ಕುಂದಾಪುರದಲ್ಲಿ ಭಾರತೀಯ ರಂಗಮಹೋತ್ಸವ

ಕುಂದಾಪುರ : ದೇಶದಲ್ಲಿಯೇ ಪ್ರಥಮ ಬಾರಿಗೆ ಎನ್ನುವಂತೆ ಭಾರತದ ಹತ್ತು ರಾಜ್ಯಗಳ 11 ಅಪೂರ್ವ ನಾಟಕಗಳ ಹಬ್ಬ 'ಭಾರತೀಯ ರಂಗ ಮಹೋತ್ಸವ' ಫೆ. 28ರಿಂದ ಮಾರ್ಚ್‌ 9ರ ತನಕ ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಬಯಲು ರಂಗಮಂದಿರದಲ್ಲಿ ಜರಗಲಿದೆ.

ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌, ಈ ರಂಗಮಹೋತ್ಸವ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಾಂಜಾವೂರು, ರಂಗ ಅಧ್ಯಯನ ಕೇಂದ್ರ ಕುಂದಾಪುರ ಹಾಗೂ ಅನೇಕ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದರು.

ಭಾರತದ ವಿವಿಧ ಭಾಷೆಗಳ ನಾಟಕಗಳು ಪ್ರಾದೇಶಿಕ ಸೊಗಡು ಹಾಗೂ ಚೈತನ್ಯದೊಂದಿಗೆ ರಂಗದ ಮೇಲೆ ಮೈತಾಳಲಿದ್ದು, ರಂಗ ಪ್ರೇಮಿಗಳು, ರಂಗ ತಜ್ಞರು ಹಾಗೂ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದರು.

ಈ ಉತ್ಸವನ್ನು ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಡಾ| ಸುಜಿತ್‌ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಟಿ. ಮುನಿರಾಜಯ್ಯ ಭಾಗವಹಿಸಲಿದ್ದಾರೆ ಎಂದರು.

ನಿರ್ದೇಶಕ ಸುರೇಶ್‌ ಅನಗಳ್ಳಿ ಮಾತನಾಡಿ, ಈ ಉತ್ಸವದಲ್ಲಿ ಭಾರತೀಯ ರಂಗಭೂಮಿಯ ಶ್ರೇಷ್ಠ ನಿರ್ದೇಶಕರ ಶ್ರೇಷ್ಠ ರಂಗಕೃತಿಗಳು ಪ್ರದರ್ಶಿತಗೊಳ್ಳಲಿವೆ. ಉತ್ತರ ತುದಿಯಿಂದ ಕೇರಳದ ವರೆಗಿನ ವೈವಿಧ್ಯಮಯ ನಾಟಕಗಳು ಈ ಉತ್ಸವದಲ್ಲಿ ಪ್ರದರ್ಶಿತಗೊಳ್ಳಲಿವೆ. ಹಿರಿಯ ತಲೆಮಾರಿನ ರಂಗ‌ ನಿರ್ದೇಶಕ ಹಬೀಬ್‌ ತನ್ವಿರ್‌, ಬನ್ಸಿಕೌಲ್‌, ಪ್ರಸನ್ನ ಮೊದಲಾದವರ ಪ್ರಸಿದ್ಧ ರಂಗ ಕೃತಿಗಳ ಜೊತೆಗೆ ಹೊಸ ತಲೆಮಾರಿನ ನಿರ್ದೇಶಕರಾದ ತಾನಿನ್‌ ಲೈಮಾ, ಅತುಲ ಪೇಠೆ, ಪ್ರಮೋದ್‌ ಶಿಗ್ಗಾಂವ್‌ ಅವರ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದರು.

ಆದಿವಾಸಿ ಕಲಾವಿದರ ನಯಾ ಥೀಯೇಟರ್‌, ದಿ ಪರ್ಫಾರ್ಮರ್, ವಿದೂಷಕ ಕಲಾವಿದರ ರಂಗ ವಿದೂಷಕ್‌, ರಂಗ ಶಾಲೆಯ ವಿದ್ಯಾರ್ಥಿಗಳ ಆರಂಗಮ್‌, ಥಿಯೇಟರ್‌ ಔಟ್‌ ರೀಚ್‌, ರಂಗಾಯಣ ಮೊದಲಾದ ತಂಡಗಳು ಈ ಅಪೂರ್ವ ಉತ್ಸವದಲ್ಲಿ ಪಾಲ್ಗೊಳ್ಳಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭಂಡಾರ್‌ಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ| ನಾರಾಯಣ ಶೆಟ್ಟಿ, ರಂಗ ನಿರ್ದೇಶಕ ವಸಂತ ಬನ್ನಾಡಿ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com