ಆಧ್ಯಾತ್ಮಿಕ ಚಿಂತನೆಗಳಿಂದ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯ: ಡಾ. ಜಮಿರುಲ್ಲಾ ಷರೀಫ್

ಬೈಂದೂರು: 16ನೇ ಶತಮಾನದ ಸಂತ ಕವಿಯ ನೋವುಂಡ ಬದುಕಿನ ದರ್ಶನ ಕನಕದಾಸರ ಸಾಹಿತ್ಯದಲ್ಲಾಗುತ್ತದೆ. ಸಾರ್ವಕಾಲಿಕ ಮಾರ್ಗದರ್ಶನ ಅವರ ಕಾವ್ಯ ಮತ್ತು ಕೀರ್ತನೆಗಳಲ್ಲಿವೆ. ಪ್ರಸ್ತುತ ಸಮಾಜವನ್ನು ದಾರಿ ತಪ್ಪಿಸುತ್ತಿರುವ ಜಾತಿ ವ್ಯವಸ್ಥೆ ನಿರ್ಮೂಲನೆ ಮಾನವ ಪ್ರೀತಿ ಮತ್ತು ಆಧ್ಯಾತ್ಮಿಕ ಚಿಂತನೆಗಳಿಂದ ಸಾಧ್ಯವಾಗುತ್ತದೆ. ಅವುಗಳ ಮಹತ್ವ ಅರಿತಾಗ ಬದುಕು ಬೆಳಕಾಗಬಲ್ಲದು ಎನ್ನುವುದನ್ನು ಕನಕದಾಸರು ವಿಶ್ವಕ್ಕೆ ಸಾರಿದ್ದಾರೆ ಎಂದು ವಿಶ್ರಾಂತ ಪ್ರಿನ್ಸಿಪಾಲ್ ಡಾ. ಜಮಿರುಲ್ಲಾ ಷರೀಫ್ ಹೇಳಿದರು. 

ಬೆಂಗಳೂರು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಹಾಗೂ ಸುರಭಿ ಬೈಂದೂರು ಆಶ್ರಯದಲ್ಲಿ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನಕದಾಸರ ಕುರಿತ ಉಪನ್ಯಾಸ ವಾಚನ ಗಾಯನ, ರಸಗ್ರಹಣ ಶಿಬಿರದ 'ಮುತ್ತು ಬಂದಿದೆ ಕೇರಿಗೆ' ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. 

ಹಿಂಸೆ ಜಗತ್ತಿನ ಶಾಂತಿಯನ್ನು ನಾಶ ಮಾಡುತ್ತಿದೆ. ಕನಕದಾಸರು ಯುದ್ಧದ ದೃಶ್ಯ ಕಂಡು ದಂಡನಾಯಕರಿಂದ ಸಂತನಾಗಿ ಪರಿವರ್ತನೆಗೊಂಡರು. ಈ ಪರಿವರ್ತನೆಯಲ್ಲಿ ಯುದ್ಧವನ್ನು ದೂರವಿಟ್ಟು ಬದುಕಬೇಕೆಂಬ ಸಂದೇಶವಿದ್ದು ಕನಕದಾಸರು ಹೇಳಿದ ಕವಿಗಳಲ್ಲಿ ದಾಸರು, ದಾಸರಲ್ಲಿ ಕವಿಗಳು ಎಂಬ ಮಾತು ಮಹತ್ವದ್ದು ಎಂದರು. 

ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಅನಿಲ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಸಿಆರ್‌ಪಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ಸುರಭಿ ನಿರ್ದೇಶಕ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಮತ್ತು ತಂಡದವರಿಂದ ಗಾಯನ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com