ಕಾರ್ಕಳ: ತಾಲೂಕು ಕಚೇರಿ ಅವ್ಯವಸ್ಥೆ ವಿರುದ್ಧ 19ರಂದು ಬೃಹತ್ ಪ್ರತಿಭಟನೆ

ಉಡುಪಿ: ಕಾರ್ಕಳ ತಾಲೂಕು ಕಚೇರಿಯ ಆಡಳಿತ ಅವ್ಯವಸ್ಥೆ ವಿರೋಧಿಸಿ 19ರಂದು ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕಾರ್ಕಳ ವಲಯ ಪ್ರಗತಿಪರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಕಳ ತಾಲೂಕು ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ಜನರು ಒಂದು ಕೆಲಸಕ್ಕಾಗಿ ದಿನನಿತ್ಯವೂ ಕಚೇರಿಗೆ ಎಡತಾಕುವ ಪರಿಸ್ಥಿತಿ ಅಲ್ಲಿದೆ. ತಹಸೀಲ್ದಾರ್‌ರಿಂದ ಹಿಡಿದು ಕಚೇರಿಯ ಕಟ್ಟಕಡೆಯ ಸಿಬ್ಬಂದಿ ಕೂಡ ಜನರ ಬಗ್ಗೆ ತೀವ್ರ ಅಸಡ್ಡೆ ತೋರಿಸುತ್ತಿದ್ದಾರೆ ಮತ್ತು ವಿನಾಕಾರಣ ಜನರ ಕೆಲಸಗಳನ್ನು ಮಾಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಮಿತಿಯ ಕಾರ್ಮಿಕರ ವಿಭಾಗದ ನಾಯಕ ಶ್ರೀಧರ ಶೆಟ್ಟಿ, ತಾಲೂಕು ಕಚೇರಿಯಲ್ಲಿ ಹಳೆಯ ದಾಖಲೆ ಪತ್ರಗಳಿಗೆ ಸರಿಯಾದ ನಮೂನೆಯಲ್ಲಿ ಅರ್ಜಿ ಸಲ್ಲಿಸಿದರೂ ತಿಂಗಳುಗಟ್ಟಲೆ ಕಾಯಿಸಿ ಕಾರಣವಿಲ್ಲದೆ ದಾಖಲೆಗಳನ್ನು ನೀಡದೆ ತಿರಸ್ಕರಿಸಲಾಗುತ್ತಿದೆ. ಮಾಹಿತಿ ಹಕ್ಕಿನಲ್ಲಿ ಕೇಳಿದರೂ ಕಡತ ಲಭ್ಯ ಇಲ್ಲ ಎನ್ನುವ ಸಿದ್ಧ ಉತ್ತರ ನೀಡಲಾಗುತ್ತಿದೆ. ಈ ಬಗ್ಗೆ ಸಹಾಯಕ ಕಮಿಷನರ್‌ಗೆ ಅಪೀಲು ನೀಡಿದರೂ ಅವರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಅರ್ಜಿಯಲ್ಲಿ ಕೇಳಲಾದ ಮಾಹಿತಿಗಳು ಅಪೂರ್ಣ ಎಂದು ಹೇಳಿ ಅಪೀಲು ತಿರಸ್ಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಲಂಚ ನೀಡದೆ ಕೆಲಸವಾಗುವುದಿಲ್ಲ: ಸಕಾಲ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೂ ನಿಗದಿತ ದಿನದೊಳಗೆ ದಾಖಲೆಗಳನ್ನು ನೀಡುತ್ತಿಲ್ಲ. ಇಂತಹ ಅಧಿಕಾರಿಗಳಿಗೆ ದಿನಕ್ಕೆ ರು. 250 ದಂಡ ವಿಧಿಸಬೇಕು ಎಂದು ಕಾನೂನು ಇದ್ದರೂ ದಂಡ ವಿಧಿಸದೆ ಕಾನೂನು ಉಲ್ಲಂಘಿಸಿದವರನ್ನು ರಕ್ಷಿಸಲಾಗುತ್ತಿದೆ. ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗುತ್ತಿದೆ. ಲಂಚ ನೀಡದೇ ಇಲ್ಲಿ ಯಾವ ಕೆಲಸವೂ ಆಗುತ್ತಿಲ್ಲ ಎಂದು ಶ್ರೀಧರ ಶೆಟ್ಟಿ ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಸಮಿತಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಸಂಘಟನೆಗಳು ಸೇರಿ 19ರಂದು ಬೆಳಗ್ಗೆ 10.30ಕ್ಕೆ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾಯಕರಾದ ಶಿವಪ್ರಸಾದ್, ನಿತೀಶ್, ಸುಬ್ರಹ್ಮಣ್ಯ ಹೇರ್ಳೆ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com