ರೈತರೊಂದಿಗೆ ಯಡಿಯೂರಪ್ಪ ಸಹಭೋಜನ, ಸಂವಾದ

ಉಡುಪಿ: ಉಪ್ಪೂರಿಗೆ ಬುಧವಾರ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತರೊಂದಿಗೆ ಸಹಭೋಜನ ಮಾಡುತ್ತಾ, ಊರಿನ ಪ್ರಮುಖರೊಂದಿಗೆ ಸಂವಾದ ನಡೆಸಿದರು. ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರಕಾರ ಜನಸಾಮಾನ್ಯರು ಮತ್ತು ರೈತರ ಬದುಕಿನೊಂದಿಗೆ ಕಳೆದ 60 ವರ್ಷಗಳಿಂದ ಚೆಲ್ಲಾಟ ಮಾಡುತ್ತಾ ಬಂದಿದ್ದು, ಅಂದು ಗರೀಬಿ ಹಠಾವೋ ಘೋಷಣೆ ಮಾಡಿದರು. ಆದರೆ ಬಡತನ ನಿವಾರಣೆ ಬದಲು ಬಡತನದ ಸಂಖ್ಯೆ, ಹಸಿವಿನಿಂದ ಬಳಲುವವರ ಸಂಖ್ಯೆ ಇನ್ನಷ್ಟು ವೃದ್ಧಿ ಮಾಡಿದರು, ಜೈ ಕಿಸಾನ್, ಜೈ ಜವಾನ್ ಘೋಷಣೆ ಮಾಡಿದರು. ಆದರೆ ದೇಶದಲ್ಲಿ ಪ್ರತಿ ಗಂಟೆಗೊಮ್ಮೆ ರೈತ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಈ ದೇಶವನ್ನು ತಳ್ಳಿದರು ಎಂದು ಯಡಿಯೂರಪ್ಪ ಹೇಳಿದರು. 

ವಿದ್ಯಾವಂತ ಯುವಕರಿಗೆ ಸರಿಯಾದ ಉದ್ಯೋಗ ದೊರಕಿಸಿಕೊಡುವಲ್ಲಿ ಸರಕಾರ ವಿಫಲವಾಗಿ ನಿರುದ್ಯೋಗದ ಕೂಪಕ್ಕೆ ತಳ್ಳಿದರು. ಆದರೆ ಚುನಾವಣೆ ಸಂದರ್ಭ ಪೊಳ್ಳು ಭರವಸೆ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿಗೊಳಿಸಬೇಕು. ಹೀಗೆ ರಾಜ್ಯದ ಜನ ಸಾಮಾನ್ಯರೊಂದಿಗೆ ಚೆಲ್ಲಾಟವಾಡುತ್ತಾ, ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂದು ಆರೋಪಿಸಿದರು. 

ಮುಖ್ಯಮಂತ್ರಿಯಾಗಿದ್ದಾಗ, ಈ ರಾಜ್ಯದ ಎಲ್ಲ ಜನರಿಗೆ ಅನುಕೂಲವಾಗುವಂತೆ, ಅವರ ಜೀವನ ಸುಧಾರಣೆಗಾಗಿ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದು, ಮಕ್ಕಳ ಪೋಷಣೆಗಾಗಿ, ಬಾಣಂತಿ ಯರ ಪೋಷಣೆಗಾಗಿ, ಕಿಟ್ ಹೆರಿಗೆ ಭತ್ಯೆ, ಭಾಗ್ಯಲಕ್ಷ್ಮೀ ಬಾಂಡ್, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲ ಮಾಸಾಶನ ಹೆಚ್ಚಿಸಿದ್ದು, ಯುವಕರಿಗಾಗಿ ಕೌಶಲ್ಯ ಅಭಿವೃದ್ಧಿ ಯೋಜನೆ ಹಾಗೂ ಉದ್ಯೋಗ ನೀಡಿಕೆ, ರೈತರಿಗೆ ಪ್ರತ್ಯೇಕ ಕೃಷಿ ಬಜೆಟ್ ತಯಾರಿಸಿ ನೆರವಿಗೆ ಬಂದದ್ದು, 25 ಸಾವಿರ ರೂ.ವರೆಗಿನ ಸಹಕಾರಿ ಸಂಘದ ಸಾಲ ಮನ್ನಾ ಮಾಡಿದ್ದು 1 ಲಕ್ಷ ರೂ.ವರೆಗಿನ ಸಾಲ ಶೂನ್ಯ ಬಡ್ಡಿ ದರದಲ್ಲಿ ನೀಡಿಕೆ, 2 ಲಕ್ಷದವರೆಗೆ ಶೇ. 3ರಲ್ಲಿ ನೀಡುವ ಕಾರ್ಯಕ್ರಮ, ಸಾವಯವ ಕೃಷಿಗೆ ಒತ್ತು, ಭೂ ಚೇತನ, ಸುವರ್ಣ ಭೂಮಿ ಯೋಜನೆಯಲ್ಲಿ ರೈತರ ಭೂ ಅಭಿವೃದ್ಧಿಗಾಗಿ ಬ್ಯಾಂಕ್ ಖಾತೆಗೆ ಹಣ ಜಮೆ ಒದಗಿಸಿರುವುದು, ಎಲ್ಲ ಸಮಾಜ ಹಾಗೂ ವರ್ಗಗಳ ಮಠ ಮಂದಿರಗಳಿಗೂ ಎಲ್ಲ ವರ್ಗದವರಿಗೂ ಸಮಾನವಾಗಿ ಹಣ ನೀಡಿದ್ದೆ ಎಂದರು. 

ಜಿಲ್ಲಾ ರೈತ ಮೋರ್ಚಾ ಮುಖಂಡ ರಾಘವೇಂದ್ರ ಉಪ್ಪೂರು, ಪರಮೇಶ್ವರ ಮಧ್ಯಸ್ಥ, ಅಜಿತ್ ಶೆಟ್ಟಿ, ಅವಿನಾಶ್ ಶೆಟ್ಟಿ, ತುಕಾರಾಮ ಪೂಜಾರಿ, ಗಾಯತ್ರಿ ದೇವಿ, ರೇಣುಕಾ, ಸುಶೀಲ ಜಾತಬೆಟ್ಟು, ಅಶ್ವಿನ್ ರೋಚ್, ಪ್ರವೀಣ್ ಕುಮಾರ್, ಭಾಸ್ಕರ ಸೇರೆಗಾರ್, ರಾಜು ಪೂಜಾರಿ, ವಿಜಯ ಆಚಾರ್ಯ, ಗಣಪತಿ ಆಚಾರ್ಯ, ಸುಬ್ರಹ್ಮಣ್ಯ ಭಟ್, ಶ್ರೀಶ ಭಟ್, ಸತೀಶ ಪೂಜಾರಿ, ಆನಂದ ಸೇರ್ವೆಗಾರ್, ದೇವದಾಸ್ ಉಪ್ಪೂರು, ರೇಖಾ ಜಿ. ಮರಾಠೆ, ಮಹೇಶ ಕೋಟ್ಯಾನ್, ಪ್ರದೀಪ ಮಧ್ಯಸ್ಥ, ಗುರುರಾಜ ಅಡಿಗ, ಭಾಸ್ಕರ ಅಡಿಗ, ಸದಾನಂದ ರಾವ್, ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com