ಉಪ್ಪುಂದ ಮಡಿಕಲ್‌ನಲ್ಲಿ ಬ್ರೇಕ್‌ವಾಟರ್‌ ನಿರ್ಮಾಣ

ಬೈಂದೂರು : ಬೈಂದೂರು ವಿಧಾನ ಸಭಾ ಕ್ಷೇತ್ರದ ಮೀನುಗಾರರಿಗೆ ರಾಜ್ಯ ಸರಕಾರ ಬಜೆಟ್‌ ಮೂಲಕ ದೊಡ್ಡ ಕೊಡುಗೆ ನೀಡಿದೆ.

ಶುಕ್ರವಾರ ಮುಖ್ಯಮಂತ್ರಿ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಉಪ್ಪುಂದ ಮಡಿಕಲ್‌ನಲ್ಲಿ ಅಂದಾಜು ರೂ. 50 ಕೋ. ರೂ.ಗೂ ಅಧಿಕ ವೆಚ್ಚದಲ್ಲಿ ಮೀನುಗಾರಿಕಾ ಹೊರ ಬಂದರು ಅಥವಾ ಬ್ರೇಕ್‌ ವಾಟರ್‌ ಕಾಮಗಾರಿ ನಿರ್ಮಿಸುವ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಹಿಂದೆ ಉಪ್ಪುಂದದಲ್ಲಿ ನಡೆದ ಕಡಲೋತ್ಸವದಲ್ಲಿ ಮೀನುಗಾರರು ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕ ಗೋಪಾಲ ಪೂಜಾರಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

ಇದರಿಂದ ಬೈಂದೂರು ಕರಾವಳಿಯ ಇಪ್ಪತ್ತು ಕಿ. ಮೀ. ವ್ಯಾಪ್ತಿಯಲ್ಲಿ ಈ ಯೋಜನೆ ಸೇರಿದಂತೆ ಒಟ್ಟು ಐದು ಹೊಸ ಯೋಜನೆಗಳ ಕೊಡುಗೆಯನ್ನು ಸರಕಾರ ಮೀನುಗಾರರಿಗೆ ನೀಡಿದಂತಾಗುತ್ತದೆ. ಈಗಾಗಲೇ ಗಂಗೊಳ್ಳಿಯಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿಗೆ ಕೇಂದ್ರ ಸರಕಾರ 120 ಕೋ. ರೂ. ಮಂಜೂರು ಮಾಡಿದೆ. ಕಳೆದ ಸಾಲಿನಲ್ಲಿ ಬಿಜೆಪಿ ಸರಕಾರ ಮರವಂತೆಯಲ್ಲಿ ಸುಮಾರು 54 ಕೋ. ರೂ. ವೆಚ್ಚದಲ್ಲಿ ಮೀನುಗಾರಿಕಾ ಹೊರ ಬಂದರಿಗೆ ಮಂಜೂರಾತಿ ನೀಡಿದ್ದು, ಕಾಮಗಾರಿ ಹಂತದಲ್ಲಿದೆ. ಕೊಡೇರಿ ಬಂದರು ಪ್ರದೇಶದಲ್ಲಿ 33 ಕೋ. ರೂ. ವೆಚ್ಚದಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿಗೆ ಈಗಾಗಲೇ ಮಂಜೂರಾತಿ ದೊರಕಿದೆ. ಅಳ್ವೆಗದ್ದೆ ಕಿರು ಬಂದರಿಗೆ ಈಗಾಗಲೇ ಗುದ್ದಲಿ ಪೂಜೆ ನಡೆದಿದೆ. ಹೀಗೆ ಬೈಂದೂರು ಕ್ಷೇತ್ರದ ಮೀನುಗಾರರಿಗೆ ಇದು ಸಂತಸ ತಂದಿದೆ.

ಉಪ್ಪುಂದ ಮಡಿಕಲ್‌ ಬ್ರೇಕ್‌ ವಾಟರ್‌ ಕಾಮಗಾರಿ ಈ ಭಾಗದ ಮೀನುಗಾರರ ಹಲವು ದಿನಗಳ ಬೇಡಿಯಾಗಿದ್ದು, ಬಜೆಟ್‌ನಲ್ಲಿ ಘೋಷಣೆಯಾಗಿರುವುದು ಸಂತಸ ತಂದಿದೆ ಎಂದು ಬೈಂದೂರು ವಲಯ ನಾಡದೋಣಿ ಮೀನುಗಾರಿಕಾ ಸಂಘದ ಅಧ್ಯಕ್ಷ ರಾಮಚಂದ್ರ ಖಾರ್ವಿ, ವಲಯ ಮೀನುಗಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಶ್‌ ಖಾರ್ವಿ, ಮೀನುಗಾರರ ಮುಖಂಡ ಮದನ್‌ ಕುಮಾರ್‌ ಹೇಳಿದ್ದಾರೆ.

ಬಜೆಟ್‌ನಲ್ಲಿ ಈ ಬಹು ನಿರೀಕ್ಷಿತ ಯೋಜನೆ ಕಾರ್ಯಗತಗೊಳಿಸಿದ್ದಕ್ಕೆ ಬೈಂದೂರು ವಲಯ ನಾಡದೋಣಿ ಮೀನುಗಾರಿಕಾ ಸಂಘದ ಅಧ್ಯಕ್ಷ ರಾಮಚಂದ್ರ ಖಾರ್ವಿ, ವಲಯ ಮೀನುಗಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಶ್‌ ಖಾರ್ವಿ, ಮೀನುಗಾರರ ಮುಖಂಡ ಮದನ್‌ ಕುಮಾರ್‌ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್‌, ಶಾಸಕ ಗೋಪಾಲ ಪೂಜಾರಿ, ಸಚಿವ ವಿನಯ ಕುಮಾರ್‌ ಸೊರಕೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com