ಧನಂಜಯ ಕುಮಾರ್ ನಾಮಪತ್ರ ಸಲ್ಲಿಕೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಶಾಸಕರಾದ ಬಿ.ಬಿ. ನಿಂಗಯ್ಯ, ಮಧು ಬಂಗಾರಪ್ಪ, ಜೆಡಿಎಸ್‌ನ ಉಡುಪಿ ಮತ್ತು ಚಿಕ್ಕಮಗಳೂರಿನ ನಾಯಕರಾದ ದೇವಿಪ್ರಸಾದ್ ಶೆಟ್ಟಿ, ಭೋಜೇಗೌಡ ಉಪಸ್ಥಿತರಿದ್ದರು. 

ನಾಮಪತ್ರ ಸಲ್ಲಿಕೆ ಸಮಯ ಐದೇ ಮಂದಿ ಒಳಗೆ ಬರಬೇಕು ಎಂಬ ನಿಯಮ ಇದ್ದರೂ ಜೆಡಿಎಸ್‌ನಿಂದ 9 ಮಂದಿ ಒಳ ಸೇರಿದ್ದರು. ಅನಂತರ ಪೊಲೀಸರು ಒತ್ತಾಯಪೂರ್ವಕವಾಗಿ ನಾಲ್ವರನ್ನು ಹೊರಗೆ ಕಳುಹಿಸಬೇಕಾಯಿತು. 

ಮಂಗಳೂರು ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು, ಎನ್‌ಡಿಎ ಸರಕಾರದಲ್ಲಿ ಸಚಿವರಾಗಿದ್ದ ಧನಂಜಯ ಕುಮಾರ್ ಅವರಿಗೆ ಕಳೆದ ಎರಡು ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ದೊರೆತಿರಲಿಲ್ಲ. ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಸೇರಿದಾಗ ಧನಂಜಯ ಕುಮಾರ್ ಕೂಟ ಕೆಜೆಪಿ ಸೇರಿದ್ದರು. ಆದರೆ ಯಡಿಯೂರಪ್ಪ ಕೆಜೆಪಿ ಬಿಟ್ಟು ಬಿಜೆಪಿಗೆ ಬಂದರಾದರೂ, ಧನಂಜಯ ಕುಮಾರ್‌ಗೆ ಆ ಅವಕಾಶ ಸಿಗದೇ ಇರುವುದರಿಂದ ಅವರು ಜೆಡಿಎಸ್‌ಗೆ ಸೇರಿದ್ದಾರೆ. ಅಲ್ಲದೆ ಮಂಗಳೂರಿನ ಬದಲು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದಾರೆ. 

ಜೆಡಿಎಸ್ ನಿರ್ಣಾಯಕ ಪಾತ್ರ: ಕೇಂದ್ರದಲ್ಲಿ ಎನ್‌ಡಿಎ, ಯುಪಿಎ ಬದಲು ತೃತೀಯ ಶಕ್ತಿಯೇ ಅಧಿಕಾರಕ್ಕೆ ಬರಲಿದ್ದು, ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿ. ಧನಂಜಯ ಕುಮಾರ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ನಿರ್ಲಕ್ಷ್ಯ ಸಲ್ಲದು. ರಾಷ್ಟ್ರೀಯ ಹಿತಾಸಕ್ತಿ ನೆಲೆಯಲ್ಲಿ ರಾಜಕೀಯ, ಆಡಳಿತ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಜೆಡಿಎಸ್‌ನಲ್ಲಿದೆ ಎಂದರು. 

ರಾಜಕೀಯ ನಿವೃತ್ತಿ: ನನ್ನ ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ದಾಖಲೆ ಸಮೇತ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ. ನನ್ನ ಚಾರಿತ್ರ್ಯದ ವಿರುದ್ಧ ಅಪಪ್ರಚಾರ ಮಾಡಿದವರು 50 ಸಾವಿರ ರೂ. ಮಾನನಷ್ಟ ಪರಿಹಾರ ನೀಡಲು ಆದೇಶವಾಗಿದೆ. ತತ್ವ, ಸಿದ್ಧಾಂತಕ್ಕೆ ಬದ್ಧನಾದ ನನ್ನಲ್ಲಿರುವ ಸತ್ಯ, ಪ್ರಾಮಾಣಿಕತೆಯ ಗುಣವೇ ಸಮಸ್ಯೆಗೆ ಸಿಲುಕಿಸುತ್ತಿದೆ. ಬಿಜೆಪಿಯೊಳಗೀಗ ಸ್ವಾರ್ಥ ಸಾಧಕರೇ ಹೆಚ್ಚಿದ್ದಾರೆ. ಒಬ್ಬರನ್ನು ಮತ್ತೊಬ್ಬರು ಸೋಲಿಸಲು ಯತ್ನಿಸುತ್ತಿದ್ದಾರೆ. ಉಡುಪಿಯಲ್ಲಿ ಕಾಲೇಜು ಶಿಕ್ಷಣ, ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಬಿ.ಬಿ. ನಿಂಗಯ್ಯ, ಎಸ್.ಎಲ್. ಭೋಜೇ ಗೌಡ, ದೇವಿಪ್ರಸಾದ್ ಶೆಟ್ಟಿ , ಶಾಲಿನಿ ಶೆಟ್ಟಿ ಕೆಂಚನೂರು, ಮಧು ಬಂಗಾರಪ್ಪ, ರಾಜೇಂದ್ರ, ಮಂಜಪ್ಪ, ಗುಲಾಂ ಮೊಹಮ್ಮದ್, ದೇವರಾಜ್, ಎಚ್.ಡಿ. ಜ್ವಾಲಯ್ಯ, ಪದ್ಮಾ ತಿಮ್ಮೇ ಗೌಡ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com