ನರೇಂದ್ರ ಮೋದಿ ತ್ರಿಡಿ ಸೂತ್ರ

ಬೆಳಗಾವಿ: ದೇಶದ ಅಭಿವೃದ್ಧಿಗೆ ಈಗಾಗಲೇ ಹಲವಾರು ಸೂತ್ರಗಳನ್ನು ಪ್ರಕಟಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈಗ ತ್ರಿ ಡಿ ಸೂತ್ರ ಅಂದರೆ ಮೂರು "ಡಿ'ಗಳ ಸೂತ್ರ ಪ್ರಕಟಿಸಿದ್ದಾರೆ.

ವಿಜಾಪುರದಲ್ಲಿ  ರವಿವಾರ ಬಿಜೆಪಿ ಅಭ್ಯರ್ಥಿ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಡೆಮಾಕ್ರಸಿ, ಡಿಮ್ಯಾಂಡ್‌ ಹಾಗೂ ಡಿವಿಡೆಂಡ್‌ (ಪ್ರಜಾಪ್ರಭುತ್ವ, ಬೇಡಿಕೆ ಹಾಗೂ ಲಾಭಾಂಶ) ಸಮನ್ವಯ ಸೂತ್ರ ಅನುಸರಿಸಿದರೆ ಸಂಪದ್ಭರಿತ ಭಾರತವನ್ನು ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಕಟ್ಟಲು ಸಾಧ್ಯ. ಭಾರತ ಈ 3-ಡಿ ಸೂತ್ರಗಳ ಸಮನ್ವಯ ಸಾಧಿಸಿಕೊಂಡು ಯುವ ಸಮೂಹದಲ್ಲಿರುವ ತಾಂತ್ರಿಕ ಜ್ಞಾನದ ಸದ್ಬಳಕೆಗೆ ಮುಂದಾದಲ್ಲಿ ಅಮೆರಿಕ-ಚೀನ ಸೇರಿದಂತೆ ಎಲ್ಲ ದೇಶಗಳನ್ನೂ ಮೀರಿಸುವ ಸಾಮರ್ಥ್ಯ ಹೊಂದಲಿದೆ ಎಂದರು.

ಬೆಳಗಾವಿ ಹಾಗೂ ವಿಜಾಪುರ ರ್ಯಾಲಿಯಲ್ಲಿ ಮಾತ ನಾಡಿದ ಅವರು, ಕಾಂಗ್ರೆಸ್‌ಗೆ ದೇಶದ ಬಡವರ ಪರ ಕಾಳಜಿ ಇಲ್ಲ. ಹೇಗಾದರೂ ಮಾಡಿ ನರೇಂದ್ರ ಮೋದಿ ಚಂಡಮಾರುತವನ್ನು ತಡೆಯಬೇಕು ಎಂಬುದೇ ಅವರ ಚಿಂತೆ. ಆದರೆ ಈ ಚಂಡಮಾರುತ ಸುನಾಮಿಯಾಗಿ ಬದಲಾಗಿದೆ ಎಂಬುದು ಅವರಿಗೆ ತಿಳಿದಿಲ್ಲ ಎಂದರು. ಅಲ್ಲದೆ, ಮೇ 17ರ ಅನಂತರ ಕಾಂಗ್ರೆಸ್‌ ಸ್ಥಾನ ಎಲ್ಲಿದೆ ಎಂಬುದು ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಸರಕಾರ ಮಾಡಿದ ಪಾಪವನ್ನು ಹೇಗೆ ತೊಳೆಯಬೇಕು, ದೇಶದ ಲೂಟಿಯನ್ನು ಹೇಗೆ ತಡೆಯಬೇಕು, ಬಡವರು ಮತ್ತು ರೈತರಿಗೆ ಹೇಗೆ ನ್ಯಾಯ ದೊರಕಿಸಿಕೊಡಬೇಕು, ಭ್ರಷ್ಟಾಚಾರ ಹೇಗೆ ನಿರ್ಮೂಲನ ಮಾಡಬೇಕು ಎಂಬ ಚಿಂತೆಯಲ್ಲಿ ನಾವಿದ್ದೇವೆ. ಆದರೆ ಕಾಂಗ್ರೆಸ್‌ಗೆ ಗುಜರಾತ್‌ ಮತ್ತು ನರೇಂದ್ರ ಮೋದಿ ಯದ್ದೇ ಚಿಂತೆ ಎಂದು ಮೂದಲಿಸಿದರು.

ವಂಚನೆಯ ಪ್ರತಿ:  ದಶಕದಿಂದ ನೀಡಿದ ಭರವಸೆ ಗಳನ್ನೇ ಪದೇ ಪದೇ ಪ್ರಣಾಳಿಕೆಯಲ್ಲಿ ನೀಡುತ್ತಿರುವ ಕಾಂಗ್ರೆಸ್‌, ಈ ಬಾರಿಯೂ ಹಳೆ ಕ್ಯಾಸೆಟ್‌ ಹಾಕಿದೆ. ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆ ವಂಚನೆಯ ಮತ್ತೂಂದು ಪ್ರತಿ ಎಂದು ಟೀಕಿಸಿದರು.

         ಕಾಂಗ್ರೆಸ್‌ ಕೊಚ್ಚಿಹೋಗಲಿದೆ

ಲೋಕಸಭೆ ಚುನಾವಣೆಯ ಬಿರುಗಾಳಿ ಮತದಾನದ ದಿನ ಹತ್ತಿರ ಬರುತ್ತಿದ್ದಂತೆ "ಸುನಾಮಿ'ಯಾಗಿ ಬದಲಾಗುತ್ತಿದೆ. ದೇಶ ವನ್ನು ಲೂಟಿ ಮಾಡಿರುವ ಕಾಂಗ್ರೆಸ್‌ ಮತ್ತು ಅದರ ಮೈತ್ರಿಕೂಟ ಈ ಸುನಾಮಿಯಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗಲಿದೆ.

      ಸೇವಕನಿಗೆ ಅವಕಾಶ ಕೊಡಿ

ಕಳೆದ 60 ವರ್ಷ ದೇಶಕ್ಕೆ ಸಂಸದರನ್ನು ನೀಡಿ ದ್ದೀರಿ. ಈ ಸಂಸದರು ಏನು ಕೆಲಸ ಮಾಡಿದ್ದಾರೆ ಎಂಬುದನ್ನೂ ಕಂಡಿದ್ದೀರಿ. ಈಗ ನಿಮ್ಮ ಸೇವಕ ಮನೆ ಬಾಗಿಲಿಗೆ ಬಂದಿದ್ದಾನೆ. ನಿಮ್ಮ ಈ ಸೇವಕನನ್ನು ಆಯ್ಕೆ ಮಾಡಿ ಅವಕಾಶ ನೀಡಿ. ಅಭಿವೃದ್ಧಿ ಮೂಲಕ ದೇಶದ ಸ್ವರೂಪವನ್ನೇ ಬದಲಾವಣೆ ಮಾಡಿ ತೋರಿಸುತ್ತೇನೆ.


        ಕನ್ನಡದಲ್ಲಿ ಯುಗಾದಿ ಶುಭಾಶಯ

ಮೋದಿ ಭಾರತ ಮಾತಾಕೀ ಜೈ ಘೋಷಣೆ ಕೂಗಿ ಭಾಷಣ ಆರಂಭಿಸಿದರು. ಅನಂತರ ಭಾಷಣವನ್ನು ಕನ್ನಡದಲ್ಲಿ ಪ್ರಾರಂಭಿಸಿ, ಕನ್ನಡ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು ಎಂದು ಅನಂತರ ಬೆಳಗಾವಿ ಜನತೆಗೆ ಗುಡಿಪಾಡ್ವಾದ ಶುಭಕಾಮನೆಗಳು ಎಂದು ಮರಾಠಿಯಲ್ಲೂ ಶುಭ ಕೋರಿದರು. 

ಕಾಂಗ್ರೆಸ್‌ ಚಿಂತನೆ ನಡೆಸಲಿಲ್ಲ. ಬದಲಾಗಿ ಕಪ್ಪುಹಣ ಇಡುವ ಭ್ರಷ್ಟರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿತು. ಇಲ್ಲಿಯ ಲೂಟಿಕೋರರು ನಮ್ಮ ಹಣ ಲಪಟಾಯಿಸಿ ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರೆ ಎಂದ ಅವರು, ಅದನ್ನು ಮತ್ತೆ ಸ್ವದೇಶಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿದೆ. ಇದು ಸಾಧ್ಯವಾಗಬೇಕಾದರೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು. 

ಲೋಕಸಭೆ ಚುನಾವಣೆ ಸಂದರ್ಭ ದಿಲ್ಲಿಯಲ್ಲಿ ರಚನೆಯಾಗುವ ಸರಕಾರದ ಬಗ್ಗೆ ಚರ್ಚೆಗಳು ನಡೆಯಬೇಕು. ದೇಶದ ಹಣಕಾಸಿನ ಲೆಕ್ಕದ ಬಗ್ಗೆ ಚರ್ಚೆಯಾಗಬೇಕು. ಹಣ ಲೂಟಿ ಮಾಡಿದವರ ಕುರಿತು ಚರ್ಚೆಗಳು ನಡೆಯಬೇಕು. ಆದರೆ ಕಾಂಗ್ರೆಸ್‌ಗೆ ಇದಾವುದರ ಬಗ್ಗೆಯೂ ಚಿಂತೆ ಇಲ್ಲ. ಕಾಂಗ್ರೆಸ್‌ ಸರಕಾರದ ಆಡಳಿತದಿಂದ ಇಡೀ ದೇಶ ಚಿಂತಾಕ್ರಾಂತವಾಗಿದೆ. ಈ ಅಪಾಯದಿಂದ ಭಾರತವನ್ನು ಹೊರತರಬೇಕಿದೆ. ಆ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಅದಕ್ಕಾಗಿ  ನಾವು ನಿಮ್ಮ ಬಳಿ ಬಂದಿದ್ದೇವೆ ಎಂದರು.

ರಾಜ್ಯಕ್ಕೆ ಏನಿಲ್ಲ

ಕಾಂಗ್ರೆಸ್‌ ಸರಕಾರ ಕರ್ನಾಟಕದ ನಕ್ಷೆಯನ್ನೇ ಮರೆತಿತ್ತು. ಆ ಸರಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಒಂದೇ ಒಂದು ಬಂದರು ನಿರ್ಮಾಣವಾಗಲಿಲ್ಲ. ಅದರ ಪ್ರಕಾರ ಕರ್ನಾಟಕದಲ್ಲಿ ಸಮುದ್ರವೇ ಇರಲಿಲ್ಲ. ಇಂತಹ ಸರಕಾರ ಅಭಿವೃದ್ಧಿ ಮತ್ತು ಸೌಕರ್ಯಗಳ ಬಗ್ಗೆ ಮಾತನಾಡುತ್ತಿದೆ ಎಂದು ಟೀಕಿಸಿದರು.

ಒಂದು  ಕಡೆ ಬಡವರು  ಆಹಾರ ಕ್ಕಾಗಿ ಹಾಗೂ ಇನ್ನೊಂದೆಡೆ ರೈತರು ವಿದ್ಯುತ್‌ಗಾಗಿ ಚಡಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ಗೆ ಇದರ ಚಿಂತೆ ಇಲ್ಲ. ಅದರ ನೀತಿಯಿಂದಾಗಿ ದೇಶದಲ್ಲಿ 30 ಸಾವಿರ ವಿದ್ಯುತ್‌ ಕಂಪನಿಗಳು ಬೀಗ ಹಾಕಿಕೊಂಡಿವೆ. ದೇಶ ಅಂಧಕಾರದಲ್ಲಿ ಮುಳುಗಿದೆ. ಈ ಕಂಪೆನಿಗಳನ್ನು ಪುನರಾಂಭಿಸುವ ಚಿಂತೆ ಕಾಂಗ್ರೆಸಿಗಿಲ್ಲ ಎಂದು ಕಿಡಿಕಾರಿದರು.

ಗೊಂದಲ ಸೃಷ್ಟಿಸಿದ ಸೂಟ್‌ಕೇಸ್‌

ನರೇಂದ್ರ ಮೋದಿ ಕಾರ್ಯಕ್ರಮ ಮುಗಿಯುತ್ತಲೇ ವೇದಿಕೆ ಬಳಿ ಸೂಟ್‌ಕೇಸ್‌ ಅನುಮಾನ ಹಾಗೂ ಗೊಂದಲಕ್ಕೆ ಕಾರಣವಾಯಿತು. ಎಚ್‌ಪಿ ಗ್ಯಾಸ್‌ ಕಂಪೆನಿಯ ಯುವಕನ ಬಳಿ ಈ ಸೂಟ್‌ಕೇಸ್‌ ಪತ್ತೆಯಾಗಿದೆ. ಅನಂತರ ಪೊಲೀಸರು ಅದನ್ನು ವಶಕ್ಕೆ ತೆಗೆದುಕೊಂಡು ಪರೀಕ್ಷಿಸಿದಾಗ ಅದರಲ್ಲಿ ಅಪಾಯಕಾರಿ ವಸ್ತುಗಳು ಕಂಡುಬರಲಿಲ್ಲ. 
ಆದರೆ ಇದು ಕೆಲ ಹೊತ್ತು ಆತಂಕಕ್ಕೆ ಕಾರಣವಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com