ಸಂಭ್ರಮದ ಬೀಚ್ ಉತ್ಸವ

ಉಡುಪಿ ಉತ್ಸವ ಸಮಿತಿ ವತಿಯಿಂದ ಮಲ್ಪೆ ಬೀಚ್‌ನ ತಂಗಾಳಿಯಲ್ಲಿ ಸಂಭ್ರಮ, ಉಲ್ಲಾಸ, ಮನೋರಂಜನೆ, ನಾನಾ ಸ್ಪರ್ಧೆಗಳೊಂದಿಗೆ ಬೀಚ್ ಉತ್ಸವ ಎಲ್ಲರನ್ನು ಮನಸೂರೆಗೊಳಿಸಿತು. ಭಾನುವಾರ ಬೆಳಗ್ಗಿನಿಂದಲೇ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಿರೀಕ್ಷೆಗೂ ಮೀರಿದ ಪ್ರೇಕ್ಷಕರು ತಂಡೋಪ ತಂಡವಾಗಿ ಸೇರಿಕೊಂಡರು. 

ಉತ್ಸವದ ಅಂಗವಾಗಿ ಸೈಂಟ್ ಮೇರಿಸ್‌ನಿಂದ ಮಲ್ಪೆ ಕಡಲ ತೀರದ ವರೆಗೆ ಹಮ್ಮಿಕೊಂಡ ಈಜು ಸ್ಪರ್ಧೆಯಲ್ಲಿ ಶೀರೂರು ಶ್ರೀ ಲಕ್ಷ್ಮೀವರ ಶ್ರೀಪಾದರು ಈಜುವ ಮೂಲಕ ಸ್ಪರ್ಧಾಳುಗಳಿಗೆ ಪ್ರೋತ್ಸಾಹ ನೀಡಿದರು. ಹಿರಿಯರು ಕಿರಿಯರು ಎನ್ನದೆ ಸುಮಾರು 32 ಸ್ಪರ್ಧಾಳುಗಳು ಭಾಗವಹಿಸಿದರು. 

ಮಣಿಪಾಲದ ಹಾಟ್‌ಫಿಟೊನ್ಸ್ ಯುವಕರ ತಂಡದಿಂದ ಮೈನವಿರೇಳಿಸುವ ಬೈಕ್ ಸ್ಟಂಟ್ ನಡೆಯಿತು. ಶೀರೂರು ಶ್ರೀಗಳು ಬೈಕ್ ಸ್ಟಂಟ್‌ಗೆ ಚಾಲನೆ ನೀಡಿದರು. ಯುವಕರ ಅಭೂತಪೂರ್ವ ಸಾಧನೆಯನ್ನು ಕಂಡು ಸಾವಿರಾರು ಜನ ಮೂಕವಿಸ್ಮಿತರಾದರು. 

ಕಲಾವಿದರ ಕುಂಚದಿಂದ ಮೂಡಿದ ಮರಳು ಶಿಲ್ಪಗಳು, ದೋಣಿ ಸ್ಪರ್ಧೆ, ಈಜು ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಕರಾವಳಿ ಭಾಗದ ನೆಚ್ಚಿನ ಸ್ಪರ್ಧೆ ಹಗ್ಗಜಗ್ಗಾಟದಲ್ಲಿ ಪುರುಷರು ಹಾಗೂ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಶಕ್ತಿ ಪ್ರದರ್ಶನದಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದರು. 

ಇಷ್ಟು ಮಾತ್ರವಲ್ಲದೇ ವಿಶಿಷ್ಟವಾದ ತಿಂಡಿ ತಿನಸುಗಳ ಸತ್ಕಾರ ಜತೆಗೆ ಕರಾವಳಿಯ ಎಲ್ಲ ಬಗೆಯ ಮೀನುಗಳ ಖಾದ್ಯಗಳು, ಪದಾರ್ಥಗಳು, ಸುಕ್ಕ, ಚಿಲ್ಲಿ, ನಾಟಿ ಕೋಳಿ ಪದಾರ್ಥ, ಕೋರಿ ರೊಟ್ಟಿ, ದಕ್ಷಿಣೋತ್ತರ ಶೈಲಿಯ ನಾನಾ ಬಗೆಯ ಶುಚಿ-ರುಚಿಯಾದ ಆಹಾರವನ್ನು ಸ್ಥಳದಲ್ಲಿಯೇ ತಯಾರಿಸಿ ಉಣ ಬಡಿಸಲಾಯಿತು. ಹಲವು ವೈಶಿಷ್ಟ್ಯಗಳನ್ನು ಸಾದರಪಡಿಸಿದ ಬೀಚ್ ಉತ್ಸವ ಬಹಳಷ್ಟು ಮಂದಿಯ ಮನವನ್ನು ಮುದಗೊಳಿಸಿದ್ದಲ್ಲದೆ, ಆಯೋಜಿಸಿದ ಉಡುಪಿ ನಗರಸಭೆಗೆ ಹೆಮ್ಮೆಯನ್ನು ತಂದಿತು. 

ಹೋವರ್ ಕ್ರಾಫ್ಟ್: ಸಮುದ್ರ, ಮರಳು, ಮಣ್ಣು, ಮಂಜು ಹೀಗೆ ಎಲ್ಲಿ ಬೇಕಾದರೂ ಸಂಚರಿಸಬಲ್ಲ ವಿಶಿಷ್ಟ ನೌಕೆ ಹೋವರ್ ಕ್ರಾಫ್ಟ್ ಭಾನುವಾರ ಮಲ್ಪೆ ಬೀಚ್‌ಗೆ ಆಗಮಿಸಿ ಎಲ್ಲರನ್ನು ಆಚ್ಚರಿಪಡಿಸಿತು. ಸಮುದ್ರ ಮಧ್ಯೆ ಯಾವುದೇ ದುರಂತಗಳು ಸಂಭವಿಸಿದರೆ ತುರ್ತು ರಕ್ಷಣಾ ಕಾರ್ಯಕ್ಕೆ ಹೋವರ್ ಕ್ರಾಫ್ಟ್ ನೌಕೆಯನ್ನು ಬಳಸಲಾಗುತ್ತದೆ. ನೌಕಾ ಪಡೆಯಲ್ಲಿ ಇಂತಹ 14 ನೌಕೆಗಳಿದ್ದು, ರಾಜ್ಯದ ಕರಾವಳಿ ತೀರದಲ್ಲಿ 2 ನೌಕೆಗಳು ಕಾರ್ಯ ನಿರ್ವಹಿಸಲಿರುವುದಾಗಿ ಅಧಿಕಾರಿಗಳು ತಿಳಿಸಿದರು. ಈ ನೌಕೆಯು ಗಂಟೆಗೆ 90 ಕಿ.ಮೀ. ವೇಗದಲ್ಲಿ ಚಲಿಸಬಲ್ಲುದು ಎಂದು ಅಧಿಕಾರಿಗಳು ತಿಳಿಸಿದರು. 

*ನನಗೆ ಈಜುವುದು ಎಂದರೆ ಪ್ರೀತಿ. ಬೀಚ್ ಉತ್ಸವದಲ್ಲಿ ಈಜು ಸ್ಪರ್ಧೆಯನ್ನು ಆಯೋಜಿಸಿರುವುದು ಸಂತಸ ತಂದಿದೆ. ಕಡಲ ವೀರರೊಂದಿಗೆ ಈಜುವುದು ಬಹಳ ಇಷ್ಟ. ಬಹಳಷ್ಟು ಬಾರಿ ಕಡಲಲ್ಲಿ ಈಜಿದ್ದೇನೆ. ಮುಂದೆಯೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. -ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು 

ವರದಿ ಕೃಪೆ: ಪ್ರವೀಣ್ ಜಿ. ಕೊಡವೂರು 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com