ಧರ್ಮದ ಅಂತರಾಳದಲ್ಲಿ ಸುಖ ಅಡಗಿದೆ: ಕನ್ಯಾಡಿಶ್ರೀ

ಶಿರೂರು: ಇಂದಿನ ಮನುಷ್ಯ ಹಣದ ವ್ಯಾಮೋಹಕ್ಕೆ ಬಲಿಯಾಗಿ ಸಮಾಜಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು, ಯಾಂತ್ರಿಕ ಪ್ರಪಂಚದಲ್ಲಿ ಸುಖವಿದೆ ಎನ್ನುವ ಭಾವನೆ ಹೊಂದಿದ್ದಾನೆ. ಮನುಷ್ಯನ ಮನಸ್ಸು ಒಂದೆಡೆ ಲೌಕಿಕ ಹಾಗೂ ಇನ್ನೊಂದೆಡೆ ಅಲೌಕಿಕ ವಿಚಾರಧಾರೆಯೆಡೆಗೆ ವಾಲುತ್ತಿದ್ದು ಚಂಚಲತೆ ಹೊಂದಿದೆ. ಮನಸ್ಸಿಗೆ ಲೌಕಿಕವಾಗಿ ಹಾಗೂ ಪಾರಮಾರ್ಥಿಕವಾಗಿ ಹಿತ ನೀಡುವುದೇ ಧರ್ಮವಾಗಿದ್ದು, ಇದರ ಅಂತರಾಳದಲ್ಲಿ ಸುಖ ಅಡಗಿರುತ್ತದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಶಿರೂರು ಗೊರಟೆ ಕ್ರಾಸ್‌ನಲ್ಲಿ ಶ್ರೀನಾಗ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲೋತ್ಸವ ಹಾಗೂ ನಾಗಶ್ರೀ ದತ್ತಿನಿಧಿ ಪ್ರತಿಷ್ಠನಾನದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. 

ಭಗವಂತನನ್ನು ಕಾಣಲು ಋಷಿಮುನಿಗಳು ಅನೇಕ ಮಾರ್ಗಗಳನ್ನು ತಿಳಿಸಿದ್ದು, ಇದರ ಮೂಲ ಸೆಲೆ ಭಕ್ತಿ. ಆ ಮೂಲಕ ಭಗವಂತನನ್ನು ಕಾಣಲು ಸಾಧ್ಯ. ಜ್ಞಾನಯೋಗ, ರಾಜಯೋಗ, ಭಕ್ತಿಯೋಗ ಹಾಗೂ ಕರ್ಮಯೋಗಗಳಿಂದಲೂ ಅವನನ್ನು ಕಾಣಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಏಕಾಗ್ರತೆ ಹಾಗೂ ಭಕ್ತಿಯಿಂದ ಅವನ ಅನೂಭೂತಿ ಪಡೆಯಬಹುದು. ಮನುಷ್ಯ ಶ್ರೇಷ್ಠ ನೀರಾಗಿ ತೀರ್ಥಗಳಾಗುವುದರ ಮೂಲಕ ಸಮಾಜದ ಶಕ್ತಿಯಾಗಬೇಕೆ ಹೊರತು, ಕೊಳಚೆ ನೀರಾಗಿ ಸಮಾಜಘಾತುಕ ಶಕ್ತಿಗಳಾಗಬಾರದು ಎಂದರು. 

ಮುಂಬಯಿ ಉದ್ಯಮಿ ಸುರೇಶ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹೊರನಾಡು ಸಾಹಿತಿ ಬಾಬು ಶಿವ ಪೂಜಾರಿ, ಭಟ್ಕಳ ನಾಮಧಾರಿ ಸಂಘದ ಅಧ್ಯಕ್ಷ ಡಿ.ಬಿ. ನಾಯ್ಕ, ಕುಂದಾಪುರ ಬಿಲ್ಲವ ಸಮಾಜ ಸಂಘದ ಗೌರವ ಕಾರ್ಯದರ್ಶಿ ಸೂರ‌್ಯ ಎಸ್. ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯೆ ಕಲ್ಪನಾ ಭಾಸ್ಕರ, ಶಿರೂರು ಉದ್ಯಮಿ ಪ್ರಕಾಶ ಪ್ರಭು, ಮೇಸ್ತ ಸಮಾಜದ ಹಿರಿಯ ನಾಗೇಶ ಮೇಸ್ತ, ಕಾಳಿಕಾಂಬ ದೇವಸ್ಥಾನದ ಮೊಕ್ತೇಸರ ಸದಾನಂದ ಎ. ಆಚಾರ್ಯ, ಮುಂಬಯಿ ಉದ್ಯಮಿ ಗೋವಿಂದ ಪೂಜಾರಿ ಬಿಜೂರು, ಬೈಂದೂರು ವಲಯ ಬಿಲ್ಲವ ಸಂಘದ ಅಧ್ಯಕ್ಷ ಶ್ರೀನಿವಾಸ ಮಾಸ್ತರ್ ಉಬ್ಜೇರಿ ಉಪಸ್ಥಿತರಿದ್ದರು. 

ಧಾರ್ಮಿಕ ಮಾರ್ಗದರ್ಶಕ ನಾಗೇಶ್ವರ ಮಂಜರು, ನಿವೃತ್ತ ಪ್ರಿನ್ಸಿಪಾಲ್ ವಾಮನ್ ಇಡ್ಯಾ, ಮುಂಬಯಿ ಉದ್ಯಮಿ ವಿಠಲ ಮೇಸ್ತ ಶಿರೂರು, ಯಕ್ಷಗಾನ ಭಾಗವತ ಸುರೇಶ ಶೆಟ್ಟಿ ಎಸ್., ಕಲಾವಿದರಾದ ಈಶ್ವರ್ ನಾಯ್ಕ ಮಂಕಿ, ಶಂಕರ ಹೆಗ್ಡೆ ನೀಲ್ಗೋಡು, ಹಾಸ್ಯ ಕಲಾವಿದ ರಮೇಶ ಭಂಡಾರಿ ಮುರೂರು, ಚೆಂಡೆ ವಾದಕ ಶಿವಾನಂದ ಕೋಟ, ಮದ್ದಳೆ ವಾದಕ ನಾಗರಾಜ ಭಂಡಾರಿ ಹಿರೆಬೈಲ್ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರಮಟ್ಟದ ಕ್ರೀಡಾಪಟು ಧನಂಜಯ ಮೊಗೇರ, ರಾಜ್ಯಮಟ್ಟದ ವಿಕಲಚೇತನ ಕ್ರೀಡಾಪಟು ರಮ್ಯಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಂಜುನಾಥ ಬಿಲ್ಲವ ಪ್ರಾಸ್ತಾವಿಕ ಮಾತನಾಡಿದರು. ಗೋವರ್ಧನ್ ನಾಯ್ಕ ಸ್ವಾಗತಿಸಿದರು. ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com