ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಬುಧವಾರ ತಮ್ಮ ನಾಯಕರ ಜತೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಅವರ ಪತ್ನಿ ಬ್ಲೋಸಂ ಫರ್ನಾಂಡಿಸ್, ಮಾಜಿ ಸಚಿವೆ ಮೋಟಮ್ಮ, ಸಚಿವ ವಿನಯ ಕುಮಾರ್ ಸೊರಕೆ, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯ ಕುಮಾರ್ ಈ ಸಂದರ್ಭದಲ್ಲಿ ಆಗಮಿಸಿದ್ದರು. ಅಭ್ಯರ್ಥಿ ಸೇರಿದಂತೆ ಆರು ಮಂದಿ ಇರುವುದು ನಿಯಮಕ್ಕೆ ವಿರುದ್ಧವಾಗಿರುವುದರಿಂದ ಪೊಲೀಸರ ಸೂಚನೆ ಮೇರೆಗೆ ವಿನಯ ಕುಮಾರ್ ಸೊರಕೆಯವರೇ ಹಿಂದಕ್ಕೆ ಸರಿಯಬೇಕಾಯಿತು. ಜಯಪ್ರಕಾಶ್ ಹೆಗ್ಡೆ ಸಲ್ಲಿಸಿದ ನಾಲ್ಕು ನಾಮಪತ್ರದಲ್ಲಿ ಒಂದರ ಸೂಚಕರೂ ಸೊರಕೆಯಾಗಿದ್ದರು. 

ಹಗರಣವಲ್ಲ-ಆಸ್ಕರ್: 2 ಜಿ. ಸ್ಪೆಕ್ಟ್ರಂ ಹಗರಣ, ಕಲ್ಲಿದ್ದಲು ಹಗರಣ ಗಳು ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಸ್ಕರ್ ಫರ್ನಾಂಡಿಸ್, ಅವೆರಡು ಹಗರಣಗಳೇ ಅಲ್ಲ. 2ಜಿ ಸ್ಪೆಕ್ಟ್ರಂನಲ್ಲಿ ಹಣ ನೀಡಿದವರು ಯಾರು, ಹಣ ಪಡೆದವರು ಯಾರು? ಎಲ್ಲಿ ನಡೆಯಿತು? ಲಾಭ ಗಳಿಸಿದವರು ಯಾರು? ಎಂದು ಮರು ಪ್ರಶ್ನಿಸಿದರು. ಅದೇ ರೀತಿ ಕಲ್ಲಿದ್ದಲು ಕೂಡ ಹಗರಣವಲ್ಲ. ಒಂದೇ ಒಂದು ಟನ್ ಕಲ್ಲಿದ್ದಲು ಹೋಗಿಲ್ಲ. ಯಾವುದೇ ಘಟಕ ತೆರೆದಿಲ್ಲ ಎಂದು ಸಮರ್ಥಿಸಿ ಕೊಂಡರು. 

ಬೇರೆಯವರ ಬಗ್ಗೆ ಮಾತನಾಡುವುದಿಲ್ಲ. ಸ್ವಾತಂತ್ರ್ಯ ಪೂರ್ವ ಮತ್ತು ಆನಂತರ ಮಾಡಿದ ಸಾಧನೆಯೇ ಕಾಂಗ್ರೆಸ್‌ಗೆ ಶ್ರೀರಕ್ಷೆ. ಮೊದಲ ಯುಪಿಎ ಅಧಿಕಾರಕ್ಕೆ ಬರುವ ಮುನ್ನ ಚುನಾವಣೆ ಸಂದರ್ಭದಲ್ಲಿ ಕೂಡ ಮಾಧ್ಯಮಗಳು ಯುಪಿಎ ಪರವಾಗಿ ಇರಲಿಲ್ಲ. ಈಗಲೂ ಇಲ್ಲ. ಆದರೆ ಯುಪಿಎ ಅಧಿಕಾರಕ್ಕೆ ಬಂದಿದೆ. ಜನರ ಪರವಾಗಿ ಕೆಲಸ ಮಾಡಿದೆ. ಕಳೆದ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಪಡೆದ ಸೀಟುಗಳಿಗಿಂತ ಈ ಬಾರಿ ಅಧಿಕ ಸೀಟು ಪಡೆಯಲಿದೆ. ಯುಪಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. 

ಒಂದು ವರ್ಷ 11 ತಿಂಗಳಲ್ಲಿ ನಾನು ಮಾಡಿದ ಕೆಲಸ, ಸಂಸತ್‌ನಲ್ಲಿ ನನ್ನ ಪಾತ್ರಗಳನ್ನು ಜನ ನೋಡಿದ್ದಾರೆ. ಅವರು ಮತ ನೀಡುತ್ತಾರೆ. ಒಂದು ಲಕ್ಷ ಮತಗಳ ಸಮೀಪದ ಅಂತರದಿಂದ ಗೆಲುವು ಸಾಧಿಸಲಿದ್ದೇನೆ. ಕುಂದಾಪುರದಲ್ಲಿ ಹಾಲಾಡಿ ಬಣ ಪೂರ್ತಿಯಾಗಿ ಬಿಜೆಪಿಗೆ ಹೋಗಿಲ್ಲ. ಒಂದು ವಿಭಾಗವಷ್ಟೆ ಹೋಗಿದೆ. ಕಳೆದ ಬಾರಿ ಹಾಲಾಡಿಯವರು ಬಿಜೆಪಿಯಲ್ಲೇ ಇದ್ದರು. ಆಗ ಗೆಲುವು ಸಾಧಿಸಿದವನಿಗೆ ಈಗ ಕಷ್ಟವಲ್ಲ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. 

3 ಪಟ್ಟು ಆಸ್ತಿ ಹೆಚ್ಚಳ: ಕೆ. ಜಯಪ್ರಕಾಶ್ ಹೆಗ್ಡೆ ಅವರು 7.80 ಕೋಟಿ ರೂ. ಆಸ್ತಿ ಹೊಂದಿದ್ದಾರೆ. 2012ರ ಲೋಕಸಭೆ ಮರು ಚುನಾವಣೆ ಸಂದರ್ಭವಿದ್ದ 26.36 ಲಕ್ಷ ರೂ. ಚರಾಸ್ತಿ 25.84 ಲಕ್ಷ ರೂ.ಗೆ ಇಳಿದಿದೆ. ಪತ್ನಿ ಹೆಸರಲ್ಲಿದ್ದ 25.80 ಲಕ್ಷ ರೂ. ಚರಾಸ್ಥಿ 37.31 ಲಕ್ಷ ರೂ.ಗೆ ಏರಿದೆ. 

2012ರಲ್ಲಿದ್ದ 2.63 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ 7.54 ಕೋಟಿ ರೂ.ಗೆ ಹೆಚ್ಚಿದೆ. ಪತ್ನಿ ಹೆಸರಲ್ಲಿದ್ದ 25.80 ಲಕ್ಷ ರೂ. ಸ್ಥಿರಾಸ್ತಿ 86.30 ಲಕ್ಷ ರೂ.ಗೇರಿದೆ. 2012ರಲ್ಲಿ 1.19 ಕೋಟಿ ರೂ. ಸಾಲವೀಗ 85ಲಕ್ಷ ರೂ.ಗೆ ಇಳಿದಿದೆ. ಪತ್ನಿ ಹೆಸರಲ್ಲಿದ್ದ 90.53 ಲಕ್ಷ ರೂ. ಸಾಲ ಈಗ 81.41ಲಕ್ಷ ರೂ. ಇದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com