ಮದುವೆ ಮಧ್ಯಸ್ಥಿಕೆ: ಗುರಿಕಾರರಿಗೆ ಡಾ. ಶಂಕರ್‌ ಕರೆ

ಉಡುಪಿ: ಬಡ ಹೆಣ್ಣು ಮಕ್ಕಳ ಮದುವೆಯಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾಹ ಸುಸೂತ್ರವಾಗಿ ನಡೆಯುವಂತೆ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಮೊಗವೀರ ಸಮುದಾಯದ ಗುರಿಕಾರರಿಗೆ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಕರೆ ನೀಡಿದ್ದಾರೆ.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ ಉಪ್ಪಳದಿಂದ ಶಿರೂರು ವರೆಗಿನ ಗುರಿಕಾರರ ಸಮಾವೇಶ, ಗೌರವಧನ ವಿತರಣೆ ಮತ್ತು ಸಂಘಟನೆಯ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವನ್ನು ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣುಮಕ್ಕಳನ್ನು ನೋಡಲು ವಿವಿಧ ಸ್ಥಳಗಳಿಗೆ ಬರಲು ಹೇಳುವುದು, ಕಾಯುವುದು ಇತ್ಯಾದಿ
ಮತ್ತು ನಾಲ್ಕಾರು ಗಂಡು ಮಕ್ಕಳು ನೋಡಿ ಹೋಗಿ ಜನ ಮಾತನಾಡಿಕೊಳ್ಳುವ ಸಮಸ್ಯೆಯನ್ನು ನಿವಾರಿಸಲು ಗುರಿಕಾರರು ತಮ್ಮ ಮನೆಗೆ ಹೆಣ್ಣು ಮಕ್ಕಳನ್ನು ಬರಲು ಹೇಳಿ ಅಲ್ಲಿಯೇ ಮಾತುಕತೆಯ ಮಧ್ಯಸ್ಥಿಕೆ ವಹಿಸಿ ಮದುವೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ಗುರಿಕಾರರು ಸಮಾಜದ ಹರಿಕಾರರು. ಗುರಿಕಾರರು ಸಮಾಜದ ಜವಾಬ್ದಾರಿಗಳನ್ನು ನಾಯಕತ್ವ ವಹಿಸಿಕೊಂಡು ನಿರ್ವಹಿಸಬೇಕು. ಗುರಿಕಾರರ ಋಣ ತೀರಿಸಲು ಟ್ರಸ್ಟ್‌ ಮತ್ತು ಸಂಘಟನೆ ಗರಿಷ್ಠ ಪ್ರಯತ್ನ ಮಾಡುತ್ತದೆ ಎಂದು ಡಾ| ಶಂಕರ್‌ ಹೇಳಿದರು.

ಯುವ ಸಂಘಟನೆ ಎನ್ನುವುದು ಫ್ಯಾಶನ್‌ಆಗಬಾರದು. ರಕ್ತದಾನ, ನೋಟ್‌ ಪುಸ್ತಕ- ವಿದ್ಯಾರ್ಥಿವೇತನ ವಿತರಣೆ, ಸಾಮೂಹಿಕ ವಿವಾಹದಂತಹ ಉತ್ತಮ ಕೆಲಸವನ್ನು ಮಾಡಿ ಸಂಘಟನೆ ಉತ್ತಮ ಹೆಸರು ಗಳಿಸಿದೆ. ಹೊಸ ತಂಡಪ್ರಚಾರವನ್ನು ಬಯಸದೆ ಬಡವರ ನೋವಿಗೆ ಸ್ಪಂದಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಶಾಸಕ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಲಾಲಾಜಿ ಮೆಂಡನ್‌, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್‌, ಬಗ್ವಾಡಿ ಹೋಬಳಿ ಮಹಾಜನ ಸೇವಾ ಸಂಘದ ಮುಂಬಯಿ ಅಧ್ಯಕ್ಷ ಸುರೇಶ ಆರ್‌. ಕಾಂಚನ್‌, ಬಗ್ವಾಡಿ (ಕುಂದಾಪುರ) ಶಾಖಾಧ್ಯಕ್ಷ ಎಂ.ಎಂ. ಸುವರ್ಣ, ಕೋಟದ ಉದ್ಯಮಿ ಆನಂದ ಸಿ. ಕುಂದರ್‌, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ, ಬಾರಕೂರು ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭಾಧ್ಯಕ್ಷ ವಿಶ್ವನಾಥ ಮಾಸ್ತರ್‌ ಮುಖ್ಯ ಅತಿಥಿಗಳಾಗಿದ್ದರು. ಹೋಬಳಿ ಪರವಾಗಿ ಸದಾನಂದ ಬಂಗೇರ (ಮಂಗಳೂರು), ರಮೇಶ ಉಗ್ಗೇಲುಬೆಟ್ಟು (ಬಾರಕೂರು), ನರಸಿಂಹ ಬಂಟ್ವಾಡಿ (ಬಗ್ವಾಡಿ) ಅನಿಸಿಕೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ನೂತನ ಅಧ್ಯಕ್ಷ  ಸದಾನಂದ ಬಳ್ಕೂರು ಅವರಿಗೆ ನಿರ್ಗಮನಾಧ್ಯಕ್ಷ ಜಯ ಸಿ. ಕೋಟ್ಯಾನ್‌ ಅಧಿಕಾರ ಹಸ್ತಾಂತರಿಸಿದರು. ನಿರ್ಗಮನ  ಕಾರ್ಯದರ್ಶಿ ಗಣೇಶ ಕಾಂಚನ್‌ ಸ್ವಾಗತಿಸಿದರು. ಇವರಿಬ್ಬರನ್ನೂ ಸಮ್ಮಾನಿಸಲಾಯಿತು. ಅಶೋಕ್‌ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿ ಶಂಕರ ಸಾಲ್ಯಾನ್‌ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com