ಯುಪಿಎ, ರಾಜ್ಯ ಸರಕಾರದ ಸಾಧನೆಯೇ ಶ್ರೀರಕ್ಷೆ: ಸೊರಕೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಗೆಲುವಿಗೆ ಕೇಂದ್ರದ ಯುಪಿಎ ಸರಕಾರ ಹಾಗೂ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಸಾಧನೆಗಳು ಶ್ರೀರಕ್ಷೆಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಕೆಪಿಸಿಸಿಯು ಪ್ರತಿ ವಿಧಾನಸಭೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಪಕ್ಷದ ಕಾರ್ಯಕರ್ತರ ಪಾದಯಾತ್ರೆಗೆ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವ ಮುಂಚೆ ವಾಗ್ದಾನ ಮಾಡಿದ 168 ಆಶ್ವಾಸನೆಗಳಲ್ಲಿ ಈಗಾಗಲೇ 95 ಭರವಸೆಗಳನ್ನು ಈಡೇರಿಸಿದೆ. ಸ್ಪರ್ಧಾ ಕಣದಲ್ಲಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು 5 ವರ್ಷ ಪೂರ್ಣಾವಧಿಗಾಗಿ ಚುನಾಯಿಸಲು ಕೇಂದ್ರದ ನಾಯಕರಾ ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಉಡುಪಿ-ಚಿಕ್ಕಮಗಳೂರು ಸಂಸತ್ ಕ್ಷೇತ್ರದಾದ್ಯಂತ ಪ್ರವಾಸ ನಡೆಸಿ ಮತಯಾಚನೆ ನಡೆಸಲಿದೆ ಎಂದರು. 

ಬಿಜೆಪಿಯ ಶೋಭಾ ಕರಂದ್ಲಾಜೆ ಅವರ ಮೇಲೆ ಟೀಕಾಪ್ರಹಾರ ನಡೆಸಿದ ಅವರು, ಈ ಕ್ಷೇತ್ರಕ್ಕೂ, ಅವರಿಗೂ ಯಾವ ಸಂಬಂಧವಿದೆ? ಮಹಿಳೆಯರ ಧ್ವನಿಯಾಗುವೆ ಎನ್ನುವ ಅವರಿಗೆ ಅವರದ್ದೇ ಸರಕಾರದ ಅವಧಿಯಲ್ಲಿ ಪಬ್ ದಾಳಿ, ಹೋಂ ಸ್ಟೇ ದಾಳಿ, ಮಾಜಿ ಶಾಸಕರ ಪತ್ನಿ ಅಸಹಜ ಸಾವು, ಸೈಂಟ್ ಮೆರೀಸ್ ನಂಗಾನಾಚ್ ಮೊದಲಾದ ಪ್ರಕರಣಗಳು ನಡೆದಾಗ ಮಹಿಳೆಯರ ರಕ್ಷಣೆ ಬಗ್ಗೆ ನೆನಪಾಗಲಿಲ್ಲವೇ? ಚುನಾವಣೆ ಸಂದರ್ಭ ಮಾತ್ರ ನೆನಪಾದರೇ ಎಂದು ಕುಟುಕಿದರು. 

ಶಾಸಕ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸೆಲಿನಾ ಕರ್ಕಡ, ವೆರೋನಿಕಾ ಕರ್ನೇಲಿಯೊ, ಡಾ. ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ, ರಾಜೇಶ್ ಶೆಟ್ಟಿ ಬಿರ್ತಿ, ದಿವಾಕರ ಕುಂದರ್, ಜನಾರ್ದನ ಭಂಡಾರ್ಕರ್, ಕೃಷ್ಣರಾಜ ಸರಳಾಯ, ವಿಕಾಸ್ ಶೆಟ್ಟಿ. ನರಸಿಂಹ ಮೂರ್ತಿ, ಕೇಶವ ಕುಂದರ್, ಜನಾರ್ದನ ತೋನ್ಸೆ, ಎಂ.ಎ. ಗಫೂರ್ ಉಪಸ್ಥಿತರಿದ್ದರು. ಪಾದಯಾತ್ರೆ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಿಂದ ಹೊರಟು ಬನ್ಮಂಜೆ, ಸಿಟಿ ಬಸ್ ನಿಲ್ದಾಣ, ಕವಿ ಮುದ್ದಣ ಮಾರ್ಗವಾಗಿ ವಾಪಸ್ ಕಾಂಗ್ರೆಸ್ ಕಚೇರಿಗೆ ತಲುಪಿತು. 

ಕಾಪುವಿನಲ್ಲಿ ಪಾದಯಾತ್ರೆ: ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ರಾಜ್ಯದಲ್ಲಿ ಮಾಡಿದ ಘನ ಕೆಲಸಗಳನ್ನು ಕೇಂದ್ರದಲ್ಲೂ ಮಾಡಲು ಹೊರಟಿದೆ. ದೇಶಕ್ಕಾಗಿ ಮತ ಕೊಡಿ ಎಂದು ಅಂಗಲಾಜುವ ಬಿಜೆಪಿ ಈ ಹಿಂದೆ ಕರ್ನಾಟಕದಲ್ಲೂ ಇದೇ ಮಾತನ್ನು ಹೇಳಿ ಜನರ ದಿಕ್ಕು ತಪ್ಪಿಸಿ ಅಧಿಕಾರ ಪಡೆದಿತ್ತು. ನಂತರ ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ಮುಖ್ಯಮಂತ್ರಿ ಸಹಿತ ಅನೇಕ ಸಚಿವರು ಜೈಲಿನ ರುಚಿ ಕಂಡಿದ್ದರು. ಈಗ ಮೋದಿ ಹೆಸರು ಹೇಳಿಕೊಂಡು ಕೇಂದ್ರದಲ್ಲೂ ಇಂತಹ ಸಾಧನೆಯನ್ನು ಪುನರಾವರ್ತಿಸುವ ಕನಸು ಕಾಣುತ್ತಿದ್ದಾರೆ. ಆದರೆ ಮತದಾರರು ಅದಕ್ಕೆ ಆಸ್ಪದ ಕೊಡುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಕಾಪು ಉಳಿಯಾರಗೋಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತ ನಿರ್ಮಾಣ ಯಾತ್ರಾ ಪಾದಯಾತ್ರೆಯಲ್ಲಿ ಮಾತನಾಡಿದರು. 

ಕೇಂದ್ರದ ಯುಪಿಎ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಹೇಳಿ ಜಾಗೃತಿ ಮೂಡಿಸುವ ಉದ್ದೇಶದ ಪಾದಯಾತ್ರೆಯಲ್ಲಿ ತೆಂಕ ಎರ್ಮಾಳಿನಿಂದ ಉಳಿಯಾರಗೋಳಿವರೆಗೆ ಕಾರ್ಯಕರ್ತರೊಂದಿಗೆ ಅವರು ಹೆಜ್ಜೆ ಹಾಕಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com