ನಿದ್ದೆ ಮಂಪರಿನಲ್ಲಿ ಕಲಾವಿದನ ಫಜೀತಿ. ಮಹಿಷಾಸುರ ನಾಪತ್ತೆ

ಬೈಂದೂರು : ಕಲಾವಿದ ಕೊಂಚ ಮೈಮೆರೆತರೂ ಆಗುವ ಎಡವಟ್ಟು ದೊಡ್ಡ ಗಂಡಾಂತರವನ್ನೇ ಉಂಟುಮಾಡುತ್ತದೆ. ಸಾವಿರಾರು ಜನರಿಗೆ ರಂಜನೆ ನೀಡಬೇಕಾದ ಯಕ್ಷಗಾನ ಕಲಾವಿದನೊಬ್ಬ ನಿದ್ರೆಯ ಮಂಪರಿನಲ್ಲಿ ಮಾಯವಾಗಿ ಆತಂಕ ಹುಟ್ಟಿಸಿದ ಘಟನೆ ಬೈಂದೂರು ಸಮೀಪದ ಗ್ರಾಮೀಣ ಭಾಗದ ಯಕ್ಷಗಾನವೊಂದರಲ್ಲಿ ನಡೆದಿದೆ.

ಬೈಂದೂರಿನ ರಾಷ್ಟ್ರೀಯ ಹೆದ್ದಾರಿಯ ಅನತಿ ದೂರದಲ್ಲಿ 'ದೇವಿಮಹಾತೆ¾' ಹರಕೆ ಬಯಲಾಟ ಆಯೋಜಿಸಲಾಗಿತ್ತು. ದೇವಿಮಹಾತೆ¾ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರವೇ ಅತ್ಯಂತ ಮುಖ್ಯ. ಆದರೆ ವೇಷಧರಿಸಿದ ಪಾತ್ರಧಾರಿ ಇದ್ದಕ್ಕಿದ್ದಂತೆ ನಾಪತ್ತೆಯಾದರೆ ...?!

ವೇಷಧರಿಸಿ ಪ್ರಥಮ ಪ್ರವೇಶದ ಬಳಿಕ ಮತ್ತೆ ರಂಗಸ್ಥಳ ಪ್ರವೇಶಕ್ಕೆ ಅಲ್ಪ ಸಮಯವಿರುವ ಕಾರಣ ಮಹಿಷಾಸುರನಿಗೆ ಒಂದಷ್ಟು ವಿಶ್ರಾಂತಿ ಪಡೆಯುವ ಮನಸ್ಸಾಯಿತು. ಸರಿ... ಆತ್ತಿತ್ತ ನೋಡುವಾಗ ಕಣ್ಣಿಗೆ ಬಿದ್ದದ್ದು ಅಲ್ಲೇ ನಿಂತಿದ್ದ ಗೂಡ್ಸ್‌ ರಿಕ್ಷಾ. ತನ್ನ ಬೃಹತ್‌ ದೇಹಕ್ಕೆ ಇದುವೇ ಸೂಕ್ತ ಎಂದುಕೊಂಡ ಮಹಿಷ ರಿಕ್ಷಾದ ಹಿಂಭಾಗದಲ್ಲಿ ಒರಗಿದ. ಕಣ್ಣು ಮುಚ್ಚಿದ್ದೇ ತಡ ನಿದ್ರಾದೇವಿ ಅಪ್ಪಿಕೊಂಡಳು. ಅಷ್ಟು ಹೊತ್ತು ಆಟ ನೋಡುತ್ತಿದ್ದ ರಿಕ್ಷಾ ಚಾಲಕನಿಗೆ ಆಟ ಸಾಕೆನಿಸಿತೋ ಏನೋ... ಸೀದಾ ಬಂದವನೇ ಹಿಂದೆಮುಂದೆ ನೋಡದೆ ತನ್ನ ರಿಕ್ಷಾವನ್ನು ಚಲಾಯಿಸುತ್ತ ಮನೆಯತ್ತ ಹೊರಟೇ ಬಿಟ್ಟ. ಸುಮಾರು ಒಂದು ಕಿ.ಮೀ. ದೂರ ಕ್ರಮಿಸುತ್ತಿದ್ದಂತೆ ರಿಕ್ಷಾದ ಹಿಂಭಾಗದಲ್ಲಿ ಯಾರೋ ಇರುವುದು ಅರಿವಿಗೆ ಬಂತು. ಹಿಂದಿರುಗಿ ನೋಡಿದರೆ ಬೃಹತ್‌ ರಕ್ಕಸರೂಪಿ!

ಕಾಡುದಾರಿಯಲ್ಲಿ ಭೂತವೋ ಪಿಶಾಚಿಯೋ ತನ್ನ ವಾಹನವನ್ನು ಏರಿರಬೇಕು ಎಂದು ಭೀತನಾದ ಚಾಲಕ ರಿಕ್ಷಾವನ್ನು ಮತ್ತಷ್ಟು ವೇಗವಾಗಿ ಚಲಾಯಿಸಿದ. 'ನಾನು ಭೂತವೂ ಅಲ್ಲ; ಪಿಶಾಚಿಯೂ ಅಲ್ಲ. ಯಕ್ಷಗಾನ ಕಲಾವಿದ ... ವಿಷಯ ಹೀಗೆ... ಹೀಗೆ' ಎಂದು ಮಹಿಷಾಸುರ ಪಾತ್ರಧಾರಿಯು ಚಾಲಕನಿಗೆ ಮನದಟ್ಟು ಮಾಡುವಷ್ಟರಲ್ಲಿ ರಿಕ್ಷಾ ಸುಮಾರು ನಾಲ್ಕು ಕಿ.ಮೀ. ದೂರವನ್ನು ಕ್ರಮಿಸಿತ್ತು. ಕೊನೆಗೆ ಚಾಲಕ ರಿಕ್ಷಾವನ್ನು ನಿಲ್ಲಿಸಿದನಾದರೂ ಡ್ರೈವರ್‌ ಕ್ಯಾಬಿನ್‌ನ ಬಾಗಿಲು ತೆರೆದು ಹೊರಬರುವ ಧೈರ್ಯ ತೋರಲಿಲ್ಲ. ಮಹಿಷಾಸುರ ಇಳಿಯುತ್ತಿದ್ದಂತೆ ರಿಕ್ಷಾ ಹೊರಟೇ ಹೋಯಿತು. ಕಾಡುದಾರಿಯಲ್ಲಿ ಮಹಿಷಾಸುರನ 'ಆರ್ಭಟ' ಅರಣ್ಯ ರೋದನವಾಯಿತು !

ಓಡೋಡಿ ಬಂದ ಮಹಿಷ !

ಆದದ್ದಾಯಿತು ಎಂದುಕೊಂಡು ವೇಷಧಾರಿಯು ಚೆಂಡೆ ಪೆಟ್ಟಿನ ಸದ್ದನ್ನು ಆಲಿಸುತ್ತಾ ಓಡೋಡಿ ರಂಗಸ್ಥಳದತ್ತ ಬರುವಷ್ಟರಲ್ಲಿ 'ಮಗನೇ ಮಹಿಷಾಸುರ' ಎಂದು ಕರೆಯುವ ಧ್ವನಿ ಕೇಳಿಸಿತು. ಇನ್ನು ಚೌಕಿಗೆ ಹೋಗಿ ಸುಧಾರಿಸಿಕೊಂಡು ಬರಲು ಸಮಯವಿಲ್ಲ ಎಂದುಕೊಂಡ ಮಹಿಷಾಸುರ ವೇಷಧಾರಿ ನೇರ ರಂಗಸ್ಥಳ ಪ್ರವೇಶಿಸಿದ. ಆದರೆ ಅಬ್ಬರಿಸಿ ಬೊಬ್ಬಿರಿಯಬೇಕಿದ್ದ ಮಹಿಷಾಸುರ ಭುಸ್‌ ಭುಸ್‌ ಎಂದು ಏದುಸಿರು ಬಿಡುತ್ತಿದ್ದ. ತಲೆ ಹಗುರವಾದಂತಿದೆಯಲ್ಲ ಎಂದು ನೋಡಿದರೆ ಓಡಿಬರುವ ರಭಸದಲ್ಲಿ ಕೋಡುಗಳು ದಾರಿಯಲ್ಲೆಲ್ಲೋ ಉದುರಿ ಹೋಗಿದ್ದವು !

ಕೊನೆಗೂ ರಸಭಂಗವಾಗದಂತೆ ಯಕ್ಷಗಾನ ಪ್ರದರ್ಶನ ಮುಂದುವರಿಯಿತು... !

ಅರುಣ ಕುಮಾರ್‌, ಶಿರೂರು | Feb 17, 2014
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com