ಕರುಣೆಯ ಮೃದು ಸ್ಪರ್ಶ: ಅಮ್ಮನ ಕರೆ

ಮಂಗಳೂರು: ಸಂಘರ್ಷ, ವಿದ್ವೇಷಗಳ ಕಾರ್ಮೋಡ ಜಗತ್ತನ್ನು ಆವರಿಸಿರುವ ಈ ಸಂದರ್ಭ ಮಾನವೀಯ ಮನಸ್ಸುಗಳು ಕರುಣೆಯ ಮೃದುಸ್ಪರ್ಶಕ್ಕೆ ಕಾತರಿಸುತ್ತಿವೆ ಎಂದು ಶ್ರೀ ಮಾತಾ ಅಮೃತಾನಂದಮಯಿ ನುಡಿದರು.

ನಗರದ ಬೋಳೂರಿನಲ್ಲಿ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಅವರು ಶನಿವಾರ ಸತ್ಸಂಗದಲ್ಲಿ ಭಜನೆ, ಭಕ್ತರಿಗೆ ಅಪ್ಪುಗೆಯ ಆಶೀರ್ವಾದ, ಪ್ರವಚನ ನೀಡಿದರು.

ಅಂತರಂಗದಿಂದ ಜಾಗೃತರಾಗಬೇಕು

ನಾವು ಅಂತರಂಗದಿಂದ ಜಾಗೃತರಾಗಬೇಕು. ಆತ್ಮ ಜಾಗೃತಿಯಿಂದ ಪ್ರೀತಿ, ಪ್ರೇಮ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಶಾಂತಿ, ನೆಮ್ಮದಿ ನೆಲೆಯಾಗುತ್ತದೆ ಎಂದು ಅವರು ಹೇಳಿದರು.

ಮೌಲ್ಯಗಳ ಉದ್ದೀಪನ ಸರ್ವರ ಆದ್ಯತೆ

ಇಂದು ಸಂಪರ್ಕ ಕ್ರಾಂತಿಯಿಂದ ಭೂಮಿ ಸಣ್ಣ ಹಳ್ಳಿಯ ಹಾಗಾಗಿದೆ. ವಿಜ್ಞಾನ ತಂತ್ರಜ್ಞಾನಗಳ ಕೊಡುಗೆ ಮೇಲ್ಮೈಗೆ ಮಾತ್ರ. ಮನುಷ್ಯ ಹೃದಯಗಳ ನಡುವೆ ಅಂತರ ಅಗಾಧವಾಗಿದೆ. ಈ ಹಿನ್ನೆಲೆಯಲ್ಲಿ ಮಾನವ ಮೌಲ್ಯಗಳ ಉದ್ದೀಪನ ಸರ್ವರ ಪ್ರಥಮ ಆದ್ಯತೆ ಆಗಬೇಕು ಎಂದು ಅವರು ವಿವರಿಸಿದರು.

ಸಮತೋಲನ ತಪ್ಪಿದೆ

ಅತ್ಯಾಧುನಿಕತೆ ಪ್ರಭಾವದಿಂದ ಜನರ ಮನಸ್ಸಿನ ಸಮತೋಲನ ತಪ್ಪುವಂತಾಗಿದೆ ಎಂದು ವಿಷಾದಿಸಿದ ಅಮೃತಾನಂದಮಯಿ, ಈ ಪರಿಸ್ಥಿತಿ ಬದಲಾಯಿಸಬೇಕು. ಎಳೆಯರಿಗೆ ಸಂಸ್ಕೃತಿ, ಪರಂಪರೆ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಬದಲಾವಣೆ ತರಬಹುದು. ಈ ಕಾರ್ಯ ಕೂಡಲೇ ನಡೆಯಬೇಕು. ಪ್ರಕೃತಿಯಲ್ಲಿ ಎಲ್ಲಕ್ಕೂ ಒಂದು ತಾಳವಿದೆ, ಲಯವಿದೆ. ಮಾನವ ಮನಸ್ಸಿನ ಸಮತೋಲನ ವ್ಯತ್ಯಾಸದಿಂದ ಪ್ರಕೃತಿಯಲ್ಲೂ ಅಸಮತೋಲನ ಉಂಟಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು. ಪ್ರಕೃತಿ ರಕ್ಷಿಸಬೇಕು ಎಂದರು.

ಲೆ| ಕ| ಡಾ| ಎನ್‌.ಎಸ್‌. ಮಲಿಕ್‌ ವಿವಿಧ ಸೇವಾ ಯೋಜನೆಗಳಿಗೆ ಚಾಲನೆ ನೀಡಿದರು. ಎನ್‌. ಯೋಗೀಶ್‌ ಭಟ್‌, ಪ್ರೊ| ಎಂ.ಬಿ. ಪುರಾಣಿಕ್‌, ಗುರುಕಿರಣ್‌, ಮನೋಹರ ಪ್ರಸಾದ್‌, ಪುಷ್ಪರಾಜ್‌ ಜೈನ್‌, ಆತ್ಮರಾಮ್‌ ರೇವಣ್‌ಕರ್‌, ನಿರ್ಮಲಾ ಕಾಮತ್‌, ಜಿ.ಎಸ್‌. ನಾರಾಯಣಮೂರ್ತಿ ಮುಖ್ಯ ಅತಿಥಿಗಳಾಗಿದ್ದರು.

ಸಮಿತಿ ಅಧ್ಯಕ್ಷ ಎಂ. ಮೋಹನ್‌ ಕಾಮತ್‌ ಸ್ವಾಗತಿಸಿದರು. ಡಾ| ಸನತ್‌ ಹೆಗ್ಡೆ ನಿರೂಪಿಸಿದರು. ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ, ಮಾಧವ ಸುವರ್ಣ, ಮಂಜುನಾಥ ರೇವಣRರ್‌ ಮೊದಲಾದವರು ಉಪಸ್ಥಿತರಿದ್ದರು. ಡಾ| ದೇವದಾಸ್‌ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com