ಮರವಂತೆ: ಸಾಧನಾ ಮಕ್ಕಳ ಮೇಳ ಸಂಪನ್ನ

ಬೈಂದೂರು: ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ಸಾಧನಾ ಆಶ್ರಯದಲ್ಲಿ ನಡೆಯುವ ವಾರ್ಷಿಕ ಮಕ್ಕಳ ಮೇಳ ಕಾರ್ಯಕ್ರಮ ಇಲ್ಲಿನ ಸರಕಾರಿ ಹಿಪ್ರಾ ಶಾಲೆಯ ಸಾಧನಾ ಮಂಟಪದಲ್ಲಿ ಶನಿವಾರ ಸಂಪನ್ನಗೊಂಡಿತು. 

ಊರಿನ ಐದು ಅಂಗನವಾಡಿಗಳ ಪುಟಾಣಿಗಳು, ಎರಡು ಕಿರಿಯ, ಒಂದು ಹಿರಿಯ ಪ್ರಾಥಮಿುಕ ಶಾಲೆ ಹಾಗೂ ಪ್ರೌಢಶಾಲೆಯ ಮಕ್ಕಳು ಒಂದೆಡೆ ಸೇರಿ ಪೋಷಕರೆದುರು ತಮ್ಮ ಪ್ರತಿಭೆ ಪ್ರದರ್ಶಿಸುವ ಈ ಕಾರ್ಯಕ್ರಮ ಮಕ್ಕಳಿಗೆ ಮೀಸಲು. ಹಿರಿಯರ ಪಾತ್ರ ಮಾರ್ಗದರ್ಶನ, ಪ್ರೋತ್ಸಾಹ, ಬೆಂಬಲಕ್ಕೆ ಸೀಮಿತ. 

ಕಾರ್ಯಕ್ರಮದ ಅಂಗವಾಗಿ ಮೊದಲು ನಡೆದ ಮಕ್ಕಳ ಸಭೆ ಹಿಪ್ರಾ ಶಾಲೆಯ ವಿದ್ಯಾರ್ಥಿಗಳಾದ ನಾಗಜ್ಯೋತಿ, ರಿಂಕು, ರಕ್ಷಿತಾ, ಅನೀಷಾ, ಶ್ರೀವರ್ಷಾ ಹಾಡಿದ 'ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ..' ಎಂಬ ಆಶಯ ಗೀತೆಯೊಂದಿಗೆ ಆರಂಭವಾಯಿತು. 

ಪ್ರೌಢಶಾಲೆಯ ವಿದ್ಯಾರ್ಥಿ ನಾಯಕ ಕೀರ್ತನ್ ಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರು ಸೂಕ್ತ ಅವಕಾಶ ಕಲ್ಪಿಸಿಕೊಟ್ಟರೆ ಮತ್ತು ಮಕ್ಕಳು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಮಕ್ಕಳ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮರವಂತೆಯ ಸಾಧನಾ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಉಪಕ್ರಮ ಸ್ತುತ್ಯರ್ಹ ಮತ್ತು ಅನುಕರಣೀಯ ಎಂದರು. 

ಮೇಳದ ಪೂರ್ವಭಾವಿಯಾಗಿ ಆಯಾ ಸಂಸ್ಥೆಗಳ ಮಟ್ಟದಲ್ಲಿ ನಡೆದ ಹತ್ತಾರು ಕ್ರೀಡಾ, ಶೈಕ್ಷಣಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಪ್ರದಾನ ಮಾಡಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮುಖಂಡ ಸುಜನ್ ಆರ್. ಬಿಲ್ಲವ ಊರಿನ ಎಲ್ಲ ಮಕ್ಕಳ ಪ್ರತಿಭಾ ಪ್ರದರ್ಶನ ಒಂದೆಡೆ ನಡೆಯಲು ಸಹಕಾರಿಯಾಗುವ ಸಾಧನಾ ಮಕ್ಕಳ ಮೇಳ ವಿಶಿಷ್ಟ ಕಾರ್ಯಕ್ರಮ ಎಂದರು. 

ಪೂರ್ವ ಕಿರಿಯ ಪ್ರಾಥಮಿಕ ಶಾಲೆಯ ಆದಿತ್ಯ ಹೆಬ್ಬಾರ್ ಸ್ವಾಗತಿಸಿದರು. ಕರಾವಳಿ ಕಿರಿಯ ಪ್ರಾಥಮಿಕ ಶಾಲೆಯ ಅನೀಷ್‌ರಾಜ್ ವಂದಿಸಿದರು. ಪ್ರೌಢಶಾಲೆಯ ನಿಶಾಂತ್ ಪೂಜಾರಿ ನಿರೂಪಿಸಿದರು. ಮಕ್ಕಳ ವೈವಿಧ್ಯಮಯ ಪ್ರತಿಭಾ ಪ್ರದರ್ಶನ ಪೋಷಕರನ್ನು ರಂಜಿಸಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com