ಬಡವ, ಶ್ರೀಮಂತ ಅಂತರದಿಂದ ಸಾಮರಸ್ಯ: ಅದಮಾರು ಶ್ರೀ

ಕುಂದಾಪುರ: ಮನುಷ್ಯನ ಎಲ್ಲ ಬೆರಳುಗಳು ಸಮಾನವಾಗಿ ಇದ್ದಿದ್ದರೆ ಎಲ್ಲೊ ಒಂದು ಕಡೆ ಸಮಸ್ಯೆಯಾಗಬಹುದು ಎಂಬ ಚಿಂತನೆಯಿಂದ ಭಗವಂತನು ಬೆರಳಿನಲ್ಲಿ ಏರುಪೇರುಗಳನ್ನಿಟ್ಟು ದೇಹಕ್ಕೆ ಸಾಮರಸ್ಯ ನೀಡಿದ್ದಾನೆ. ಹಾಗೆಯೇ ಸಮಾಜದಲ್ಲಿಯೂ ಕೂಡ ಶ್ರೀಮಂತ ಮತ್ತು ಬಡವನೆಂಬ ಅಂತರವಿಟ್ಟು ದೇಶದ ಸಾಮರಸ್ಯ ಕಾಪಾಡಿದ್ದಾನೆ ಎಂದು ಉಡುಪಿ ಅದಮಾರು ಮಠಾೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು. 

ಕುಂಭಾಸಿ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದ ವಿಶ್ವೇಶ್ವರ ಯಜ್ಞ ಮಂಟಪದ ಸಭಾಭವನದಲ್ಲಿ ದೇವಳದ ವತಿಯಿಂದ 2013-14ನೇ ಸಾಲಿನ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. 

ಆರ್ಥಿಕವಾಗಿ ಹಿಂದುಳಿದ ದೇವಸ್ಥಾನಗಳಿಗೆ ನೆರವು ನೀಡುವ ಮೂಲಕ ಆನೆಗುಡ್ಡೆ ದೇವಸ್ಥಾನ ಸಾಮರಸ್ಯಕ್ಕೆ ನಾಂದಿ ಹಾಡಿದೆ. ಸಂಪತ್ತನ್ನು ಕೇವಲ ಕೂಡಿಟ್ಟರೆ ಅದಕ್ಕೆ ಮುಳ್ಳಿನ ಬೇಲಿ ಹಾಕಬೇಕು. ಅದರೆ ಸಂಪತ್ತನ್ನು ಸದ್ವಿನಿಯೋಗಕ್ಕೆ ಬಳಸಿದರೇ ಯಾವ ಬೇಲಿಯೂ ಜತೆಗೆ ಯಾರ ಬೇಲಿಯ ಅವಶ್ಯಕತೆ ಇಲ್ಲ ಎಂದರು. 

ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಮಾತನಾಡಿ, ಈಗಾಗಲೇ ದೇವಳದ ವತಿಯಿಂದ 2.75 ಕೋಟಿ ಅನುದಾನವನ್ನು ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ವೈದ್ಯಕೀಯ, ಯಕ್ಷಗಾನ ಕೇಂದ್ರಗಳು ಮತ್ತು ಭಜನಾ ಮಂದಿರಗಳ ಅಭಿವೃದ್ಧಿಗೆ ನೀಡಲಾಗಿದೆ. ಈ ಸಾಲಿನಲ್ಲಿ ಸುಮಾರು 222 ಫಲನುಭವಿಗಳಿಗೆ 20 ಲಕ್ಷ ವಿತರಿಸಲಾಗಿದೆ ಎಂದರು. 

ಅನುವಂಶಿಕ ಧರ್ಮದರ್ಶಿ ಕೆ. ಲಕ್ಷ್ಮೀನಾರಾಯಣ ಉಪಾಧ್ಯಾಯ, ಅನುವಂಶಿಕ ಪರ್ಯಾಯ ಅರ್ಚಕ ಕೆ. ಲಕ್ಷ್ಮೀನಾರಾಯಣ ಉಪಾಧ್ಯಾಯ, ಕೆ. ಶ್ರೀನಿವಾಸ ಉಪಾಧ್ಯಾಯ, ಕೆ. ವರದರಾಜ ಉಪಾಧ್ಯಾಯ ಉಪಸ್ಥಿತರಿದ್ದರು. ಜಯಂತಿ ಉಪಾಧ್ಯಾಯ ಪ್ರಾರ್ಥಿಸಿದರು. ಅನುವಂಶಿಕ ಧರ್ಮದರ್ಶಿ ಕೆ. ರಮಣ ಉಪಾಧ್ಯಾಯ ಸ್ವಾಗತಿಸಿದರು. ವ್ಯವಸ್ಥಾಪಕ ಆನಂದರಾಮ ಊರಾಳ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವನಾಥ ಐತಾಳ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com