ಮೋದಿ ಜನಸಾಮಾನ್ಯರ ನಾಯಕ: ಶೋಭಾ

ಕುಂದಾಪುರ: ನರೇಂದ್ರ ಮೋದಿ ದೇಶದ ಜನಸಾಮಾನ್ಯರ ನಾಯಕ. ಜಯಪ್ರಕಾಶ್ ನಾರಾಯಣ್ ನಂತರ ದೇಶ ಮಹಾನ್ ನಾಯಕನನ್ನು ಕಾಣುತ್ತಿದೆ. ಮೋದಿ ಪ್ರಧಾನಿಯಾಗುವುದು ಶತಃಸಿದ್ಧ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನುಡಿದರು. ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಜರುಗಿದ ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. 

ದೇಶವಿಂದು ಭಾರಿ ಆತಂಕ ಎದುರಿಸುತ್ತಿದೆ. ಭಯೋತ್ಪಾದನೆ, ನಕ್ಸಲ್ ವಾದ ತಾಂಡವವಾಡುತ್ತಿದೆ. ಕೇಂದ್ರದಲ್ಲಿ 10 ವರ್ಷ ಆಳ್ವಿಕೆ ನಡೆಸಿದ ಯುಪಿಎ ಸರಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದೆ. ಇದೊಂದು ನಿಷ್ಕ್ರಿಯ ಸರಕಾರ ಎಂದು ಅವರು ಟೀಕಿಸಿದರು. 

ಅಟಲ್ ಬಿಹಾರಿ ವಾಜಪೇಯಿಯವರ ಅನೇಕ ಯೋಜನೆಗಳನ್ನು ಮೊಟಕುಗೊಳಿಸಿ ಜನವಿರೋಧಿ ನೀತಿಗಳನ್ನು ಯುಪಿಎ ಅನುಸರಿಸಿತು. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳವಾಯಿತು. ಜನಸಾಮಾನ್ಯರ ಅನೇಕ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ. ಅಭಿವೃದ್ಧಿ ಮತ್ತು ದೇಶದ ಭದ್ರತೆಗಾಗಿ ಮೋದಿ ಪ್ರಧಾನಿಯಾಗಬೇಕು ಎಂಬ ನೆಲೆಯಲ್ಲಿ ಕಾರ್ಯಕರ್ತರು ದುಡಿಯಬೇಕು ಎಂದು ಅವರು ಕರೆ ನೀಡಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ದೆ ಉಪಸ್ಥಿತರಿದ್ದರು. 

ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಹೋರಾಟ: ಈ ಹಿಂದೆ ಸಂಸದರಾಗಿದ್ದವರು ಕ್ಷೇತ್ರದ ನೈಜ ಸಮಸ್ಯೆಗೆ ಸ್ಪಂದಿಸಿಲ್ಲ. ಮೀನುಗಾರರ, ಅಡಕೆ ಬೆಳೆಗಾರರ ಹಿತ ಕಾಯುವ ಯತ್ನ ನಡೆಸಿಲ್ಲ. ಬಗರ್‌ಹುಕಂ ಜಮೀನು ನಾಶ ಆಗುತ್ತಿರುವ ಜತೆಯಲ್ಲಿ ರೈತರನ್ನು ಒಕ್ಕೆಲ್ಲೆಬ್ಬಿಸುವ ಪ್ರಯತ್ನ ನಡೆದಾಗಲೂ ತಮ್ಮದೇ ಸರಕಾರ ಕೇಂದ್ರದಲ್ಲಿದ್ದರು ಈ ಭಾಗದ ಸಂಸದರಾಗಿದ್ದವರು ಜನಪರ ಧ್ವನಿಯೆತ್ತಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. 

ಇಲ್ಲಿನ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ-ಚಿಕ್ಕಮಗಳೂರು ರಾಜ್ಯದಲ್ಲಿಯೇ ಅತ್ಯಧಿಕ ಮಹಿಳಾ ಮತದಾರರಿರುವ ಕ್ಷೇತ್ರ. ನಾನು ಈ ಭಾಗಕ್ಕೆ ಹೊಸಬಳೇನಲ್ಲ. ಉಡುಪಿಯಿಂದಲೇ ನನ್ನ ರಾಜಕೀಯ ಜೀವನ ಆರಂಭವಾಗಿರುವುದು. ಬದಲಾವಣೆಯ ಈ ಕಾಲಘಟ್ಟದಲ್ಲಿ ಪಕ್ಷ ಇಲ್ಲಿ ಸ್ಪರ್ಧಿಸುವ ಅವಕಾಶ ನೀಡಿದೆ. ಕುಂದಾಪುರ ಕ್ಷೇತ್ರಕ್ಕೆ ಇದು ನನ್ನ ಪ್ರಥಮ ಪ್ರಚಾರ ಅಭಿಯಾನ. ಈಗಾಗಲೇ ಹೆಜಮಾಡಿಯಿಂದ ಇಲ್ಲಿಯ ತನಕ ನಡೆಸಿದ ತಿರುಗಾಟದಲ್ಲಿ ಒಳ್ಳೆಯ ಪ್ರತಿಕ್ರಿಯೆ ಕಂಡುಕೊಂಡಿದ್ದೇನೆ. ಉತ್ತಮ ವಾತಾವರಣ ಈಗಾಗಲೆ ವ್ಯಕ್ತವಾಗಿದೆ. ಕ್ಷೇತ್ರವನ್ನು ಕಾಡುತ್ತಿರುವ ನೈಜ ಸಮಸ್ಯೆಗಳಿಗೆ ಧ್ವನಿಯೆತ್ತುವಲ್ಲಿ ಮತದಾರರು ಅವಕಾಶ ಮಾಡಿಕೊಡಬೇಕು ಎಂದರು. 

ನಕ್ಸಲ್ ಆತಂಕದಲ್ಲಿ ದೇಶ: ತನ್ನದೇ ನಾಯಕ ನಕ್ಸಲರ ಗುಂಡಿಗೆ ಬಲಿಯಾದಾಗ ಕಾಂಗ್ರೆಸ್‌ಗೆ ಏನೂ ಮಾಡಲಾಗಿಲ್ಲ. ಕೆಲವೇ ದಿನಗಳ ಹಿಂದೆ 20ಕ್ಕೂ ಮಿಕ್ಕಿ ಯೋಧರು ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ. ಅಲ್ಲಿ ದೊರೆತಿರುವ ಶಸ್ತ್ರಾಸ್ತ್ರಗಳು ಚೈನಾ ಮೇಡ್. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ. ಭಯೋತ್ಪಾದನೆ, ನಕ್ಸಲ್ ವಾದ ದೇಶದ ಅಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ. ನಾನು ಸ್ಪರ್ಧಿಸುತ್ತಿರುವ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ದೇಶದ ಸುರಕ್ಷತೆ, ಅಭಿವೃದ್ಧಿ, ಭದ್ರತೆ ಹಿತದೃಷ್ಟಿಯಿಂದ ಮೋದಿ ಪ್ರಧಾನಿಯಾಗಬೇಕು. ಕರ್ನಾಟಕದಲ್ಲಿ ಅತಿ ಹೆಚ್ಚು ಬಿಜೆಪಿ ಸಂಸದರು ಆಯ್ಕೆಯಾಗಬೇಕು ಎಂದು ಪ್ರತಿಪಾದಿಸಿದರು. 

ವಿವರ ನೀಡಲಾರೆ: ಎ.ಜಿ. ಕೊಡ್ಗಿ ನನ್ನ ರಾಜಕೀಯ ಗುರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾರ್ಗದರ್ಶಕರು. ಇವರಿಬ್ಬರು ಈ ಭಾಗದ ಪ್ರಭಾವಿ ರಾಜಕಾರಣಿಗಳು. ಅವರು ನಮ್ಮ ಪಕ್ಷದಲ್ಲಿ ಈಗ ಇಲ್ಲ. ಹಾಗಂತ ಅವರ ವಿಶ್ವಾಸ ನಾನು ಕಳೆದುಕೊಂಡಿಲ್ಲ. ಅವರೊಂದಿಗೆ ಸೌಹಾರ್ದ ಮಾತುಕತೆ ನಡೆಸಿದ್ದೇನೆ. ಹಾಲಾಡಿಯವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಅದರ ವಿವರ ನೀಡಲು ಇಚ್ಛೆ ಪಡೋದಿಲ್ಲ. ಹಾಲಾಡಿಯವರು ಪಕ್ಷಕ್ಕೆ ಬರಬೇಕೆನ್ನುವುದು ನಮ್ಮ ಆಶಯ. ನಾವು ಕೆಲವೊಂದು ಕಾರಣಕ್ಕೆ ಪಕ್ಷ ತ್ಯಜಿಸಿ ಮರಳಿದ್ದೇವೆ. ಯಡಿಯೂರಪ್ಪ, ಶ್ರೀರಾಮಲು ಈಗಾಗಲೆ ಬಂದಿದ್ದಾರೆ. ಹಾಲಾಡಿ ಮಾತ್ರ ಬಾಕಿ ಉಳಿದಿರುವುದು. ಧನಂಜಯ್ ಕುಮಾರ್ ಪಕ್ಷ ಬಿಡುವುದಿಲ್ಲ. ಅವರಿಗೆ ಪಕ್ಷ ದೊಡ್ಡ ರಾಜಕೀಯ ಭವಿಷ್ಯ ಒದಗಿಸಿಕೊಟ್ಟಿದೆ. ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಹಿರಿಯ ಮುಖಂಡ ಎಂ.ಡಿ. ಲಕ್ಷ್ಮೀನಾರಾಯಣ ಅವರದ್ದು ಸಮಸ್ಯೆಯಿಲ್ಲ. ಎಲ್ಲವೂ ಸುಖಾಂತ್ಯಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com