ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತ ಧರ್ಮದ ಅವಹೇಳನ: ಎಸ್ಪಿಗೆ ಮನವಿ

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತ ಧರ್ಮವನ್ನು ಅವಹೇಳನ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿ ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ ಉಡುಪಿ ಶಾಖೆಯ ಪದಾಧಿಕಾರಿಗಳು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು. 

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಸಾಮಾಜಿಕ ಜಾಲತಾಣವಾದ ಫೇಸ್ ಬುಕ್‌ನಲ್ಲಿ ಕ್ರೈಸ್ತರ ಆರಾಧ್ಯ ದೇವರಾದ ಪ್ರಭು ಯೇಸು ಹಾಗೂ ಮಾತೆ ಮರಿಯಮ್ಮನವರ ಚಿತ್ರಕ್ಕೆ ರಾಜಕೀಯ ವ್ಯಕ್ತಿಗಳಾದ ಸೋನಿಯಾ ಗಾಂಧಿ ಹಾಗೂಅರವಿಂದ ಕೇಜ್ರಿವಾಲ್ ಮುಖವನ್ನು ಅಳವಡಿಸಿ ಕ್ರೈಸ್ತ ಸಮುದಾಯಕ್ಕೆ ಅಪಚಾರ ಮಾಡಿ ಧಾರ್ಮಿಕ ನಿಂದನೆ ಎಸಗಿ ಸಾಮಾಜಿಕ ಸಾಮರಸ್ಯ ಹಾಳುಗಡೆವಿರುವುದು ಖಂಡನೀಯ. ಇಂತಹ ಅನೇಕ ಅಪರಾಧ ಕೃತ್ಯಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಂಡುಬರುತ್ತಿದ್ದು, ಈ ಕೃತ್ಯಗಳು ಜಾತ್ಯತೀತ ಮೌಲ್ಯಗಳು ಹಾಗೂ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. 

ಇಂತಹ ದುಷ್ಕೃತ್ಯ ಎಸಗಿದವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. 

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಪ್ರತಿನಿಧಿ ಫಾ. ಹೆನ್ರಿ ಮಸ್ಕರೇನಸ್, ಸಂಘಟನೆಯ ನಾಯಕರಾದ ಲೂಯಿಸ್ ಲೋಬೊ, ಡೇವಿಡ್ ಡಿಸೋಜ, ಜಿತೇಂದ್ರ ಫುರ್ಟಾಡೊ, ಮೆಲ್ವಿನ್ ಡಿಸೋಜ, ಮೆಲ್ವಿನ್ ಆರಾನ್ಹಾ, ಬೊನಿಫಾಸ್ ಡಿಸೋಜ, ಸುನಿಲ್ ಕಾಬ್ರಾಲ್, ಸ್ಟೀವನ್ ಕುಲಾಸೊ, ವಿಲ್ಸನ್ ರೊಡ್ರಿಗಸ್ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com