ಪ್ರಕೃತಿ ಸಂರಕ್ಷಣೆಗೆ ಯಾಗ ಯಜ್ಞಾದಿಗಳ ಅವಶ್ಯ: ಶ್ರೀ ವಿಶ್ವ ಸಂತೋಷ ಗುರೂಜಿ

ಕುಂದಾಪುರ: ಹಿಂದೂ ಧರ್ಮದ ಎಲ್ಲ ಆಚರಣೆಗಳಿಗೂ ಹಿನ್ನೆಲೆ, ಅರ್ಥ, ವೈಜ್ಞಾನಿಕ ತಳಹದಿ ಇದೆ. ಅವನ್ನು ಅರ್ಥ ಮಾಡಿಕೊಳ್ಳದೇ ಮೂಢನಂಬಿಕೆ ಎಂದು ಹಳಿಯುವುದು ಸರಿಯಲ್ಲ. ಪ್ರಕೃತಿಯ ಚೈತನ್ಯ ಹೆಚ್ಚಿಸಿ, ಭೂಮಿಯ ಸಂರಕ್ಷಣೆ ಮಾಡಲು ಋಷಿ-ಮುನಿಗಳು ಯಾಗ ಯಜ್ಞ ಮಾಡಿದ್ದಾರೆ. ಹೋಮ-ಹವನ, ಭಗವದಾರಾಧನೆ, ವ್ಯರ್ಥವಲ್ಲ ಎಂದು ತೀರ್ಥಹಳ್ಳಿ ಬೆಜ್ಜವಳ್ಳಿಯ ಶ್ರೀ ವಿಶ್ವ ಸಂತೋಷ ಗುರೂಜಿ ಹೇಳಿದರು. 

ಗುಡ್ಡಟ್ಟು ಶ್ರೀ ವಿನಾಯಕ ದೇವಳದ ವರ್ಧಂತಿ ಉತ್ಸವದ ಅಂಗವಾಗಿ ಲೋಕಕಲ್ಯಾಣಾರ್ಥ  ಹಮ್ಮಿಕೊಂಡ ಲಕ್ಷಮೋದಕ ಹವನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಹಮ್ಮಿಕೊಂಡ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. 

ಮನುಷ್ಯನ ಇತಿಮಿತಿಯೊಳಗಿನದ್ದನ್ನು ಮಾತ್ರ ವಿಜ್ಞಾನ ತಿಳಿಸುತ್ತದೆ. ಆದರೆ ಅದು ಭಗವಂತನನ್ನು ತೋರಿಸಲು ಅಶಕ್ಯ. ಆದ್ದರಿಂದ ಶಾಂತಿ, ಸುಭಿಕ್ಷೆಗಳನ್ನು ನಾವು ಇಂತಹ ಕ್ಷೇತ್ರಗಳು, ಧಾರ್ಮಿಕ ಆಚರಣೆಗಳಿಂದ ಮಾತ್ರ ಪಡೆಯಲು ಸಾಧ್ಯ ಎಂದರು. 

ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಳದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಿ ಶತಮಾನ ಸಮೀಪಿಸುತ್ತಿದ್ದರೂ, ನಾವಿನ್ನೂ ನಮ್ಮ ಮಹತ್ವವನ್ನು ಅರಿಯದೇ ಪಾಶ್ಚಾತ್ಯರೆಡೆಗೆ ನೋಡುತ್ತಿದ್ದೇವೆ. ಧರ್ಮಾಚರಣೆ, ಸಂಸ್ಕೃತಿಗಳು ಶಾಂತಿ, ಸಮೃದ್ಧಿಗೆ ಅಗತ್ಯವಿರುವುದೆಲ್ಲವನ್ನೂ ಕೊಡಬಲ್ಲವು ಎಂದರು. 

ಎಚ್. ಚಂದ್ರಶೇಖರ ಕೆದ್ಲಾಯ ಪ್ರಾರ್ಥಿಸಿದರು. ಯಾಗ ಸಮಿತಿಯ ಕೆ.ಎನ್. ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಸಮಿತಿ ಸದಸ್ಯ ಅರುಣ ಕುಮಾರ್ ಹೆಗ್ಡೆ ಮತ್ತು ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಜಿ. ಅನಂತ ಪದ್ಮನಾಭ ಅಡಿಗ ಅವರು ಸ್ವಾಮೀಜಿಯವರನ್ನು ಗೌರವಿಸಿದರು. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ರವಿರಾಜ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಜಿ. ಅನಂತ ಪದ್ಮನಾಭ ಅಡಿಗ ವಂದಿಸಿದರು. 

ಧಾರ್ಮಿಕ ಸಭೆಯ ಮುನ್ನ ಯಡಾಡಿ ಶ್ರೀ ವಿನಾಯಕ ಭಜನಾ ಮಂಡಳಿಯವರಿಂದ ಭಜನೆ, ಹೆಸ್ಕತ್ತೂರು ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆದವು. ನಂತರ ಮಧುರ ಧ್ವನಿ ಉಡುಪಿ ತಂಡದವರಿಂದ ವಿದ್ವಾನ್ ಮದೂರು ಪಿ. ಬಾಲಸುಬ್ರಹ್ಮಣ್ಯಂ ಬಳಗದವರ ಸಂಗೀತ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 6ರಿಂದ ಗಣಪತಿ ಪ್ರಾರ್ಥನೆಯೊಂದಿಗೆ ಲಕ್ಷಮೋದಕ ಮಹಾಯಾಗ ಆರಂಭಗೊಂಡಿತು. ಆಯುರ್ಕೊಡ ಸೇವೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com