ಸಾಹಿತ್ಯಕ್ಕೆ ಸಂಸ್ಕೃತಿ ಚಿಂತಕರ ಅಗತ್ಯವಿದೆ: ಡಾ. ಮೊಗಸಾಲೆ

ಬ್ರಹ್ಮಾವರ: ಸಾಹಿತ್ಯಕ್ಕೆ ವಿಚಾರವಾದಿಗಳಿಗಿಂತ ಸಂಸ್ಕೃತಿಯ ಚಿಂತಕರ ಅಗತ್ಯತೆ ಇದೆ ಎಂದು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಹೇಳಿದರು. ಬಾರ್ಕೂರು ಶಿವಗಿರಿ ಕ್ಷೇತ್ರದಲ್ಲಿ ಸಾಹಿತಿ ಬಾರ್ಕೂರು ಬಾಬುಶಿವ ಪೂಜಾರಿ ಬದುಕು ಸಾಹಿತ್ಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಸಂಸ್ಕೃತಿ, ಆಚರಣೆಗಳಲ್ಲಿ ನಮ್ಮಲ್ಲೇ ಅನೇಕ ದ್ವಂದ್ವಗಳಿವೆ. ಇದನ್ನು ಹೋಗಲಾಡಿಸುವತ್ತ ಚಿಂತನೆ ಮಾಡಬೇಕಾಗಿದೆ ಎಂದರು. ಕಾರ್ಕಳ ಹೊಸ್ಮಾರು ಬಲ್ಯೊಟ್ಟು ಗುರುಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಾಹಿತ್ಯದಿಂದ ಶಿಸ್ತುಬದ್ಧ ಜೀವನ ಮತ್ತು ಸುಸಂಸ್ಕೃತ ಸಮಾಜ ಕಟ್ಟಲು ಸಾಧ್ಯ. ಬಾಬುಶಿವ ಪೂಜಾರಿ ಅವರು ಇತರರಿಗೆ ಮಾದರಿ ಎಂದರು. 

ಮಹಿಳಾ ಬಳಗದ ಅಧ್ಯಕ್ಷೆ, ಉಡುಪಿ ತಾಪಂ ಅಧ್ಯಕ್ಷೆ ಗೌರಿ ವಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಬಾರ್ಕೂರು ಬಾಬು ಶಿವ ಪೂಜಾರಿ, ಬಾರ್ಕೂರು ವಿದ್ಯಾಭಿವರ್ಧಿನಿ ಸಂಘದ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಹನೆಹಳ್ಳಿ ಗ್ರಾಪಂ ಅಧ್ಯಕ್ಷೆ ಸುಜಾತಾ ಎಸ್. ಪೂಜಾರಿ, ಕೊಕ್ಕರ್ಣೆಯ ಭಾಸ್ಕರ ಪೂಜಾರಿ ಅಲೆಯ, ಕೋಟ ಹೋಬಳಿ ಬಿಲ್ಲವ ಒಕ್ಕೂಟ ಅಧ್ಯಕ್ಷೆ ರತ್ನಾ ಜೆ. ರಾಜ್, ಕೋಟ ಸಮರ್ಪಣಾದ ಮಂಜುನಾಥ, ಯುವವಾಹಿನಿ ಅಧ್ಯಕ್ಷ ಸಂತೋಷ್ ಯಡ್ತಾಡಿ ಉಪಸ್ಥಿತರಿದ್ದರು. 

ಯುವ ಸಾಹಿತಿ ಕೋಟ ನರೇಂದ್ರ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಬಾರ್ಕೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ. ಅಶೋಕ್ ಸಿ. ಪೂಜಾರಿ ಸ್ವಾಗತಿಸಿದರು. ಸಂತೋಷ್ ವಂದಿಸಿದರು. ಬಿ. ಸುಧಾಕರ ರಾವ್ ಮತ್ತು ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಜರುಗಿದ ವಿಚಾರ ಸಂಕಿರಣದಲ್ಲಿ ಸಾಹಿತಿ ವಿಮರ್ಶಕ ವಿ.ಗ. ನಾಯಕ್ ಅವರು ಶಿವ ಪೂಜಾರಿ ಅವರ ಬದುಕು-ಬರಹದ ನಾನಾ ಮುಖಗಳನ್ನು ಬಿತ್ತರಿಸಿದರು. ಬಾಬು ಶಿವ ಪೂಜಾರಿ ಸಾಹಿತಿಯಾಗಿ ವಿಷಯದ ಬಗ್ಗೆ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಂಪಾದಕರಾಗಿ ನಿವೃತ್ತ ಮುಖ್ಯ ಶಿಕ್ಷಕ ಬಾರ್ಕೂರು ಸುಧಾಕರ ರಾವ್, ಸಂಶೋಧಕರಾಗಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ. ತುಕಾರಾಮ್ ಪೂಜಾರಿ ಮಾತನಾಡಿದರು. ಬಾರ್ಕೂರು ಬಾಬು ಶಿವ ಪೂಜಾರಿ ಮತ್ತು ಪ್ರೇಮಾ ಬಾಬು ಶಿವ ಪೂಜಾರಿ ಅವರನ್ನು ಊರ ಜನತೆಯ ಪರವಾಗಿ ಸನ್ಮಾನಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com