ಬಂಗಾರಪ್ಪ ಋಣ ತೀರಿಸಿ: ಮಧು ಬಂಗಾರಪ್ಪ

ಹೆಮ್ಮಾಡಿ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನಾಡಿನ ಜನತೆಗೆ, ಶಿವಮೊಗ್ಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಋಣ ತೀರಿಸುವ ಹೊತ್ತು ಬಂದಿದೆ. ಗೀತಾ ಶಿವರಾಜ್‌ಕುಮಾರ್ ಅವರಿಗಾಗಿ ಬಂಗಾರಪ್ಪ ಅಭಿಮಾನಿಗಳು ಮುಂದೆ ಬರಬೇಕಾಗಿದೆ. ಜಾತಿ, ಧರ್ಮ ರಾಜಕಾರಣ ಮಾಡುತ್ತ ಸಮಾಜ ಒಡೆಯುವ ಕೆಲಸ ಮಾಡಿಕೊಂಡು ಬಂದಿರುವ ಯಡಿಯೂರಪ್ಪ ಮತ್ತವರ ಪಕ್ಷವನ್ನು ಸೋಲಿಸಬೇಕು ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ. 
ಹೆಮ್ಮಾಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುನ್ಸಿಪಾಲಿಟಿ ಹಂತದಿಂದ ನೇರವಾಗಿ ಪಾರ್ಲಿಮೆಂಟ್ ಪ್ರವೇಶಿಸಿದ ಬಿ.ವೈ. ರಾಘವೇಂದ್ರ ಅವರನ್ನು ಮರಳಿ ಮುನ್ಸಿಪಾಲಿಟಿಗೆ ಕಳುಹಿಸುವ ಕೆಲಸ ಯಡಿಯೂರಪ್ಪ ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆಸಿ ಜೈಲು ಸೇರಿ ಮಾತೃ ಪಕ್ಷದ ವಿರುದ್ಧ ಹೀನಾಯವಾಗಿ ಮಾತನಾಡಿದ್ದ ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ನಿಂತು ಸ್ಪರ್ಧಿಸಲು ಯಾವ ನೈತಿಕತೆಯೂ ಇಲ್ಲ. ಶಿವಮೊಗ್ಗ ಕ್ಷೇತ್ರದ 7 ಕ್ಷೇತ್ರಗಳಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ. ಮೂವರು ಶಾಸಕರನ್ನು ಹೊಂದಿರುವ ಜೆಡಿಎಸ್ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ ಎಂದರು. 

ರಾಜ್ ಕುಟುಂಬದ ಒಪ್ಪಿಗೆ ಇದೆ: ಗೀತಾ ಶಿವರಾಜ್‌ಕುಮಾರ್ ಕಣದಲ್ಲಿರುವುದು ರಾಜ್ ಕುಟುಂಬದ ಒಪ್ಪಿಗೆಯಿಂದಲೇ. ಡಾ. ರಾಜ್‌ಕುಮಾರ್ ಅವರಿಗೆ ರಾಜಕೀಯ ಇಷ್ಟವಿಲ್ಲದ ಕ್ಷೇತ್ರವಾಗಿತ್ತು. ಹಾಗಂತ ಯಾವತ್ತೂ ಅವರು ತಮ್ಮ ಕುಟುಂಬವನ್ನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಹೇಳಿಲ್ಲ. ಶಿವರಾಜ್‌ಕುಮಾರ್ ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಗೀತಾ ಶಿವರಾಜ್‌ಕುಮಾರ್ ನನ್ನ ಚುನಾವಣೆ ಸಂದರ್ಭ ದುಡಿದವರು. ಇಡೀ ರಾಜ್ಯದಲ್ಲಿ ಜನರ ಆಯ್ಕೆಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೆಂದರೆ ಗೀತಾ ಮತ್ತು ಎಚ್.ಡಿ. ಕುಮಾರಸ್ವಾಮಿ ಮಾತ್ರ. ಗೀತಾ ಅವರಿಗೆ ರಾಜಕೀಯ ಅನುಭವವಿದೆ. ಕ್ಷೇತ್ರದ ಪರಿಚಯವೂ ಇದೆ. ಅವರನ್ನು ದುರ್ಬಲವಾಗಿ ಕಾಣುವ ಪ್ರಶ್ನೆ ಎಂದಿಗೂ ಉದ್ಭವಿಸದು. ಗೀತಾ ಬಂಗಾರಪ್ಪ ಅವರ ಮಗಳಾಗಿ ಕಣದಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದ ಅವರು, ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಬಹುಮತ ಲಭಿಸಿದಾಗ ಮಾತ್ರ ರಾಜ್ಯದ ಪ್ರಗತಿ ಸಾಧ್ಯ ಎಂದು ಪ್ರತಿಪಾದಿಸಿದರು. 

ಮೋದಿ ಅಲೆಯಿಲ್ಲ: ನರೇಂದ್ರ ಮೋದಿ ಅಲೆ ಅನ್ನುವುದು ಕೇವಲ ಭ್ರಮೆ ಮಾತ್ರ. ಒಂದೊಮ್ಮೆ ಮೋದಿ ಈ ದೇಶದ ಪ್ರಧಾನಿಯಾದರೆ ದೇಶ ಅಭದ್ರತೆ ಎದುರಿಸಲಿದೆ. ತೃತೀಯ ರಂಗ ಬಲವರ್ಧನೆಗೆ ಜೆಡಿಎಸ್ ಪ್ರಧಾನ ಪಾತ್ರ ವಹಿಸಿದೆ. ಕೋಮುವಾದಿಗಳನ್ನು ಅಧಿಕಾರಕ್ಕೆ ತರಕೂಡದು. ಯಡಿಯೂರಪ್ಪಗೆ ಅನುಕೂಲವಾಗಲೆಂದು ಕಾಂಗ್ರೆಸ್‌ನಲ್ಲಿ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ ಎಂಬುವುದನ್ನು ನಾನು ಒಪ್ಪೋದಿಲ್ಲ. ಇದೊಂದು ಸ್ಪರ್ಧೆ. ಇದರಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಅವರು ಅಭಿಪ್ರಾಯಪಟ್ಟರು. 

ಕುಟುಂಬ ವ್ಯಾಜ್ಯಬಗ್ಗೆ ಮಾತನಾಡುವುದಿಲ್ಲ: ಚುನಾವಣೆ ಈ ಸಂದರ್ಭ ಕುಟುಂಬಕ್ಕೆ ಸಂಬಂಧಿಸಿದ ವ್ಯಾಜ್ಯದ ಕುರಿತು ಮಾತನಾಡಲು ಬಯಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ನಮ್ಮದೇನಿದ್ದರೂ ಚುನಾವಣೆ ಎದುರಿಸುವುದಷ್ಟೇ. ಸತ್ಯ ಆಮೇಲೆ ಗೊತ್ತಾಗಲಿದೆ. ನಾನು ಹತಾಶನಾಗಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. 

ಜೆಡಿಎಸ್ ಪ್ರಮುಖ ರಾಜಕೀಯ ಶಕ್ತಿ: ರಾಜ್ಯದಲ್ಲಿ ಜೆಡಿಎಸ್ ಪ್ರಮುಖ ರಾಜಕೀಯ ಶಕ್ತಿಯಾಗಿದೆ ಅನ್ನುವುದು ಈಗಾಗಲೆ ಶ್ರುತಪಟ್ಟಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಧನಂಜಯ್‌ಕುಮಾರ್ ತಿಳಿಸಿದರು. ದೇಶಕ್ಕೆ ದೇವೆಗೌಡರು ನೀಡಿದ ಕೊಡುಗೆ ಯಾರು ನೀಡಿಲ್ಲ. ಅವರು ಪ್ರಧಾನಿಯಾಗಿದ್ದ ಸಂದರ್ಭ ನಾನು ಸಂಸದನಾಗಿದ್ದೆ. ಆ ಸಂದರ್ಭ ಅವರು ತೆಗೆದುಕೊಂಡ ಕಾರ್ಯಕ್ರಮಗಳು ಇಂದು ದೇಶದ ಪ್ರಯೋಜನಕ್ಕೆ ಬಿದ್ದಿವೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ನನಗೇನೂ ಹೊಸದಲ್ಲ. ಈ ಕ್ಷೇತ್ರದಲ್ಲಿ ಹಿಂದೆ ಬಹಳಷ್ಟು ಬಾರಿ ಓಡಾಡಿದ್ದೇನೆ. ಗೆಲುವಿಗಾಗಿ ಶ್ರಮಿಸಲಿದ್ದೇನೆ ಎಂದು ಹೇಳಿದರು. 

ಜೆಡಿಎಸ್ ಮುಖಂಡರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಕೆಂಚನೂರು ಶಾಲಿನಿ ಶೆಟ್ಟಿ, ಗುಲಾಂ ಅಹಮದ್, ಸಬ್ಲಾಡಿ ಮಂಜಯ್ಯ ಶೆಟ್ಟಿ, ಶ್ರೀಕಾಂತ ಅಡಿಗ ಕೊಲ್ಲೂರು, ಜಗದೀಶ ಯಡಿಯಾಳ, ಜಗನ್ನಾಥ ಶೆಟ್ಟಿ, ಮನ್ಸೂರ್ ಮರವಂತೆ, ಸಂದೇಶ ಭಟ್ಟ, ರಂಜಿತ್‌ಕುಮಾರ ಶೆಟ್ಟಿ, ಅಣ್ಣಪ್ಪ ಪೂಜಾರಿ ನಾಡಾ ಉಪಸ್ಥಿತರಿದ್ದರು. 

ಆರೋಪ ಹತಾಶೆಯ ಪ್ರತೀಕ: ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ರಾಜ್ ಕುಟುಂಬವನ್ನು ಒಡೆದಿದ್ದಾರೆನ್ನುವ ಕುಮಾರ ಬಂಗಾರಪ್ಪ ಆರೋಪ ಅವರ ಹತಾಶತನವನ್ನು ತೋರಿಸಿದೆ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕುಮಾರ ಬಂಗಾರಪ್ಪ ಆರೋಪದಿಂದ ತಮಗೆ ತುಂಬಾ ನೋವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಚರ್ಚಿಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com