೀರದ ಪಾರಂಪರಿಕ ನಿವಾಸಿಗಳಾದ ಮೀನುಗಾರರ ಮನೆ ನಿರ್ಮಾಣಕ್ಕೆ ತಡೆಯೊಡ್ಡುವ ಕರಾವಳಿ ನಿಯಂತ್ರಣ ವಲಯ ನಿರ್ಬಂಧಗಳನ್ನು ಸಡಿಲಿಸಬೇಕೆಂದು ಬೈಂದೂರು ವಲಯ ನಾಡದೋಣಿ ಮೀನುಗಾರರ ನಿಯೋಗ ಇತ್ತೀಚೆಗೆ ಮನವಿಸಲ್ಲಿಸಿದೆ.

ಶಾಸಕ ಕೆ. ಗೋಪಾಲ ಪೂಜಾರಿ ಅವರೊಂದಿಗೆ ಬೆಂಗಳೂರಿಗೆ ತೆರಳಿ ಅರಣ್ಯ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಇಲಾಖೆಯ ಕಾರ್ಯದರ್ಶಿ­ಗಳಾದ ಶಿವಶೈಲಂ, ರಾಮಚಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸಿ, ಅವರಿಗೆ ಸಮಸ್ಯೆಯನ್ನು ಮನದಟ್ಟು ಮಾಡಲು ಪ್ರಯತ್ನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಾಮಚಂದ್ರ ಖಾರ್ವಿ ತಿಳಿಸಿದ್ದಾರೆ.

ಕಡಲ ತೀರದಲ್ಲಿ ವಾಸಿಸುತ್ತಿರುವ ಮೀನುಗಾರರು ಮತ್ತು ಇತರರಿಗೆ ಅಲ್ಲಿನ ನಿಯಂತ್ರಣ ವಲಯ, ಹಿನ್ನೀರು ಪ್ರದೇಶ ಮತ್ತು ಅಭಿವೃದ್ಧಿ ನಿಷೇಧಿತ ಪ್ರದೇಶ ಎನ್ನುವುದರ ಪರಿಗಣನೆಯಿ­ಲ್ಲದೆ ವಸತಿ ನಿರ್ಮಿಸಿಕೊಳ್ಳಲು ಮುಕ್ತ ಅವಕಾಶ ಇರಬೇಕು. ಗ್ರಾಮೀಣ ಕರಾವಳಿ ಪ್ರದೇಶಗಳು ಸಾಕಷ್ಟು ಅಭಿ­ವೃದ್ಧಿ ಹೊಂದಿರುವುದರಿಂದ ಅವುಗ­ಳನ್ನು ವಲಯ 2 ಎಂದು ಪರಿಗಣಿಸ­ಬೇಕು.

ಅಪಾಯ ಸಂಭವನೀಯತೆಯ  ಕಾರಣ ಮುಂದೊಡ್ಡಿ ಕಡಲ ತೀರ ನಿವಾಸಿಗಳ ಹಕ್ಕಿನ ಭೂಮಿಯ ಬಳಕೆ, ಪರಿವರ್ತನೆ, ಮಾರಾಟದ ಮೇಲೆ ಹೇರಿದ ನಿಯಂತ್ರಣವನ್ನು ರದ್ದುಪಡಿಸ­ಬೇಕು. ಕಡಲ ತೀರದಲ್ಲಿ ಹೆಚ್ಚಿನ ಮನೆಗಳು ಸರ್ಕಾರ ಗುರುತಿಸಿರುವ ವಿಕೋಪ ರೇಖೆಯ ಒಳಗಡೆಯೇ ಇರುವುದರಿಂದ ಈ ಗುರುತನ್ನು ರದ್ದುಪಡಿಸಬೇಕು.

ನಿಯಂತ್ರಣ ರೇಖೆಯ ಒಳಗಿನ ಪ್ರದೇಶಗಳಲ್ಲಿನ ಚಟುವಟಿಕೆಗಳ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಅಲ್ಲಿನ ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯಿತಿಗೆ ನೀಡಬೇಕು ಎಂದು ಸಂಘ ತನ್ನ ಮನವಿಯಲ್ಲಿ ವಿನಂತಿಸಿದೆ. ನಿಯೋಗದಲ್ಲಿ ಅಧ್ಯಕ್ಷರಲ್ಲದೆ ಗೌರವಾಧ್ಯಕ್ಷ ಎಸ್.ಮದನ್‌ಕುಮಾರ, ಕಾರ್ಯದರ್ಶಿ ಮಂಜುನಾಥ ಖಾರ್ವಿ, ಮೀನುಗಾರರ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ವೆಂಕಟರಮಣ ಖಾರ್ವಿ, ಕೆ. ಶ್ರೀಧರ ಖಾರ್ವಿ, ಅಖಿಲ ಕರ್ನಾಟಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಶರತ್‌ ಗುಡ್ಡೆಕೊಪ್ಲ ಇದ್ದರು.

ಪೂರಕ ಸ್ಪಂದನೆ: ರಾಜ್ಯದ ಕರಾವಳಿಯ ನಿವಾಸಿಗಳು ಮತ್ತು ಜನಪ್ರತಿನಿಧಿಗಳಿಂದ ಹೆಚ್ಚುತ್ತಿರುವ ಒತ್ತಡದ ಕಾರಣ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ 2011ರ ಸಿಆರ್‌ಝಡ್‌ ಅಧಿಸೂಚನೆಗೆ ಕೆಲವು ತಿದ್ದುಪಡಿ ತರುವಂತೆ ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ಈ ನಿಯೋಗದ ಸದಸ್ಯರು ತಿಳಿಸಿದ್ದಾರೆ.

ಅವರು  ‘ಪ್ರಜಾವಾಣಿ’ಗೆ ಒದಗಿಸಿದ  ಕರಡು ಟಿಪ್ಪಣಿಯಲ್ಲಿ ಗೋವಾ ಮತ್ತು ಕೇರಳದಲ್ಲಿರುವ ವಿನಾಯಿತಿಗಳನ್ನು ಕರ್ನಾಟಕಕ್ಕೆ ವಿಸ್ತರಿಸಬೇಕು; ವಲಯ 3ರ ವಿಕೋಪ ರೇಖೆಯನ್ನು 200 ಮೀಟರ್‌ ಬದಲಿಗೆ 50 ಮೀಟರ್‌ಗೆ ಮಿತಿಗೊಳಿಸಬೇಕು. ಅಭಿವೃದ್ಧಿ ನಿಷೇಧಿತ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು ತಡೆಯಿರಬಾರದು. ಕಡಲತೀರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು.

ನಿಯಂತ್ರಣ ವಲಯಗಳಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಚಟುವಟಿಕೆಗಳ ನಿಯಂತ್ರಣ ಮತ್ತು ಅನುಮೋದನೆ ಅಧಿಕಾರವನ್ನು ವಿಕೇಂದ್ರೀಕರಿಸಿ ಜಿಲ್ಲಾ ಕರಾವಳಿ ವಲಯ ನಿರ್ವಣಾ ಸಮಿತಿಗೆ ನೀಡಬೇಕು.  ನದಿಪಾತ್ರದಿಂದ ಮಾನವಶಕ್ತಿ ಬಳಸಿ ಮರಳು ತೆಗೆಯಲು ಅವಕಾಶ ಬೇಕು.

ಈಗಾಗಲೇ ಅಭಿವೃದ್ಧಿ ಹೊಂದಿರುವ ಮೀನುಗಾರರ ಗ್ರಾಮಗಳನ್ನು ವಲಯ 2 ಎಂದು ಪರಿಗಣಿಸಬೇಕು  ವಲಯ 3ರಲ್ಲಿನ 200–500 ಮೀಟರ್‌ ನಡುವಿನ ಪ್ರದೇಶದಲ್ಲಿ ಸಮುದಾಯ ಭವನ, ಆಸ್ಪತ್ರೆ, ಶಾಲೆ, ಕಾಲೇಜು, ಮೀನು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಅವಕಾಶ ನೀಡಬೇಕು.  ಕೆಲವು ಚಟುವಟಿಕೆಗಳಿಗೆ ಅನುಮತಿ ಪಡೆಯಲು ಇರುವ ವಿಧಾನವನ್ನು ಸರಳಗೊಳಿಸಬೇಕು ಇತ್ಯಾದಿ ಅಂಶಗಳನ್ನು ಈ ಪ್ರಸ್ತಾವನೆ ಒಳಗೊಂಡಿದೆ.

ಇದನ್ನು ಕೇಂದ್ರ ಸರ್ಕಾರದ ಅರಣ್ಯ ಮತ್ತು ಜೀವ ಪರಿಸರ ಇಲಾಖೆ ಸ್ವೀಕರಿಸಿ ಪ್ರಸಕ್ತ ಅಧಿಸೂಚನೆಯನ್ನು ಮಾರ್ಪಾಡು ಮಾಡಿದರೆ ಸಿಆರ್‌ಝಡ್‌ ನಿರ್ಬಂಧಗಳು ಗರಿಷ್ಠ ಪ್ರಮಾಣದಲ್ಲಿ ಸಡಿಲುಗೊಂಡಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com