ಹಾಲಾಡಿ, ಕೊಡ್ಗಿ ಮನೆಗೆ ಶೋಭಾ ಭೇಟಿ

ಕುಂದಾಪುರ: ಇಲ್ಲಿನ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನಿವಾಸಕ್ಕೆ ಶನಿವಾರ ಉಡುಪಿ-ಚಿಕ್ಕಮಗಳೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸೌಹಾರ್ದ ಮಾತುಕತೆ ನಡೆಸಿದರು. 

ಹಾಲಾಡಿ ಅವರ ಮನೆಯಲ್ಲಿ ಅರ್ಧ ತಾಸಿಗೂ ಮಿಕ್ಕಿ ಮಾತುಕತೆ ನಡೆಯಿತು. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಡಲಿಲ್ಲ. ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲೆಂದು ಆಗಮಿಸಿರುವುದಾಗಿ ತಿಳಿಸಿದ ಶೋಭಾ ಕರಂದ್ಲಾಜೆ, ಉಳಿದ ವಿವರ ನೀಡಲು ನಿರಾಕರಿಸಿದರು.

ಸೌಹಾರ್ದ ಭೇಟಿ ಅಷ್ಟೇ: ಇದೊಂದು ಸೌಹಾರ್ದ ಭೇಟಿ ಅಷ್ಟೇ. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಶೋಭಾ ಕರಂದ್ಲಾಜೆ ಅವರು ಸಹಕಾರ ಕೋರಿದ್ದಾರೆ. ಅವರಿಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಪಕ್ಷೇತರನಾಗಿಯೇ ಇರಲು ಬಯಸಿದ್ದೇನೆ. ಯಾವುದೇ ಪಕ್ಷಗಳಿಗೂ ಬೆಂಬಲಿಸುವ ಪ್ರಶ್ನೆ ನನ್ನಲ್ಲಿಲ್ಲ ಅನ್ನುವುದನ್ನು ತಿಳಿಸಿದ್ದೇನೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಿಳಿಸಿದರು. 

ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೀಲಾ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ ಇನ್ನಿತರ ಪ್ರಮುಖರು ಹಾಜರಿದ್ದರು. 

ಕೊಡ್ಗಿ ಮನೆಗೆ ಭೇಟಿ: ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆಯಿಂದ ನೇರವಾಗಿ ರಾಜ್ಯ ಮೂರನೇ ಹಣಕಾಸು ಆಯೋಗ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ಅವರ ನಿವಾಸಕ್ಕೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು. ರಾಜಕೀಯಕ್ಕೆ ಗುಡ್‌ಬೈ ಹೇಳಿರುವ ಕೊಡ್ಗಿ ಅವರಿಗೆ ಕರಂದ್ಲಾಜೆ ಒಂದು ಸಮಯದ ಶಿಷ್ಯೆಯಾಗಿದ್ದು ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com