ಕಾಂಗ್ರೆಸ್ ಮುಕ್ತ ಭಾರತ ಹೇಳಿಕೆ ಮೂರ್ಖತನದ್ದು: ಆಸ್ಕರ್

ಕುಂದಾಪುರ: ದೇಶದ ಚರಿತ್ರೆ, ಇತಿಹಾಸ ಗೊತ್ತಿಲ್ಲದ ಮಂದಿಯಿಂದ ಮಾತ್ರ ಕಾಂಗ್ರೆಸ್ ಮುಕ್ತ ಭಾರತ ಹೇಳಿಕೆ ಬರಲು ಸಾಧ್ಯ. ಇಂತಹ ಮೂರ್ಖತನದ ಹೇಳಿಕೆಗೆ ದೇಶದ ಮತದಾರರು ಯಾವತ್ತೂ ಬೆಲೆ ಕೊಡಲಾರರು. ದೇಶದ ಸ್ವಾತಂತ್ರ್ಯಕ್ಕೆ ತಂದುಕೊಟ್ಟ ಕಾಂಗ್ರೆಸ್‌ಗೆ ದೇಶದ ಬಡವರು, ದೇಶಪ್ರೇಮಿಗಳೇ ಶ್ರೀರಕ್ಷೆ ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಗುಡುಗಿದ್ದಾರೆ. 

ಹೆಮ್ಮಾಡಿ ಸರ್ಕಲ್‌ನಲ್ಲಿ ಶಿವಮೊಗ್ಗ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಪರ ಸೋಮವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಹಸಿರು ಕ್ರಾಂತಿ, ಉದ್ಯೋಗ ಭದ್ರತೆ, ಭೂ ಸುಧಾರಣೆ ಕಾಯಿದೆ, ಬ್ಯಾಂಕ್ ರಾಷ್ಟ್ರೀಕರಣದಿಂದ ಹಿಡಿದು 1 ರೂ.ಗೆ 1 ಕೆಜಿ ಅಕ್ಕಿ ಕೊಡುವ ಅನುಪಮ ಕೆಲಸ ಕಾರ್ಯ ಮಾಡಿದ ಕಾಂಗ್ರೆಸ್‌ಗೆ ಬಿಜೆಪಿಯ ಪಾಠ ಅಗತ್ಯ ಇಲ್ಲ. ಬಿಜೆಪಿ ನಾಯಕರೊಂದಿಗೆ ಊಟ ಮಾಡಬೇಕಾದರೆ ಎರಡೂವರೆ ಲಕ್ಷ ಕೊಡಬೇಕು, ಆಮ್ ಆದ್ಮಿ ನಾಯಕರೊಂದಿಗೆ ಊಟ ಮಾಡಬೇಕಾದರೆ 10 ಸಾವಿರ ಕೊಡಬೇಕಂತೆ. ಆದರೆ ಕಾಂಗ್ರೆಸ್ ಪಕ್ಷ ಈ ದೇಶದ ಮಹಿಳೆಯೊಬ್ಬಳು ತನ್ನ ಸಂಸಾರದ ಹೊಟ್ಟೆ ತಣಿಸಿ ಆಕೆಯೂ ಊಟ ಮಾಡಬೇಕೆಂದು ಬಯಸುತ್ತಿದೆ. ಇದು ಸೋನಿಯಾ ಗಾಂಯವರ ನಿಲುವು ಆಗಿದೆ ಎಂದರು. 

ದೇಶದ ಅಭಿವೃದ್ಧಿಯನ್ನು ಜನಸಂಘದ ಕಾಲದಿಂದಲೂ ಬಿಜೆಪಿ ವಿರೋಸುತ್ತಲೇ ಬಂದಿದೆ. ಆ ಪಕ್ಷಕ್ಕೆ ದೇಶದ ಬಡವರು ಬೇಕಾಗಿಲ್ಲ. ಸ್ವಾತಂತ್ರ್ಯ ದೊರಕುವ ಸಂದರ್ಭ ದೇಶದಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟವಿತ್ತು. ಇಂದು ಜಗತ್ತಿನ ಬಲಿಷ್ಠ ರಾಷ್ಟ್ರವಾಗಿದ್ದರೆ ಅದಕ್ಕೆ ಕಾಂಗ್ರೆಸ್‌ನ ಕೊಡುಗೆ ಇದೆ ಎಂದು ಅವರು ತಿಳಿಸಿದರು. 

ಉಡುಪಿ-ಚಿಕ್ಕಮಗಳೂರು ಮರು ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಪರ್ವ ಆರಂಭಗೊಂಡಿದೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಟ್ಟಾ ಕಾರ್ಯಕರ್ತ ಮಂಜುನಾಥ ಭಂಡಾರಿ ರ್ಸ್ಪಸುತ್ತಿದ್ದಾರೆ ಅನ್ನುವುದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ರ್ಸ್ಪಸುತ್ತಿದೆ ಅನ್ನುವುದನ್ನು ಕಾರ್ಯಕರ್ತರು ಮನಗಾಣಬೇಕು. ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ 30 ಸಾವಿರ ಲೀಡ್ ದೊರಕಿದ್ದು ಈ ಚುನಾವಣೆಯಲ್ಲಿ ಅದು 50 ಸಾವಿರ ಗಡಿ ದಾಟುತ್ತದೆ. ಇಲ್ಲಿ ಯಾರ ಗಿಮಿಕ್ಕೂ ನಡೆಯೋದಿಲ್ಲ ಎಂದು ಅಬ್ಬರಿಸಿದರು. 

ಸಚಿವ ವಿನಯಕುಮಾರ ಸೊರಕೆ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ, ಬ್ಲೋಸಂ ಫರ್ನಾಂಡಿಸ್, ಕಾಂಗ್ರೆಸ್ ನಾಯಕರಾದ ಎಂ.ಎ. ಗಫೂರ್, ಸಂಪಿಗೇಡಿ ಸಂಜೀವ ಶೆಟ್ಟಿ, ವಾಸುದೇವ ಯಡಿಯಾಳ, ಅನಂತ ಮೊವಾಡಿ, ರಾಜು ಪೂಜಾರಿ, ರಾಜು ದೇವಾಡಿಗ, ಅಮರನಾಥ ಬೆಂಗಳೂರು, ರಮೇಶ ಗಾಣಿಗ, ವಿಕಾಸ ಹೆಗ್ಡೆ, ಮಂಜಯ್ಯ ಶೆಟ್ಟಿ ಹರ್ಕೂರು, ಸಾಧು ಎಸ್. ಬಿಲ್ಲವ, ಶರತ್‌ಕುಮಾರ ಶೆಟ್ಟಿ, ಸುಬ್ರಹ್ಮಣ್ಯ ಪೂಜಾರಿ ಉಪಸ್ಥಿತರಿದ್ದರು. ಚಂದ್ರ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com