ಕನಕ ಚಿಂತನೆ ಇಂದಿಗೂ ಪ್ರಸ್ತುತ: ಪ್ರೊ. ವಸಂತ ಬನ್ನಾಡಿ

ಬೈಂದೂರು: ಕನಕದಾಸರು ತಮ್ಮ ಕಾವ್ಯ ಮತ್ತು ಕೀರ್ತನೆಗಳಲ್ಲಿ ಜಾತಿ ವ್ಯವಸ್ಥೆ, ಮನುಷ್ಯರ ನಡುವಿನ ತಾರತಮ್ಯ, ಮೂಢನಂಬಿಕೆಗಳ ಬಗ್ಗೆ ಅಸಹನೆ ವ್ಯಕ್ತಪಡಿಸಿದರು. ಎಲ್ಲ ವರ್ಗಗಳ ಜನರ ಆತ್ಮವಿಮರ್ಶೆಗೆ ಕರೆ ನೀಡಿದರು. ಅದಕ್ಕೆ ಕಾರಣವಾದ ಸ್ಥಿತಿ ಇನ್ನೂ ನಶಿಸಿಲ್ಲವಾದ್ದರಿಂದ ಅವರ ಚಿಂತನೆ ಇಂದಿಗೂ ಪ್ರಸ್ತುತ ಎಂದು ಕುಂದಾಪುರ ಭಂಡಾರ್ಕಾರ್ಸ್‌ ಕಾಲೇಜಿನ ಪ್ರಾಧ್ಯಾಪಕ ಪ್ರೊ. ವಸಂತ ಬನ್ನಾಡಿ ಹೇಳಿದರು. 

ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಬೈಂದೂರಿನ ಸುರಭಿ ಸಾಂಸ್ಕೃತಿಕ ಸೇವಾ ಪ್ರತಿಷ್ಠಾನದ ಸಹಕಾರದೊಂದಿಗೆ ನಾವುಂದದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜಿನಲ್ಲಿ ನಡೆಸಿದ ಕನಕದಾಸ ಉಪನ್ಯಾಸ-ವಾಚನ-ಗಾಯನಗಳ ಮುತ್ತು ಬಂದಿದೆ ಕೇರಿಗೆ ರಸಗ್ರಹಣ ಶಿಬಿರದಲ್ಲಿ ಉಪನ್ಯಾಸ ನೀಡಿದರು. 

ಕನಕರದು ಪವಾಡ ಸದೃಶ ಜೀವನ ಮತ್ತು ಸಾಧನೆ. ಧಾರವಾಡದಲ್ಲಿ ಜನಿಸಿ, ವಿಜಯನಗರಕ್ಕೆ ಬಂದು ಸೇನಾಪತಿಯಾದರು. ಮತ್ತೆ ಅಧಿಕಾರ ತ್ಯಜಿಸಿ ಭೌತಿಕ ಜಗತ್ತಿನಿಂದ ವಿಮುಖರಾದರು. ಉಡುಪಿಗೆ ಆಗಮಿಸಿ ಭಕ್ತಿಯ ಪರಾಕಾಷ್ಠೆ ಮೆರೆದು ಸಂತರಾದರು. ಅಮೂಲ್ಯ ಕೃತಿಗಳನ್ನು ರಚಿಸಿ ಕವಿಯೆನಿಸಿದರು. ಸಾಮಾಜಿಕ ಸಮಾ ನತೆಯ ಸಂದೇಶ ಸಾರಿದರು. ಅವರ ಕೃತಿಗಳ ಮರು ಓದು, ಅವರ ಪ್ರತಿಪಾದನೆಗಳ ಚಿಂತನ ಮಂಥನ ಈಗ ನಡೆಯಬೇಕು ಎಂದರು. 

ಕಾಲೇಜಿನ ಪ್ರಿನ್ಸಿಪಾಲ್ ಎಂ. ಮೋಹನದಾಸ ಪೈ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ, ನಟರಾಜ ಪಟ್ಲ ತಂಡದಿಂದ ಕನಕದಾಸ ವಾಚನ, ಗಾಯನ ನಡೆಯಿತು. ಸಿಆರ್‌ಪಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com