ಹಾಲಾಡಿಯಲ್ಲಿ ಅಭ್ಯರ್ಥಿ ಪರ ಕಾಂಗ್ರೆಸ್‌ ಪ್ರಚಾರ ಅಭಿಯಾನ

ಹಾಲಾಡಿ: ಭೂ ಮಸೂದೆ ಕಾಯ್ದೆ ಮೂಲಕ ಬಡವರಿಗೆ ಭೂಮಿ ನೀಡಿದ ಕಾಂಗ್ರೆಸ್‌ ಪಕ್ಷ ಅಂದಿನಿಂದ ಇಂದಿನ ತನಕ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಬಡವರಿಗೆ ಸ್ವರ ನೀಡಿದೆ ಎಂದು ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.

ಅವರು ಹಾಲಾಡಿ ಪೇಟೆ ವಠಾರದಲ್ಲಿ ಮಂಗಳವಾರ ಜರಗಿದ ಕಾಂಗ್ರೆಸ್‌ ಪಕ್ಷದ ಸಾರ್ವಜನಿಕ ಪ್ರಚಾರ ಅಭಿಯಾನದಲ್ಲಿ ಮಾತನಾಡಿದರು.

ಬಡವರ ಪರ ನಿಂತ ಕಾಂಗ್ರೆಸ್‌

ಕೇಂದ್ರ ಸರಕಾರ ಆಹಾರ ಬದ್ಧತೆ ಕಾಯ್ದೆ ಜಾರಿಗೆ ತಂದರೆ ರಾಜ್ಯ ಸರಕಾರ ಒಂದು ರೂ.ನಲ್ಲಿ ಅಕ್ಕಿ ನೀಡುತ್ತಿದೆ. ಸರಕಾರದ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡವರಿಗೆ ಮಾರುಕಟ್ಟೆಯ ಮೂರು ಪಟ್ಟು ಹಣ ನೀಡುವಂತೆ ಆದೇಶ ನೀಡಲಾಗಿದೆ. ಹೀಗೆ ಕಾಂಗ್ರೆಸ್‌ ಸರಕಾರ ಅನೇಕ ಯೋಜನೆ ರೂಪಿಸಿ ಬಡವರ ಪರ ನಿಂತಿದೆ ಎಂದರು.

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಮಾತನಾಡಿ, ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠವಾಗಿದೆ. ಈ ಭಾರಿ ಕ್ಷೇತ್ರದಲ್ಲಿ ಕಾರ್ಯಕರ್ತರು ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಲು ಪಣತೊಟ್ಟಿದ್ದಾರೆ. ಈ ಚುನಾವಣೆ ಮೋದಿ ಕಾಂಗ್ರೆಸ್‌ ನಡುವಿನ ಚುನಾವಣೆ ಅಲ್ಲ. ಅಭ್ಯರ್ಥಿಗಳ ನಡುವಿನ ಚುನಾವಣೆ. ಇದರಿಂದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ರೀತಿಯಲ್ಲಿ ಫಲಿತಾಂಶ ಹೊರಬೀಳಲಿದೆ ಎಂದರು.

ಹಲವು ಯೋಜನೆ ಮಂಜೂರು

ಸಂಸದನಾಗಿ ಕಡಿಮೆ ಅವಧಿಯಲ್ಲಿ ಕ್ಷೇತ್ರದಲ್ಲಿ ಅನೇಕ ಜನಪರ ಕೆಲಸ ಮಾಡಿದ್ದೇನೆ. ಕೇಂದ್ರ ಭೂ ಸಾರಿಗೆ ಇಲಾಖೆಯಿಂದ ಸಾವಿರಾರು ಕೋ. ರೂ. ರಸ್ತೆಗೆ ಅನುದಾನ ತಂದಿದ್ದೇನೆ. ಕುಂದಾಪುರದಿಂದ ಗೋವಾದ ತನಕ ಚತುಷ್ಪಥ ರಸ್ತೆ, ಕುಂದಾಪುರ ಪೇಟೆ ಇಬ್ಟಾಗವಾಗದಂತೆ ಪ್ಲೈವರ್‌ ನಿರ್ಮಾಣ, ದೇಶದ ನಾನಾ ಭಾಗಗಳ ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆ, ಎಸ್‌.ಸಿ., ಎಸ್‌.ಟಿ. ಕಾಲೋನಿಗಳಿಗೆ ರಸ್ತೆ ಹಾಗೂ ಕುಡಿಯುವ ನೀರಿನ ಯೋಜನೆ, ಪ್ರತಿ ಗ್ರಾ. ಪಂ.ಗಳಿಗೆ ಕಂಪ್ಯೂಟರ್‌ ಕೊಡುಗೆ ಹೀಗೆ ಹಲವು ಯೋಜನೆಗಳನ್ನು ಸಂಸದನ ನೆಲೆಯಲ್ಲಿ ಮಂಜೂರು ಮಾಡಿದ್ದೇನೆ ಎಂದರು.

ಬಡವರಿಗೆ ಹಲವು ಯೋಜನೆ

ಸಚಿವ ವಿನಯ ಕುಮಾರ ಸೊರಕೆ ಮಾತನಾಡಿ, ಕೇಂದ್ರ ಸರಕಾರ ಆಹಾರ ಬದ್ಧತೆ ಕಾಯ್ದೆ ಜಾರಿಗೆ ತರುವ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ನೀಡುವಂತೆ ಮಾಡಿದೆ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲದ ಬಡ್ಡಿಯನ್ನು ಪಾವತಿಸುತ್ತಿದೆ. ವಿಧವೆಯರಿಗೆ ಹಾಗೂ ಗಂಡ ಬಿಟ್ಟವರಿಗೆ ಮಾಶಾಸನ ನೀಡುತ್ತದೆ. ಭೂ ಮಸೂದೆ ಕಾಯ್ದೆ ತರುವ ಮೂಲಕ ಬಡವರಿಗೆ ನೇರವಾಗಿದೆ ಎಂದರು.

ಈ ಸಂದರ್ಭ ಶಾಸಕ ಕೆ. ಗೋಪಾಲ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎನ್‌. ಗಪೂರ್‌, ಅಶೋಕ್‌ ಕೊಡವೂರು, ಅಮರನಾಥ ಶೆಟ್ಟಿ, ರಾಧಾಕೃಷ್ಣ ಅಡಿಗ ಹಾಲಾಡಿ, ಆಸ್ಕರ್‌ ಫೆರ್ನಾಂಡಿಸ್‌ ಪತ್ನಿ ಬ್ಲೋಸಂ ಫೆರ್ನಾಂಡಿಸ್‌, ವಂಡ್ಸೆ ಬ್ಲಾಕ್‌ ಅಧ್ಯಕ್ಷ ಎಸ್‌. ಸಂಜೀವ ಶೆಟ್ಟಿ, ಪಕ್ಷದ ಮುಖಂಡರಾದ ಮಾಣಿ ಗೋಪಾಲ, ಕೊಳ್ಕೆಬೈಲು ಕಿಶನ್‌ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ, ರಾಮಕೃಷ್ಣ ಹೇಳೆì, ಸತೀಶ್‌ ಕಿಣಿ ಬೆಳ್ವೆ, ಚಿತ್ತರಂಜನ್‌ ರಾವ್‌, ವಿಕಾಸ್‌ ಹೆಗ್ಡೆ ಬಸೂÅರ್‌, ಪ್ರಥ್ವಿರಾಜ್‌ ಶೆಟ್ಟಿ, ಜಯಶೀಲ ಶೆಟ್ಟಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದರು.

ಹಾಲಾಡಿ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಕೆ. ಜಯರಾಮ ಶೆಟ್ಟಿ ಸ್ವಾಗತಿಸಿದರು. ಕುಂದಾಪುರ ಬ್ಲಾಕ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರ್ಯಪ್ರಕಾಶ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com