ಮೀನುಗಾರರ ಸಲಹೆ ಕಾರ್ಯರೂಪಕ್ಕೆ: ಶೋಭಾ

ಕುಂದಾಪುರ : ಮೀನುಗಾರಿಕೆಯ ಅಭಿವೃದ್ಧಿ, ಮೀನುಗಾರರ ಶ್ರೇಯಸ್ಸಿಗಾಗಿ ಮೀನುಗಾರ ಬಂಧುಗಳು ನೀಡುವ ಯಾವುದೇ ಸಲಹೆಯನ್ನು ಸ್ವೀಕರಿಸಿ ಅದನ್ನು ಕಾರ್ಯರೂಪಕ್ಕೆ ತರಲು ಬದ್ಧಳಾಗಿದ್ದೇನೆ. ನರೇಂದ್ರ ಮೋದಿಯವರು ಮೀನುಗಾರರ ಬಗ್ಗೆಯೂ ವಿಶೇಷ ಕಾಳಜಿಯುಳ್ಳವರಾಗಿದ್ದು ಅಲ್ಲಿನ ಮೀನುಗಾರರಿಗೆ ಆಧುನಿಕ ತಂತ್ರಜ್ಞಾನ ಸೇರಿದಂತೆ ವಿವಿಧ ಸವಲತ್ತು ನೀಡಿದ್ದಾರೆ. ಕರ್ನಾಟಕದ ಮೀನುಗಾರರ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯ ಅವರಲ್ಲಿದೆ ಎಂದು ಮಾಜಿ ಸಚಿವೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಕುಂದಾಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ರಾಜ್ಯದಲ್ಲಿ ಪಂಚಾಯತ್‌ರಾಜ್‌ ಖಾತೆಯ ಸಚಿವೆಯಾಗಿದ್ದಾಗ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿತ್ತು. ಇಂಧನ ಸಚಿವೆಯಾಗಿಯೂ ಅನುಭವವಿದೆ. ಮೀನುಗಾರರ ಸಮಸ್ಯೆಗಳ ಬಗ್ಗೆಯೂ ಹೆಚ್ಚು ಹೆಚ್ಚು ತಿಳಿದುಕೊಂಡು ಅದಕ್ಕೆ ಪರಿಹಾರ ಒದಗಿಸುವ ಆಸಕ್ತಿ ಇದೆ. ಅದಕ್ಕೆಂದೇ ಮೀನುಗಾರ ಸಮುದಾಯದವರನ್ನು ಭೇಟಿಯಾಗುತ್ತಿದ್ದೇನೆ. ಸಮಸ್ತ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಸಂಕಲ್ಪಿಸಿದ್ದೇನೆ. ಮೀನುಗಾರಿಕೆಯನ್ನು ಪ್ರತ್ಯಕ್ಷ, ಪರೋಕ್ಷವಾಗಿ ಅವಲಂಬಿಸಿರುವವರ ಪರ ದನಿ ಎತ್ತಬೇಕಾಗಿದೆ. ಮೀನುಗಾರ ಮಹಿಳೆಯರಿಗೆ ಸರಕಾರದ ಸೌಲಭ್ಯ ಒದಗಿಸಲು ಕೂಡ ಪ್ರಾಶಸ್ತ್ಯ ನೀಡುತ್ತೇನೆ. ಇದಕ್ಕೆ ಮೋದಿಯವರ ನೇತೃತ್ವದ ಸರಕಾರ ಬೇಕು. ಆ ಸರಕಾರದಲ್ಲಿ ನಾನೂ ಒಬ್ಬಳು ಪ್ರತಿನಿಧಿಯಾಗಿ ಈ ಭಾಗದವರ ಧ್ವನಿಯಾಗುವಂತೆ ಮಾಡಬೇಕು ಎಂದು ಶೋಭಾ ಮನವಿ ಮಾಡಿದರು.

ನಾಡದೋಣಿ - ಹೆಚ್ಚಿನ ಸೌಲಭ್ಯ

ನಾಡದೋಣಿ ಮೀನುಗಾರರಿಗೂ ಹೆಚ್ಚಿನ ಸೌಲಭ್ಯ ಒದಗಿಸಿ ಅವರಿಗೂ ಉದ್ಯಮ ಲಾಭದಾಯಕವಾಗುವಂತೆ ಮಾಡಬೇಕು ಎಂಬ ನನ್ನ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ. ಮೀನುಗಾರರ ಯಾವುದೇ ಒಂದು ವಿಭಾಗವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಶೋಭಾ ಸ್ಪಷ್ಟಪಡಿಸಿದರು. ಮೀನುಗಾರರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ 'ಎಂಪೆಡ' (ಮೀನುಗಾರಿಕಾ ಸಮುದ್ರೋತ್ಪನ್ನ ಅಭಿವೃದ್ಧಿ ನಿಗಮ) ನೀಡಿರುವ ವರದಿಯಲ್ಲಿನ ಉತ್ತಮ ಅಂಶಗಳನ್ನು ಜಾರಿಗೆ ತರಲು ಕಟಿಬದ್ಧಳಾಗಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮೀನುಗಾರರ ವೇದಿಕೆಯ ಸಂಚಾಲಕ ಕಿಶೋರ್‌, ರಾಜೇಶ್‌ ಕಾವೇರಿ, ಯಶ್‌ಪಾಲ್‌ ಸುವರ್ಣ, ತಾ.ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ, ಗೀತಾಂಜಲಿ ಸುವರ್ಣ, ಮಾಲಿನಿ ಸತೀಶ್‌, ಸಂಪಾವತಿ, ಕುತ್ಯಾರು ನವೀನ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com