ಎಸ್‌ಸಿಡಿಸಿಸಿ ಬ್ಯಾಂಕ್ 70ನೇ ಶಾಖೆ ಉದ್ಘಾಟನೆ

ಬೈಂದೂರು: ಕಳೆದ 20 ವರ್ಷದ ಹಿಂದೆ ಬೆಳೆ ಸಾಲ ಹಾಗೂ ರೇಶನ್ ಮಾತ್ರ ವಿತರಿಸುತ್ತಿದ್ದ ಸಹಕಾರಿ ರಂಗ ಇಂದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಕಡಿಮೆಯಿಲ್ಲದೇ ಅಗತ್ಯವಿರುವವರಿಗೆ ಸಾಲ ನೀಡುವ ಮೂಲಕ ಹಣಕಾಸಿನ ವಹಿವಾಟು ನಡೆಸುತ್ತಿದೆ. ಜಿಲ್ಲಾ ಸಹಕಾರಿ ಬ್ಯಾಂಕ್ ಬೆಳವಣೆಗೆಯಲ್ಲಿ ಹಲವರ ಪರಿಶ್ರಮವಿದ್ದು, ಬ್ಯಾಂಕ್ ಈ ವರ್ಷದ ಮಾರ್ಚ್ ಅಂತ್ಯದೊಳಗೆ 2 ಸಾವಿರ ಕೋಟಿ ರೂ. ಠೇವಣಿ ಸಂಗ್ರಹ ಹಾಗೂ 1500 ಕೋಟಿ ರೂ. ಸಾಲ ನೀಡುವುದಲ್ಲದೇ ವರ್ಷಾಂತ್ಯದೊಳಗೆ 100ನೇ ಶಾಖೆ ತೆರೆಯುವ ಗುರಿ ಹೊಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ ನಾಗೂರಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ 70ನೇ ಶಾಖೆಯ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕ್ ಗ್ರಾಹಕರ ಅನುಕೂಲಕ್ಕಾಗಿ ಆರ್‌ಟಿಜಿಎಸ್ ಸೌಲಭ್ಯ ಹಾಗೂ 95 ಸಾವಿರ ಕೃಷಿಕರಿಗೆ ರೂಪೇ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿದ ದೇಶದ ಪ್ರಥಮ ಜಿಲ್ಲಾ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿದೆ. ಸಾಲ ನೀಡುವ ಮೂಲಕ ಸಹಕಾರಿ ಸಂಸ್ಥೆ ಲಾಭದಾಯಕವಾಗುತ್ತದೆ ಎಂದ ಅವರು, ನಾಗೂರಿನ ನೂತನ ಶಾಖೆ ಈಗಾಗಲೇ 1500ಕ್ಕೂ ಮಿಕ್ಕಿ ಉಳಿತಾಯ ಖಾತೆ ಹಾಗೂ 6 ಕೋಟಿ ರೂ. ಠೇವಣೆ ಹೊಂದಿರುವುದು ಶ್ಲಾಘನೀಯ ಎಂದರು.

ನೂತನ ವ್ಯವಸ್ಥೆ ಜಾರಿ: ಎಸ್‌ಡಿಸಿಸಿ ಬ್ಯಾಂಕ್ ತಮ್ಮ ಗ್ರಾಹಕರು ಹಣಕಾಸಿನ ವ್ಯವಹಾರ ನಡೆಸಲು ಸುಭವಾಗುವಂತೆ ನೂತನ ವ್ಯವಸ್ಥೆ ಜಾರಿಗೆ ತಂದಿದೆ, ಇದರಿಂದ ಗ್ರಾಹಕರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್‌ನಿಂದ ಸಂದೇಶ ಕಳುಹಿಸುವ ಮೂಲಕ ತಮ್ಮ ಖಾತೆಯಲ್ಲಿರುವ ಹಣವನ್ನು, ಬೇರೆ ಖಾತೆಗೆ ವರ್ಗಾಯಿಸಬಹುದಾಗಿದೆ. ಅಲ್ಲದೇ ವಾಹನಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಭೇಟಿ ನೀಡಿ ಸಾಲ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ, ಈ ವ್ಯವಸ್ಥೆ ನಬಾರ್ಡ್ ಪ್ರಶಂಸೆಗೆ ಪಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ನಬಾರ್ಡ್ ಈ ಯೋಜನೆಗೆ ಸಬ್ಸಿಡಿ ದರದಲ್ಲಿ ವಾಹನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದರು.

ಸಾಗರ್ ಕ್ರೆಡಿಟ್ ಕೋ ಆಪ್‌ರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ನೂತನ ಶಾಖೆ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ಕೆ. ಬಾಬು ಶೆಟ್ಟಿ ಭದ್ರತಾ ಕೋಶ ಉದ್ಘಾಟಿಸಿದರೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಗಣಕೀಕರಣ ಉದ್ಘಾಟಿಸಿದರು.

ಮಹೇಂದ್ರ ಪೂಜಾರಿ ನಾವುಂದ, ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಬ್ಯಾಂಕ್‌ನ ನಿರ್ದೇಶಕರಾದ ಬಿ. ರಘುರಾಮ ಶೆಟ್ಟಿ, ಕಿಶನ್ ಹೆಗ್ಡೆ, ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿನಕರ ಶೆಟ್ಟಿ, ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಉಪಸ್ಥಿತರಿದ್ದರು.

ನೂತನ ಶಾಖೆಯ ಕಟ್ಟಡ ಮಾಲೀಕ ಮಾಧವ ಪೈ, ನೂತನ ವ್ಯವಸ್ಥಾಪಕ ಶಂಕರ ಶೆಟ್ಟಿ, ಶಿವರಾಮ ಪೂಜಾರಿ ಹಾಗೂ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ನಿರ್ದೇಶಕ ರಾಜು ಪೂಜಾರಿ ಸ್ವಾಗತಿಸಿದರು, ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕ ಎಂ. ಗೋಪಾಲಕೃಷ್ಣ ಭಟ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com