ಗೀತಾ ಶಿವರಾಜ್‌ ಕುಮಾರ್‌ ಕೊಲ್ಲೂರು ಭೇಟಿ

ಕೊಲ್ಲೂರು: ಶಿವಮೊಗ್ಗ ಜನರ ನೇರ ಸಂಪರ್ಕ ಹೊಂದಿರುವುದರಿಂದ ಈ ಬಾರಿಯ ಬೈಂದೂರು - ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತನಗೆ ಗೆಲುವು ಖಚಿತ ಎಂಬ ಆತ್ಮವಿಶ್ವಾಸ ಇದೆ. ತಂದೆಯವರಾದ ದಿವಂಗತ ಬಂಗಾರಪ್ಪನವರ ಸುದೀರ್ಘ‌ ರಾಜಕೀಯ ಜೀವನದಲ್ಲಿ ಅವರಿಂದ ಬಹಳಷ್ಟು ಕಲಿತಿದ್ದೇನೆ. ಅವರ ನೆರಳಲ್ಲಿ ಬೆಳೆದಿರುವ ತನಗೆ ರಾಜಕೀಯ ಹೊಸತಲ್ಲ ಎಂದು ಬೈಂದೂರು - ಶಿವಮೊಗ್ಗ ಲೋಕಸಭಾ ಚುನಾವಣಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಹೇಳಿದರು.ಮಾ 27ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಅನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾ. 29ರಿಂದ ನಟ ಶಿವರಾಜ್‌ ಕುಮಾರ್‌ ಮತ ಯಾಚನೆಗೆ ಬರುತ್ತಾರೆ. ತಾಯಿಯ ಅನಾರೋಗ್ಯದಿಂದ ತಾನು ಸ್ಪರ್ಧೆಗಿಳಿಯಬೇಕಾಯಿತು. ಸೋಲು ಗೆಲುವು ರಾಜಕೀಯದಲ್ಲಿ ಮಾಮುಲು. ಈ ಬಾರಿ ಮಹಿಳೆಯರು, ಯುವಕ ಯುವತಿಯರು ದೊಡ್ಡ ಪ್ರಮಾಣದಲ್ಲಿ ಬೆಂಬಲ ಸೂಚಿಸಿರುವುದರಿಂದ ವಿರೋಧ ಪಕ್ಷಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೋರಾಟ ನಡೆಸುವೆ ಎಂದು ಹೇಳಿದರು.

ಕುಟುಂಬ ರಾಜಕೀಯದ ಬಗ್ಗೆ ಪ್ರಶ್ನಿಸಿದಾಗ ಆ ಬಗ್ಗೆ ಮಾತನಾಡಲು ಒಲ್ಲದ ಆಕೆ ಬೈಂದೂರು ಜನತೆಯ ಸಂಪೂರ್ಣ ಸಹಕಾರ ತನಗಿದೆ ಎಂದರು.

ಕೊಲ್ಲೂರು ದೇವಳದ ಕಾರ್ಯನಿರ್ವಾಹಣಾಕಾರಿ ಎಲ್‌.ಎಸ್‌. ಮಾರುತಿ, ಉಪಕಾರ್ಯನಿರ್ವಾಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ ಅವರು ಗೀತಾ ಶಿವರಾಜ್‌ ಕುಮಾರ್‌ ಹಾಗೂ ಶಾಸಕ ಮಧು ಬಂಗಾರಪ್ಪ ಅವರನ್ನು ಸ್ವಾಗತಿಸಿ ಗೌರವಿಸಿದರು.

ಈ ಸಂದರ್ಭ ಜಿಲ್ಲಾ ಮಹಿಳಾ ಜೆಡಿಎಸ್‌ ಅಧ್ಯಕ್ಷೆ ಶಾಲಿನಿ ಶೆಟ್ಟಿ ಕೆಂಚನೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ವೇದಾವತಿ ಹೆಗ್ಡೆ ಬ್ರಹ್ಮಾವರ, ಡಿ. ರಾಜು ಕಾರ್ಕಳ, ಬ್ಲಾಕ್‌ ಅಧ್ಯಕ್ಷ ರಂಜಿತ್‌ ಶೆಟ್ಟಿ, ಮುಖಂಡರಾದ ಕೆ. ಎನ್‌. ಶ್ರೀಕಾಂತ ಅಡಿಗ, ಮನ್ಸೂರ್‌, ಸಂದೇಶ್‌ ಭಟ್‌, ರಮೇಶ್‌, ವಿನಯ್‌ ಕುಮಾರ್‌, ಅಣ್ಣಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com