ಬೈಂದೂರಿನಲ್ಲಿ ಲೀಡ್ ಕೊಡಿ: ಮಧು ಬಂಗಾರಪ್ಪ

ಕುಂದಾಪುರ: ಶಿವಮೊಗ್ಗ ಜಿಲ್ಲೆಯ ಚಿಂತೆ ಬಿಟ್ಟುಬಿಡಿ. ಬೈಂದೂರಿನಲ್ಲಿ ಅತ್ಯಧಿಕ ಲೀಡ್ ಕೊಡಿ. ನಿಮ್ಮ ಗೀತಾ ಜನಸೇವೆಗೆ ಬರುವುದು ನಿಶ್ಚಿತ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು. ಗುರುವಾರ ರಾತ್ರಿ ಕಂಡ್ಲೂರಿನಲ್ಲಿ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. 

ಗೀತಾ ಶಿವರಾಜ್‌ಕುಮಾರ್‌ಗೆ ರಾಜಕೀಯ ಹೊಸತಲ್ಲ. ತಂದೆಯೊಂದಿಗೆ ರಾಜಕೀಯದಲ್ಲಿ ಕೆಲಸ ಮಾಡಿದವರು. ಈಗ ಬಹಿರಂಗವಾಗಿ ನಿಮ್ಮ ಮುಂದೆ ಬಂದಿದ್ದಾರೆ. ಜನಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿಕೊಂಡರು. 

ತಂದೆಯ ದಾರಿಯಲ್ಲಿ ನಡೆಯುವೆ: ಬಂಗಾರಪ್ಪ ಅವರ ಆಶಯ ಈಡೇರಿಕಾಗಿ ಕಣದಲ್ಲಿದ್ದೇನೆ. ಅವರ ದಾರಿಯಲ್ಲೇ ನಡೆಯಬೇಕೆನ್ನುವುದು ನನ್ನ ಉದ್ದೇಶ. ರಾಜಕೀಯದ ಅನುಭವ ನನಗಿಲ್ಲ ಅನ್ನುವುದು ತಪ್ಪು ಗ್ರಹಿಕೆ. ತಂದೆ ಇದ್ದಾಗ ಅವರೊಂದಿಗೆ ಹಿಂಬದಿಯಲ್ಲಿ ನಿಂತು ಸಾಕಷ್ಟು ಕೆಲಸ ಮಾಡಿದ್ದೇನೆ. ರಾಜಕೀಯ ಪ್ರವೇಶದ ಹಿಂದೆ ಯಾವ ಅನ್ಯ ಉದ್ದೇಶವೂ ನನಗಿಲ್ಲ. ಬಂಗಾರಪ್ಪ ಜನರ ಹದಯದಲ್ಲಿ ನೆಲೆಸಿರುವವರು. ಬಡವರ ಬಂಧು ಆಗಿದ್ದವರು. ಬೈಂದೂರು ಕ್ಷೇತ್ರ ಬಂಗಾರಪ್ಪ ಅವರ ಪ್ರೀತಿಯ ಕ್ಷೇತ್ರ. ಬೈಂದೂರು ಕ್ಷೇತ್ರದಲ್ಲಿನ ಸಮಸ್ಯೆಗಳ ಅರಿವು ನನಗಿದೆ. ಅವಕಾಶ ಸಿಕ್ಕಲ್ಲಿ ಅದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವೆ. ಈ ಭಾಗದಲ್ಲಿನ ಮತದಾರರು ನನ್ನ ಕೈಹಿಡಿಯುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಗೀತಾ ಶಿವರಾಜ್‌ಕುಮಾರ್ ವಿಶ್ವಾಸದ ನುಡಿಗಳನ್ನಾಡಿದರು. ಜೆಡಿಎಸ್ ಮುಖಂಡರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಶ್ರೀಕಾಂತ ಅಡಿಗ, ಕಿಶೋರ್‌ಕುಮಾರ್, ರಂಜಿತ್‌ಕುಮಾರ ಶೆಟ್ಟಿ, ಸಂದೇಶ ಭಟ್, ಮನ್ಸೂರ್ ಮರವಂತೆ, ರಮೇಶ್ ಟಿ.ಟಿ.ರಸ್ತೆ ಉಪಸ್ಥಿತರಿದ್ದರು. 

ಅಬ್ಬರದ ಪ್ರಚಾರ: ಗೀತಾ ಶಿವರಾಜ್‌ಕುಮಾರ್ ಆಗಮನದ ಹಿನ್ನೆಲೆಯಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದು ಅವರಿಗೆ ಸಂಭ್ರಮದ ಸ್ವಾಗತ ಕೋರಿದರು. ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಅವರ ನಡುವೆ ಸಾಗಿದ ಗೀತಾ ಮತ ಯಾಚಿಸಿ ಅಬ್ಬರದ ಪ್ರಚಾರ ಕಾರ್ಯ ನಡೆಸಿದರು. 

ಬೈಂದೂರು ಕ್ಷೇತ್ರಕ್ಕೆ ಮೊದಲ ಆದ್ಯತೆ-ಗೀತಾ: ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಆರಿಸಿ ಬಂದಲ್ಲಿ ಬೈಂದೂರು ಕ್ಷೇತ್ರಕ್ಕೆ ನನ್ನ ಮೊದಲ ಆದ್ಯತೆ ಸಲ್ಲಲಿದೆ. ನನ್ನ ತಂದೆಯವರ ಅಪಾರ ಅನುಯಾ ಯಿಗಳು ಕ್ಷೇತ್ರದಲ್ಲಿದ್ದಾರೆ. ಅವರ ಋಣ ತೀರಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿದರು. 

ಗುರುವಾರ ಗುಡ್ಡಮ್ಮಾಡಿ ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪತಿ ಶಿವರಾಜ್‌ಕುಮಾರ್ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಡಾ. ರಾಜ್ ಕುಟುಂಬದ ಇತರ ಸದಸ್ಯರು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಭಾಗದ ಮತದಾರರ ಹುಮ್ಮಸ್ಸು ಕಂಡು ಬಹಳ ಖುಶಿಯಾಗಿದೆ. ಜಾತ್ಯತೀತ ನಿಲುವು ಹೊಂದಿರುವ ನಮ್ಮ ಪಕ್ಷಕ್ಕೆ ಈ ಭಾಗದಲ್ಲಿ ಅಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದರು. 

ಯಡಿಯೂರಪ್ಪ ಜಾತಿ ರಾಜಕಾರಣ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತಿ, ಹಣ, ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ. ಜಾತಿ ರಾಜಕಾರಣದ ವಿಷವರ್ತುಲ ಸಷ್ಟಿಸಿದ್ದಾರೆ. ಜೈಲಿಗೆ ಹೋಗಿ ಬಂದವರನ್ನು ನಮ್ಮ ಜನ ಸ್ವೀಕರಿಸಲಾರರು ಎಂದು ಅವರು ತಿಳಿಸಿದರು. 

ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ, ಜೆಡಿಎಸ್ ಬೈಂದೂರು ಬ್ಲಾಕ್ ಅಧ್ಯಕ್ಷ ರಂಜಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂದೇಶ ಭಟ್, ಜೆಡಿಎಸ್ ಹಿರಿಯ ನಾಯಕಿ ಶಾಲಿನಿ ಶೆಟ್ಟಿ ಕೆಂಚನೂರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com